35 ವರ್ಷಗಳ ಹಿಂದೆ ಪ್ರಕಟಣೆ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ, ಬಾಂಗ್ಲಾದೇಶದ ಇಂಗ್ಲಿಷ್ ಭಾಷಾ ದಿನಪತ್ರಿಕೆ ‘ದಿ ಡೈಲಿ ಸ್ಟಾರ್’ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಶನಿವಾರ, ಓದುಗರ ಕೈ ಸೇರಬೇಕಿದ್ದ ಪತ್ರಿಕೆಯ ಮುದ್ರಣ ಆವೃತ್ತಿ ಪ್ರಕಟವಾಗಿಲ್ಲ.
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಗಲಭೆಯಲ್ಲಿ ತೊಡಗಿರುವ ಪ್ರತಿಭಟನಾಕಾರರು ಢಾಕಾದಲ್ಲಿರುವ ‘ದಿ ಡೈಲಿ ಸ್ಟಾರ್’ ಕಚೇರಿಯಿದ್ದ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಅದೇ ಕಟ್ಟಡದಲ್ಲಿ ಬಂಗಾಳಿ ದಿನಪತ್ರಿಕೆ ‘ಪ್ರೋಥೋಮ್ ಅಲೋ’ ಕೂಡ ಇತ್ತು. ಎರಡೂ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿದ ದಾಳಿಕೋರರು ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಎರಡೂ ಪತ್ರಿಕೆಗಳ ಕಚೇರಿಗಳಿಗೆ ಹಾನಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ದಿ ಡೈಲಿ ಸ್ಟಾರ್ ಪತ್ರಿಕೆಯು, ‘ಸ್ವತಂತ್ರ ಪತ್ರಿಕೋದ್ಯಮಕ್ಕೆ ಕರಾಳ ದಿನ’ ಎಂಬ ಶೀರ್ಷಿಕೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. “ಇದು ಕೇವಲ ಎರಡು ಪತ್ರಿಕೆಗಳ ಮೇಲಿನ ದಾಳಿಯಲ್ಲ. ಇದು ಸ್ವತಂತ್ರ ಪತ್ರಿಕೋದ್ಯಮ, ವಾಕ್ ಸ್ವಾತಂತ್ರ್ಯ ಹಾಗೂ ಖಾಸಗಿ ಆಸ್ತಿಯ ಹಕ್ಕಿನ ಮೇಲಿನ ದಾಳಿಯಾಗಿದೆ. ಇದನ್ನು ಹಗುರವಾಗಿ ಪರಿಗಣಿಸಬಾರದು” ಎಂದು ಹೇಳಿದೆ.

“ನಮ್ಮ ಕಾರ್ಯಾಚರಣೆಯನ್ನು ಅಡ್ಡಿಪಡಿಸುವ ಹಿಂದಿನ ಬೆದರಿಕೆಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ಸುದ್ದಿ ಮಾಧ್ಯಮಗಳ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಸರ್ಕಾರವು ನಿರ್ಲಕ್ಷ್ಯ ಮನೋಭಾವ ಹೊಂದಿದೆ. ದಿ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ಎರಡೂ ಪತ್ರಿಕೆಗಳು ವಿವಿಧ ಸಂದರ್ಭಗಳಲ್ಲಿ ಪದೇ ಪದೇ ಬೆದರಿಕೆಗಳನ್ನು ಎದುರಿಸಿವೆ. ಆದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಅಥವಾ ತನಿಖೆ ಮಾಡಲಾಗಿಲ್ಲ” ಎಂದು ಪತ್ರಿಕೆಯು ಅಸಮಾಧಾನ ವ್ಯಕ್ತಪಡಿಸಿದೆ.
ಘಟನೆಗೆ ಕಾರಣವೇನು ಮತ್ತು ಏನಾಯಿತು?
ಗುರುವಾರ ರಾತ್ರಿ, ವಿದ್ಯಾರ್ಥಿ ಪ್ರತಿಭಟನಾ ವೇದಿಕೆ ‘ಇಂಕಿಲಾಬ್ ಮಂಚ’ದ ಹಿರಿಯ ನಾಯಕ ಹಾದಿಯನ್ನು ಢಾಕಾದ ಮಸೀದಿಯ ಹೊರಗೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಆತನ ಸಾವಿನ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಅಂದು ರಾತ್ರಿ, ನೂರಾರು ಪ್ರತಿಭಟನಾಕಾರರು ಶಹಬಾಗ್‌ನಿಂದ ಕಾರ್ವಾನ್ ಬಜಾರ್‌ನಲ್ಲಿರುವ ಪ್ರೋಥೋಮ್ ಅಲೋ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕಚೇರಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಆದರೆ, ಅವರನ್ನು ಪೊಲೀಸರು ತಡೆದರು. ದಾಳಿ ವಿಫಲಗೊಂಡು, ಪ್ರತಿಭಟನಾಕಾರರು ಕಚೇರಿಯ ಹೊರಗೆ ನಿಂತು, ‘ಪ್ರೋಥೋಮ್ ಅಲೋ ಕಚೇ ಸುಟ್ಟುಹಾಕುವುದು’, ‘ಪ್ರೋಥೋಮ್ ಅಲೋದ ಯಾರಾದರೂ ಕಂಡುಬಂದರೆ ಅವರ ಮೇಲೆ ದಾಳಿ ಮಾಡುವುದು’ ಸೇರಿದಂತೆ ನಾನಾ ರೀತಿಯ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದೆ.
ಅಂದು ರಾತ್ರಿ ಮತ್ತು ಮರುದಿನ, ಪತ್ರಿಕಾ ಕಚೇರಿಯ ಮಾರುಕಟ್ಟೆ ಪ್ರದೇಶದಲ್ಲಿದ್ದ ವ್ಯಾಪಾರಿಗಳ ಮೇಲೆ ಪ್ರತಿಭಟನಾನಿರತ ದಾಳಿಕೋರರು ದಾಳಿ ಮಾಡಿದರು. ಈ ವೇಳೆ, ವಿದೇಶದಲ್ಲಿರುವ ಬಾಂಗ್ಲಾ ಪ್ರಜೆಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ‘ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡುವಂತೆ’ ಪ್ರಚೋದಿಸಲು ಪ್ರಾರಂಭಿಸಿದರು. ಪರಿಣಾಮ, ಮತ್ತಷ್ಟು ಮಂದಿ ಶಹಬಾಗ್‌ನಿಂದ ಪತ್ರಿಕಾ ಕಚೇರಿಯ ಬಳಿಗೆ ಧಾವಿಸಿ ಬಂದರು ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ದೇಶದ ಮುಸ್ಲಿಮರ ಮೇಲೆ ಇಲ್ಲದ ಪ್ರೀತಿ, ವಿದೇಶಿ ಮುಸ್ಲಿಮರ ಮೇಲ್ಯಾಕೆ ಮೋದೀಜಿ?
ಶುಕ್ರವಾರ ಮಧ್ಯಹ್ನದ 12:15ರ ಸುಮಾರಿಗೆ ಪತ್ರಿಕಾ ಕಚೇರಿಯ ಮೇಲೆ ದಾಳಿ ಪ್ರಾರಂಭವಾಯಿತು. ದಾಳಿಕೋರರು ಇಟ್ಟಿಗೆಗಳನ್ನು ಎಸೆದು ಕಟ್ಟಡದ ಗಾಜನ್ನು ಒಡೆದು, ನಂತರ ಮುಖ್ಯ ದ್ವಾರವನ್ನು ಮುರಿದು ಕಟ್ಟಡದೊಳಗೆ ನುಗ್ಗಲಾರಂಭಿಸಿದರು. ಪೀಠೋಪಕರಣಗಳು, ಉಪಕರಣಗಳು ಹಾಗೂ ದಾಖಲೆಗಳನ್ನು ಕೆಡವಿ ಬೆಂಕಿ ಹಚ್ಚಿದರು.

ಗಾಳಿಗಾಗಿ ಏದುಸಿರು ಬಿಟ್ಟ ಸಿಬ್ಬಂದಿ
“ಪ್ರತಿಭಟನಾಕಾರರು ಕಟ್ಟಡ ಮತ್ತು ಕಚೇರಿಯ ಮಹಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದಾಗ, ದಿ ಡೈಲಿ ಸ್ಟಾರ್ ಪತ್ರಿಕೆಯ 28 ಸಿಬ್ಬಂದಿಗಳು ಕಚೇರಿಯ ಮೇಲ್ಛಾವಣಿಯಲ್ಲಿ ಸಿಲುಕಿಕೊಂಡಿದ್ದರು. ಕಚೇರಿಯು ಹೊಗೆಯಿಂದ ಆವರಿಸಿತ್ತು. ತಾಜಾ ಗಾಳಿಗಾಗಿ ಸಿಬ್ಬಂದಿಗಳು ಏದುಸಿರು ಬಿಡುತ್ತಿದ್ದರು” ಎಂದು ದಿ ಡೈಲಿ ಸ್ಟಾರ್ ಪತ್ರಿಕೆಯ ಸಂಪಾದಕ ಕಮಲ್ ಅಹ್ಮದ್ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.
“ಸೇನಾ ಪಡೆಗಳು ಸ್ಥಳಕ್ಕೆ ಬಂದ ಬಳಿಕವೇ ನಮ್ಮ ಸಿಬ್ಬಂದಿಗಳನ್ನು ರಕ್ಷಿಸಲಾಯಿತು. ಶುಕ್ರವಾರ ಪತ್ರಿಕೆ ತನ್ನ ಮುದ್ರಣ ಆವೃತ್ತಿಯನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. ಇನ್ನೂ ಕೆಲ ದಿನಗಳ ಕಾಲ ಪತ್ರಿಕೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಪತ್ರಿಕಾ ಸ್ವಾತಂತ್ರ್ಯ ಮತ್ತು ಚುನಾವಣಾ ವಾತಾವರಣ
ಕೆಲವು ಬಲಾಢ್ಯ ಗುಂಪುಗಳು ಪರಿಸ್ಥಿತಿ ಮತ್ತು ಸಾರ್ವಜನಿಕ ಆಕ್ರೋಶವನ್ನು ದುರುಪಯೋಗ ಮಾಡಿಕೊಳ್ಳಲು ನಿರಂತರವಾಗಿ ಯತ್ನಿಸುತ್ತಿವೆ. ಆ ಗುಂಪುಗಳು ವಸ್ತುನಿಷ್ಠ ಪತ್ರಿಕೋದ್ಯಮ ನಡೆಸುವವರ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸುತ್ತಿವೆ. ಪರಿಣಾಮವಾಗಿ, ಎರಡು ಪತ್ರಿಕೆಗಳ ವಿರುದ್ಧ ಈ ದಾಳಿ ನಡೆದಿದೆ. ಮುಂಬರುವ ಚುನಾವಣೆಯಲ್ಲಿ ಜನರನ್ನು ಹಾದಿ ತಪ್ಪಿಸಲು ದೇಶದಲ್ಲಿ ಅಸ್ಥಿರತೆಯ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ಆರೋಪಿಸಿದೆ.




