ಪಾಕಿಸ್ತಾನ ಪಡೆಗಳು ಮತ್ತು ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡುವೆ ಘರ್ಷಣೆ ನಡೆದಿದ್ದು, ಸುಮಾರು 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುನ್‌ಖ್ವಾದಲ್ಲಿ ಘಟನೆ ನಡೆದಿದೆ.
ಟಿಟಿಪಿ ಬಂಡುಕೋರರ ವಿರುದ್ಧ ಪಾಕಿಸ್ತಾನದ ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ, ಭಯೋತ್ಪಾದಕ ಸಂಘಟನೆಯ 17 ಮಂದಿಯನ್ನು ಹತ್ಯೆಗೈಯಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕರಕ್ ಜಿಲ್ಲೆಯ ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ಶಹಬಾಜ್ ಎಲಾಹಿ ಹೇಳುವಂತೆ; ಖೈಬರ್ ಪಖ್ತುನ್‌ಖ್ವಾ ಪ್ರದೇಶದಲ್ಲಿ ಟಿಟಿಪಿ ಮತ್ತು ಮುಲ್ಲಾ ನಜೀರ್ ಗುಂಪಿನೊಂದಿಗೆ ಸಂಬಂಧ ಹೊಂದಿರುವವರು ಇದದ್ದಾರೆಂದು ಖಚಿತ ಮಾಹಿತಿ ದೊರೆತಿತ್ತು. ಬಳಿಕ, ಗುಪ್ತಚರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಟಿಟಿಪಿ ಭಯೋತ್ಪಾದಕರು ಇರುವ ನೆಲೆಗಳನ್ನು ಭದ್ರತಾ ಪಡೆಗಳು ಸಮೀಪಿಸುತ್ತಿದ್ದಂತೆಯೇ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಪಡೆಗಳು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಅಲ್ಲಿದ್ದ ಎಲ್ಲ 17 ಭಯೋತ್ಪಾದಕರನ್ನೂ ಹತ್ಯೆಗೈಯಲಾಗಿದೆ. ಸ್ಥಳದಲ್ಲಿದ್ದ ಗಣನೀಯ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಎಲಾಹಿ ತಿಳಿಸಿದ್ದಾರೆ.
ಹತ್ಯೆಗೊಳಗಾದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲಿನ ದಾಳಿ, ಸುಲಿಗೆಗಾಗಿ ಅಪಹರಣ ಹಾಗೂ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ.




