ಅಮೆರಿಕ ಮತ್ತು ಇಸ್ರೇಲ್ ಮೂಲದ ಸೈಬರ್ ಸೆಕ್ಯೂರಿಟಿ ಸಾಫ್ಟ್‌ವೇರ್‌ಗಳ ಬಳಕೆಯನ್ನು ನಿಲ್ಲಿಸುವಂತೆ ಚೀನಾ ಸರ್ಕಾರವು ತನ್ನ ದೇಶೀಯ ಕಂಪನಿಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಸೂಕ್ಷ್ಮ ದತ್ತಾಂಶಗಳು ವಿದೇಶಗಳಿಗೆ ಸೋರಿಕೆಯಾಗಬಹುದು ಎಂಬ ಆತಂಕದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕ ಸ್ವಾವಲಂಬನೆಗೆ ಒತ್ತು ನೀಡುತ್ತಿರುವ ಚೀನಾ, ಈಗ ಸೈಬರ್ ಭದ್ರತೆಯ ಹೆಸರಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ಮೂಲದ ಪ್ರಮುಖ ಸೈಬರ್ ಸೆಕ್ಯೂರಿಟಿ ಸಾಫ್ಟ್‌ವೇರ್‌ಗಳನ್ನು ಬಳಸದಂತೆ ತನ್ನ ದೇಶೀಯ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಜನವರಿ 14ರಂದು ಚೀನಾದ ಅಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ವಿದೇಶಿ ಕಂಪನಿಗಳ ಸಾಫ್ಟ್‌ವೇರ್‌ಗಳನ್ನು ಗುರಿಯಾಗಿಸಿಕೊಂಡು ನೋಟಿಸ್ ನೀಡಲಾಗಿದೆ. ಚೀನಾದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ.
ಚೀನಾ ಪಟ್ಟಿಯಲ್ಲಿರುವ ಕೆಲವು ಪ್ರಮುಖ ವಿದೇಶಿ ತಂತ್ರಜ್ಞಾನ ಕಂಪನಿಗಳೆಂದರೆ, ಅಮೆರಿಕ ಮೂಲದವಾದ ಬ್ರಾಡ್‌ಕಾಮ್ ಒಡೆತನದ VMware, Palo Alto Networks, ಮತ್ತು Fortinet. ಇಸ್ರೇಲ್ ಮೂಲದ Check Point Software Technologies ಸೇರಿವೆ.
ಈ ಸಾಫ್ಟ್‌ವೇರ್‌ಗಳು ಚೀನಾದ ‘ಗೌಪ್ಯ ಮಾಹಿತಿಯನ್ನು ಸಂಗ್ರಹಿಸಿ ವಿದೇಶಕ್ಕೆ ರವಾನಿಸಬಹುದು’ ಮತ್ತು ಈ ಮೂಲಕ ವಿದೇಶಿ ಶಕ್ತಿಗಳು ಚೀನಾದ ಡೇಟಾವನ್ನು ಪ್ರವೇಶಿಸಬಹುದು ಎಂಬುದು ಅಲ್ಲಿನ ಅಧಿಕಾರಿಗಳ ಪ್ರಮುಖ ಆತಂಕವಾಗಿದೆ.
ಚೀನಾ ಕಳೆದ ಕೆಲವು ವರ್ಷಗಳಿಂದ ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಹವಣಿಸುತ್ತಿದೆ. ಈಗ ಈ ಅಭಿಯಾನವು ಕಂಪ್ಯೂಟರ್ ಉಪಕರಣಗಳು ಮತ್ತು ಸಾಫ್ಟ್‌ವೇರ್ ಕ್ಷೇತ್ರಕ್ಕೂ ವಿಸ್ತರಿಸಿದೆ. ಪಾಶ್ಚಿಮಾತ್ಯ ತಂತ್ರಜ್ಞಾನಗಳು ವಿದೇಶಿ ಹ್ಯಾಕರ್‌ಗಳಿಗೆ ಸುಲಭವಾಗಿ ಬಲಿಯಾಗಬಹುದು ಎಂಬ ಭಯವು ಚೀನಾವನ್ನು ಸ್ವದೇಶಿ ಪರ್ಯಾಯಗಳತ್ತ ಮುಖ ಮಾಡುವಂತೆ ಮಾಡಿದೆ.
ಈ ಲೇಖನ ಓದಿದ್ದೀರಾ?: ನಿರುದ್ಯೋಗ ವರ್ಷವಾಗಲಿದೆ 2026: AI ಪಿತಾಮಹ ಜೆಫ್ರಿ ಹಿಂಟನ್ ಎಚ್ಚರಿಕೆ!
ಇದು ಚೀನಾದ ಹಠಾತ್ ನಿರ್ಧಾರವೇನಲ್ಲ. ಈ ಹಿಂದೆಯೂ ಚೀನಾ ಇಂತಹ ಕ್ರಮಗಳನ್ನು ಕೈಗೊಂಡಿತ್ತು. ಅಕ್ಟೋಬರ್ 2014ರಲ್ಲಿ, ಭದ್ರತಾ ಕಾರಣ ನೀಡಿ ಸರ್ಕಾರಿ ಕಂಪ್ಯೂಟರ್‌ಗಳಿಂದ ಮೈಕ್ರೋಸಾಫ್ಟ್ ವಿಂಡೋಸ್ (Microsoft Windows) ಅನ್ನು ಹಂತ ಹಂತವಾಗಿ ತೆಗೆದುಹಾಕಲು ಚೀನಾ ಆದೇಶಿಸಿತ್ತು. ಅದಕ್ಕೂ ಮೊದಲು ವಿಂಡೋಸ್ 8ಅನ್ನು ನಿಷೇಧಿಸಲಾಗಿತ್ತು. ಜೊತೆಗೆ, ಸರ್ಕಾರಿ ಉದ್ದಿಮೆಗಳಲ್ಲಿ ಸ್ವದೇಶಿ ಆಪರೇಟಿಂಗ್ ಸಿಸ್ಟಮ್‌ಗಳ ಬಳಕೆಗೆ ಒತ್ತು ನೀಡಲಾಗಿತ್ತು.
ಈ ಬೆಳವಣಿಗೆಯು ಕೇವಲ ತಾಂತ್ರಿಕವಲ್ಲ, ಬದಲಾಗಿ ಅಮೆರಿಕ ಮತ್ತು ಚೀನಾ ನಡುವಿನ ತೀವ್ರಗೊಳ್ಳುತ್ತಿರುವ ಪೈಪೋಟಿಯ ಭಾಗವಾಗಿದೆ. ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿ ಚೀನಾದ ಬೆಳೆಯುತ್ತಿರುವ ಆರ್ಥಿಕ ಮತ್ತು ತಾಂತ್ರಿಕ ಪ್ರಭಾವವನ್ನು ಹತ್ತಿಕ್ಕಲು ವಾಷಿಂಗ್ ಟನ್ ಪ್ರಯತ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಚೀನಾ ತನ್ನ ತಾಂತ್ರಿಕ ಕೋಟೆಯನ್ನು ಭದ್ರಪಡಿಸಿಕೊಳ್ಳುತ್ತಿದೆ.
ಸದ್ಯಕ್ಕೆ ಚೀನಾದ ಸೈಬರ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಅಥವಾ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಈ ನಿರ್ಧಾರವು ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸುವುದು ಖಚಿತ. ಚೀನಾ ತನ್ನದೇ ಆದ ಸೈಬರ್ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವ ಮೂಲಕ ಪಾಶ್ಚಿಮಾತ್ಯ ದೇಶಗಳಿಗೆ ಸಡ್ಡು ಹೊಡೆಯುತ್ತಿದೆ.




