ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತವು ಅಮೆರಿಕದ ನಿಲುವಿಗೆ ಸಹಕರಿಸದಿದ್ದರೆ, ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸೆರೆಹಿಡಿದ ನಂತರ ಅಮೆರಿಕದ ಮುಂದಿನ ನಡೆಗಳ ಕುರಿತು ಮಾಹಿತಿ ನೀಡುವ ವೇಳೆ ಟ್ರಂಪ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ರಷ್ಯಾ ಜೊತೆಗಿನ ತೈಲ ವಹಿವಾಟನ್ನು ವಿರೋಧಿಸಿ, ಕಳೆದ ಆಗಸ್ಟ್ 2025ರಲ್ಲೇ ಅಮೆರಿಕವು ಭಾರತದ ಮೇಲಿನ ಸುಂಕವನ್ನು ಶೇ 50ರಷ್ಟು ಹೆಚ್ಚಿಸಿತ್ತು. ಇದೀಗ ಟ್ರಂಪ್ ಅವರ ಹೊಸ ಹೇಳಿಕೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧದಲ್ಲಿ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯಿದೆ.
ಶ್ವೇತಭವನ ಹಂಚಿಕೊಂಡಿರುವ ಆಡಿಯೊ ಒಂದರಲ್ಲಿ ಮಾತನಾಡಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಸ್ತಾಪಿಸುತ್ತಾ, “ಮೋದಿ ಒಬ್ಬ ಒಳ್ಳೆಯ ವ್ಯಕ್ತಿ . ಆದರೆ, ರಷ್ಯಾ ತೈಲ ವಿಚಾರದಲ್ಲಿ ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ತಿಳಿದಿದೆ. ಅವರು ನನ್ನನ್ನು ಸಂತೋಷವಾಗಿಡುವುದು ಮುಖ್ಯವಾಗಿತ್ತು. ಅವರು ವ್ಯಾಪಾರ ಮಾಡುತ್ತಿದ್ದಾರೆ, ಹೀಗಾಗಿ ನಾವು ಅವರ ಮೇಲಿನ ಸುಂಕಗಳನ್ನು ತ್ವರಿತವಾಗಿ ಹೆಚ್ಚಿಸಬಹುದು” ಎಂದು ಖಾರವಾಗಿ ನುಡಿದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ‘ಕಾಮುಕರ’ ವಿರುದ್ಧ ಕುಡುಗೋಲು ಹಿಡಿದ ಮಹಿಳಾ ಶಕ್ತಿ!
ರಷ್ಯಾದ ತೈಲ ಖರೀದಿಯನ್ನು ಭಾರತ ನಿಲ್ಲಿಸಲಿದೆ ಎಂದು ಪ್ರಧಾನಿ ಮೋದಿ ತಮಗೆ ಭರವಸೆ ನೀಡಿದ್ದರು ಎಂದು ಕಳೆದ ಅಕ್ಟೋಬರ್‌ನಲ್ಲಿ ಟ್ರಂಪ್ ಹೇಳಿಕೊಂಡಿದ್ದರು. ಆದರೆ, ಭಾರತ ಸರ್ಕಾರವು ಟ್ರಂಪ್ ಅವರ ಈ ಹೇಳಿಕೆಯನ್ನು ತಳ್ಳಿಹಾಕಿತ್ತು. ಮೋದಿ ಮತ್ತು ಟ್ರಂಪ್ ನಡುವೆ ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.
ಅಮೆರಿಕದ ನಿರಂತರ ಒತ್ತಡದ ನಡುವೆಯೂ, “ತನ್ನ ದೇಶದ ಇಂಧನ ಭದ್ರತೆ, ಗ್ರಾಹಕರ ಅಗತ್ಯಗಳು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಬೆಲೆಯನ್ನು ಆಧರಿಸಿ ತೈಲ ಖರೀದಿ ನೀತಿಯನ್ನು ರೂಪಿಸಲಾಗುತ್ತದೆ,” ಎಂದು ಭಾರತ ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿದೆ.
ಪ್ರಸ್ತುತ ರಷ್ಯಾವು ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರವಾಗಿದೆ. ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸಲು ರಷ್ಯಾ ಅಧ್ಯಕ್ಷ ಪುಟಿನ್ ಮೇಲೆ ಒತ್ತಡ ಹೇರುವ ತಂತ್ರವಾಗಿ ಟ್ರಂಪ್ ಆಡಳಿತವು ಭಾರತದ ಮೇಲೆ ಭಾರೀ ಸುಂಕಗಳನ್ನು ವಿಧಿಸಿತ್ತು. ಭಾರತವು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಯುದ್ಧಕ್ಕೆ ಪರೋಕ್ಷವಾಗಿ ಇಂಧನ ನೀಡುತ್ತಿದೆ ಮತ್ತು ತೈಲ ಮರುಮಾರಾಟದಿಂದ ಕೋಟ್ಯಂತರ ಲಾಭ ಮಾಡುತ್ತಿದೆ ಎಂದು ಟ್ರಂಪ್ ಆಡಳಿತದ ಅಧಿಕಾರಿಗಳು ಆರೋಪಿಸುತ್ತಿದ್ದಾರೆ.





