ಬ್ರಿಟನ್‌ನ ಪ್ರಸಿದ್ಧ ಪ್ರಸಾರ ಸಂಸ್ಥೆ ಬಿಬಿಸಿ ಸುದ್ದಿ ವಾಹಿನಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ಎಡಿಟ್ ಮಾಡಿ ತೋರಿಸಿದ್ದಕ್ಕೆ ಮತ್ತು ಪಕ್ಷಪಾತದ ಆರೋಪದ ಕಾರಣಕ್ಕೆ ಸಂಸ್ಥೆಯ ಮಹಾ ನಿರ್ದೇಶಕ ಟಿಮ್ ಡೇವಿ ಹಾಗೂ ಸುದ್ದಿವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೆಬೋರಾ ಟರ್ನೆಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಬಿಸಿ ತಯಾರಿಸಿದ ಒಂದು ಡಾಕ್ಯುಮೆಂಟರಿಯಲ್ಲಿ, ಡೊನಾಲ್ಡ್ ಟ್ರಂಪ್ ಅವರ ಭಾಷಣದ ಎರಡು ಬೇರೆ ಬೇರೆ ಭಾಗಗಳನ್ನು ಸೇರಿಸಿ, ಅವರು 2021ರ ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ ಗಲಭೆಗೆ ಜನರನ್ನು ಪ್ರಚೋದಿಸಿದಂತೆ ತೋರಿಸಲಾಗಿದೆ ಎಂದು ಟೀಕೆಗಳು ಕೇಳಿಬಂದಿತ್ತು.
ಟಿಮ್ ಡೇವಿ ರಾಜೀನಾಮೆ ಘೋಷಿಸಿ, “ಈ ನಿರ್ಧಾರ ನನ್ನದಾಗಿದೆ. ಕೆಲಸದ ಒತ್ತಡವೂ ಹೆಚ್ಚಾಗಿದೆ, ಹೊಸ ವ್ಯಕ್ತಿಗೆ ಅವಕಾಶ ಕೊಡಲು ಬಯಸುತ್ತೇನೆ” ಎಂದಿದ್ದಾರೆ. ಹಾಗೆಯೇ ಡೆಬೋರಾ ಟರ್ನೆಸ್ ಸಹ “ಸಂಸ್ಥೆಯ ವಿಶ್ವಾಸ ಮತ್ತು ನಿಷ್ಠೆ ಕಾಪಾಡುವುದು ಮುಖ್ಯ” ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ಈ ತಪ್ಪು ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಬಿಬಿಸಿಯ ಮಾಜಿ ಸಂಪಾದನಾ ಸಲಹೆಗಾರ ಮೈಕಲ್ ಪ್ರೆಸ್‌ಕಾಟ್ ಅವರ ದಾಖಲೆಗಳ ಮೂಲಕ ಬಯಲಾಗಿತ್ತು. ಈ ದಾಖಲೆಯಲ್ಲಿ ಟ್ರಂಪ್ ವಿಷಯದ ಜೊತೆಗೆ ಇಸ್ರೇಲ್-ಹಮಾಸ್ ಯುದ್ಧ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವಿಷಯಗಳಲ್ಲಿಯೂ ಬಿಬಿಸಿಯ ಪಕ್ಷಪಾತದ ತಪ್ಪುಗಳನ್ನು ಪಟ್ಟಿ ಮಾಡಲಾಗಿತ್ತು.
ಟ್ರಂಪ್‌ರ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೆವಿಟ್ ಶುಕ್ರವಾರ ಪ್ರಕಟವಾದ ಸಂದರ್ಶನದಲ್ಲಿ ಬಿಬಿಸಿಯನ್ನು ಶೇ. 100 ನಕಲಿ ಸುದ್ದಿ ಹಾಗೂ ಪ್ರಚಾರ ಯಂತ್ರ ಎಂದು ಟೀಕಿಸಿದ್ದರು.





