ಇರಾನ್‌ನಲ್ಲಿ ಆಂತರಿಕ ದಂಗೆ ತೀವ್ರಗೊಂಡಿರುವ ನಡುವೆಯೇ, ಪರಿಸ್ಥಿತಿಯ ಲಾಭ ಪಡೆದು ಅಮೆರಿಕ ಸೇನಾ ಕಾರ್ಯಾಚರಣೆಗೆ ಮುಂದಾದರೆ ಅಮೆರಿಕದ ನೆಲೆಗಳು ಹಾಗೂ ಇಸ್ರೇಲ್ ಈ ಎರಡೂ ದೇಶಗಳ ಮೇಲೆ ಮುಗಿಬೀಳುವುದಾಗಿ ಇರಾನ್ ಬಹಿರಂಗ ಎಚ್ಚರಿಕೆ ನೀಡಿದೆ.
ಭಾನುವಾರ ನಡೆದ ಇರಾನ್ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್, “ದೇಶದಲ್ಲಿನ ಅಶಾಂತಿಯ ನೆಪವೊಡ್ಡಿ ಅಮೆರಿಕ ನಮ್ಮ ಮೇಲೆ ಆಕ್ರಮಣಕ್ಕೆ ಮುಂದಾದರೆ ಸುಮ್ಮನಿರುವುದಿಲ್ಲ. ಈ ಪ್ರಾಂತ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಇಸ್ರೇಲ್ ದೇಶ ಇವೆರಡನ್ನೂ ‘ನ್ಯಾಯಸಮ್ಮತ ಗುರಿ’ಗಳನ್ನಾಗಿ ಪರಿಗಣಿಸಿ, ಎರಡೂ ಕಡೆಗಳಲ್ಲೂ ಭೀಕರ ಪ್ರತಿದಾಳಿ ನಡೆಸಲಾಗುವುದು,” ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, “ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಮೆರಿಕ ಮತ್ತು ಇಸ್ರೇಲ್ ಕುಮ್ಮಕ್ಕು ನೀಡುತ್ತಿವೆ. ಗಲಭೆಕೋರರು ಮತ್ತು ಭಯೋತ್ಪಾದಕರನ್ನು ಬಳಸಿಕೊಂಡು ಇರಾನ್‌ನಲ್ಲಿ ಅಸ್ಥಿರತೆ ಉಂಟುಮಾಡಲು ಈ ಎರಡೂ ದೇಶಗಳು ಸಂಚು ರೂಪಿಸಿವೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಜನರು ಸರ್ಕಾರದ ದಬ್ಬಾಳಿಕೆ ವಿರುದ್ಧ ತಿರುಗಿಬಿದ್ದಿದ್ದಾರೆ. ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆದರೆ ಅಮೆರಿಕ ಪ್ರಬಲ ಉತ್ತರ ನೀಡಬೇಕಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.
ಇರಾನ್ ಕರೆನ್ಸಿ (ರಿಯಾಲ್) ಮೌಲ್ಯ ಕುಸಿತ ಮತ್ತು ಗಗನಕ್ಕೇರುತ್ತಿರುವ ಜೀವನ ವೆಚ್ಚದ ವಿರುದ್ಧ ಸುಮಾರು ಎರಡು ವಾರಗಳ ಹಿಂದೆ ಆರಂಭವಾದ ಪ್ರತಿಭಟನೆ, ಇದೀಗ ಇರಾನ್‌ನ ಧಾರ್ಮಿಕ ನಾಯಕತ್ವದ ವಿರುದ್ಧದ ಹೋರಾಟವಾಗಿ ಮಾರ್ಪಟ್ಟಿದೆ. ಟೆಹ್ರಾನ್, ಮಶಹದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಈ ಸಂಘರ್ಷದಲ್ಲಿ ಈವರೆಗೆ 116 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 2,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.





