ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಪ್ರವಾಹ ಉಂಟಾಗಿದ್ದು ಈವರೆಗೆ 69 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 34 ಮಂದಿ ನಾಪತ್ತೆಯಾಗಿದ್ದಾರೆ. ಇದೇ ಚಂಡಮಾರುತವು ನವೆಂಬರ್ 30ರಂದು ಚೆನ್ನೈಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತವು ಶ್ರೀಲಂಕಾ ಕರಾವಳಿ ಮತ್ತು ಬಂಗಾಳ ಕೊಲ್ಲಿ ಮೂಲಕ ಚಲಿಸುವ ಸಾಧ್ಯತೆಯಿದ್ದು, ಭಾನುವಾರ ಬೆಳಿಗ್ಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಬಹುದು. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನು ಓದಿದ್ದೀರಾ? ಫೆಂಗಲ್ ಚಂಡಮಾರುತ | ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ, ಬೆಂಗಳೂರಿಗೂ ಮೂರು ದಿನ ಮಳೆ
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದ್ದಾರೆ. ನವೆಂಬರ್ 29ರಂದು ಮತ್ತು 30ರಂದು ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಶ್ರೀಲಂಕಾದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ನೌಕಾಪಡೆಯ ದೋಣಿಗಳು ಹಲವು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿವೆ. ಮಣ್ಣು ಕುಸಿತದಿಂದಾಗಿ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ದ್ವೀಪದಾದ್ಯಂತ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕೆಲವು ಪ್ರದೇಶಗಳಲ್ಲಿ 360 ಮಿಲಿಮೀಟರ್ ಮಳೆಯಾಗಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ.
ಇನ್ನು ಶುಕ್ರವಾರ ಹಿಂದೂ ಮಹಾಸಾಗರಕ್ಕೆ ಹರಿಯುವ ಕೆಲಾನಿ ನದಿ ಉಕ್ಕಿ ಹರಿದಿದೆ. ಮೂರು ದಶಕಗಳಲ್ಲಿ ಸಂಭವಿಸಿದ ಅತಿ ಭೀಕರ ಪ್ರವಾಹ ಇದಾಗಿದೆ ಎಂದು ಮಾಧ್ಯಮಗಳಿಗೆ ಸ್ಥಳೀಯ ನಿವಾಸಿ 56 ವರ್ಷದ ವಿ.ಎಸ್.ಎ. ರತ್ನಾಯಕೆ ಹೇಳಿದ್ದಾರೆ.
ಕನಿಷ್ಠ 3,000 ಮನೆಗಳು ಮಣ್ಣು ಕುಸಿತ ಮತ್ತು ಪ್ರವಾಹದಲ್ಲಿ ಹಾನಿಗೊಳಗಾಗಿವೆ. 18,000ಕ್ಕೂ ಹೆಚ್ಚು ಜನರು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಗೊಂಡಿದ್ದಾರೆ. ಭಾರತವೂ ನೆರವು ನೀಡುತ್ತಿದೆ.
2016ರಲ್ಲಿ ಸಂಭವಿಸಿದ ಪ್ರವಾಹದಿಂದಾಗಿ 71 ಮಂದಿ ಸಾವನ್ನಪ್ಪಿದ್ದಾರೆ. ಅದಕ್ಕಿಂತ ಭೀಕರವಾದ ಚಂಡಮಾರುತ, ಪ್ರವಾಹ ಇದಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ ಭಾರೀ ಮಳೆಯಿಂದಾಗಿ 26 ಮಂದಿ ಮೃತಪಟ್ಟಿದ್ದು, ಡಿಸೆಂಬರ್‌ನಲ್ಲಿ ಪ್ರವಾಹ, ಭೂಕುಸಿತದಿಂದಾಗಿ 17 ಮಂದಿ ಸಾವನ್ನಪ್ಪಿದ್ದಾರೆ. ಶ್ರೀಲಂಕಾ ಕಂಡ ಅತ್ಯಂತ ಭೀಕರ ಪ್ರವಾಹ 2003ರ ಜೂನ್‌ನಲ್ಲಿ ಸಂಭವಿಸಿದ್ದು 254 ಮಂದಿ ಸಾವನ್ನಪ್ಪಿದ್ದರು.





