ಬೊಲಿವಿಯಾ ರಾಜಧಾನಿ ಬಳಿ ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತಕ್ಕೀಡಾಗಿದ್ದು, ಹೆದ್ದಾರಿಯಲ್ಲಿದ್ದ ಸುಮಾರು 12ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದೆ. ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ, ಹಲವರಿಗೆ ಗಾಯಗಳಾಗಿವೆ.
ಮೃತರು ವಿಮಾನದಲ್ಲಿದ್ದರೋ ಅಥವಾ ಕಾರುಗಳಲ್ಲಿದ್ದರೋ ಎಂಬುದನ್ನು ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಸ್ಪಷ್ಟಪಡಿಸಿಲ್ಲ. ವಿಮಾನ ಟೇಕ್ ಆಫ್ ಆಗುತ್ತಿದ್ದಾಗ ಅಪಘಾತವಾಗಿದೆಯೇ ಅಥವಾ ಲ್ಯಾಂಡ್ ಆಗುವಾಗ ಅಪಘಾತಕ್ಕೀಡಾಗಿದೆ ಎಂಬ ಸ್ಪಷ್ಟನೆಯೂ ಲಭಿಸಿಲ್ಲ.
ಇದನ್ನು ಓದಿದ್ದೀರಾ? 17 ಭಾರತೀಯ ಸಿಬ್ಬಂದಿಗಳಿದ್ದ ಇಸ್ರೇಲ್ ಮೂಲದ ಸರಕು ಹಡಗು ವಶಪಡಿಸಿಕೊಂಡ ಇರಾನ್
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳ ಪ್ರಕಾರ ವಿಮಾನವು ಲಾ ಪಾಜ್‌ಗೆ ಹೊಂದಿಕೊಂಡಿರುವ ಎಲ್ ಆಲ್ಟೊ ನಗರದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ಮೈದಾನದಲ್ಲಿ ನಿಂತಿದೆ. ವಿಮಾನದ ಅವಶೇಷಗಳು, ಕಾರುಗಳು ಧ್ವಂಸವಾಗಿದೆ. ಮೃತದೇಹಗಳು ರಸ್ತೆಯಲ್ಲಿ ಅಲ್ಲಲ್ಲಿ ಕಂಡುಬಂದಿದೆ. ಅಗ್ನಿಶಾಮಕ ದಳದವರು ವಿಮಾನಕ್ಕೆ ಹತ್ತಿದ ಬೆಂಕಿಯನ್ನು ನಂದಿಸಿದ್ದಾರೆ.
ಬೊಲಿವಿಯನ್ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ವಿಮಾನವು ಸೆಂಟ್ರಲ್ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ನೋಟುಗಳನ್ನು ಸಾಗಿಸುತ್ತಿತ್ತು. ಅಪಘಾತದ ಸ್ಥಳದಲ್ಲಿ ನೆಲದ ಮೇಲೆಲ್ಲ ನೋಟುಗಳು ಹರಡಿದ್ದವು. ಜನರು ಅದನ್ನು ಎತ್ತಿಕೊಳ್ಳಲು ಧಾವಿಸುತ್ತಿರುವುದೂ ಕಂಡುಬಂದಿದೆ. ಪೊಲೀಸರು ಜನರನ್ನು ತಡೆಯುವ ಯತ್ನ ಮಾಡಿದ್ದಾರೆ. ಸದ್ಯ ಟರ್ಮಿನಲ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.





