ಅಮೆರಿಕದ ಹಾಲಿ ಹತಾಶೆಯು, ಒಟ್ಟು ದೇಶೀಯ ಉತ್ಪನ್ನವನ್ನು (GDP) ಬೆಂಬಲಿಸುವ ಅರ್ಥವ್ಯವಸ್ಥೆಯ ನೀರುಗುಳ್ಳೆಯಿಂದ ಹುಟ್ಟಿಕೊಂಡದ್ದು. ಅದು $38.565 ಟ್ರಿಲಿಯನ್‌ಗಿಂತ (3,540.34 ಲಕ್ಷ ಕೋಟಿ ರುಪಾಯಿ) ಹೆಚ್ಚಿನ ಭಾರೀ ಸಾಲದ ಬಂಡೆಗಲ್ಲನ್ನು ಬೆನ್ನಿಗೆ ಕಟ್ಟಿಕೊಂಡಿದೆ. ಕಂಡಕಂಡ ದೇಶಗಳ ಸಂಪನ್ಮೂಲಗಳನ್ನು ಕಬಳಿಸಿ ಹೀರುವ ಸಾಮ್ರಾಜ್ಯಶಾಹಿ ವ್ಯವಸ್ಥೆಯಾಗಿದೆ. ಅಪಾರ ಋಣಭಾರದಿಂದ ಬಿಡಿಸಿಕೊಳ್ಳುವ ಕ್ರಮವಾಗಿ ಡೊನಾಲ್ಡ್ ಟ್ರಂಪ್ ಕಲ್ಪಿಸಿಕೊಂಡಿರುವ ಅಸಾಧ್ಯ ದಾರಿಯೇ ಈ ನಿರ್ಣಾಯಕ ರೂಪಾಂತರ- ವಿಶ್ಲೇಷಣೆ: ಅಲೆಸ್ಸಾಂಡ್ರೊ ವೊಲ್ಪಿ
ಅಮೆರಿಕ ಸಂಯುಕ್ತ ಸಂಸ್ಥಾನಗಳ ರಚನೆಯಲ್ಲೇ ಆಕ್ರಮಣಶೀಲ ಅಸ್ತಿತ್ವ ಹುದುಗಿದೆ. ಹೀಗಾಗಿ ಸಾಮ್ರಾಜ್ಯಶಾಹಿ ನೀತಿಯ ವಿನಾ ಬದುಕಲು ಸಾಧ್ಯವಿಲ್ಲದ ಹಂತ ತಲುಪಿವೆ. ಅಂದರೆ, “ಸಾಮ್ರಾಜ್ಯವಾದದ ಹಂತ”ವನ್ನೂ ಮೀರಿ, ಪೂರ್ಣ ಪ್ರಮಾಣದ ಸಾಮ್ರಾಜ್ಯವಾಗಿ ರೂಪಾಂತರಗೊಳ್ಳದೆ ಇದ್ದರೆ, ಭೀಕರ ಸಂಕಷ್ಟವನ್ನು ತಪ್ಪಿಸಿಕೊಳ್ಳಲು ಅಮೆರಿಕಕ್ಕೆ ಸಾಧ್ಯವಿಲ್ಲ. ಅಧ್ಯಕ್ಷನ ಕೈಯಲ್ಲಿ ಸಂಪೂರ್ಣ ಕೇಂದ್ರೀಕೃತವಾದ ಒಕ್ಕೂಟದ ಅಧಿಕಾರ ಅಮೆರಿಕೆಯ ಅಧ್ಯಕ್ಷನ ಕೈಯಲ್ಲಿದೆ. ಸಾರ್ವಜನಿಕ ಶಾಂತಿ-ಸುವ್ಯವಸ್ಥೆಯ ಕೇಂದ್ರಿಕೃತ ಹಾಗೂ ಹಿಂಸಾತ್ಮಕ ಏಕಾಧಿಕಾರ, ನಾಗರಿಕ ಸ್ವಾತಂತ್ರ್ಯಗಳ ದಮನ, ಹಳೆಯ ಮಿತ್ರರೊಂದಿಗೆ ವಸಾಹತು ಸಂಬಂಧಗಳ ನಿರ್ಮಾಣ, ಶತ್ರುಗಳೊಂದಿಗೆ ನಿರಂತರ ಸಂಘರ್ಷ, ಹಾಗೂ ಅಂತಿಮವಾಗಿ ಕರೆನ್ಸಿ ಮತ್ತು ಆರ್ಥಿಕತೆಯ “ಶಸ್ತ್ರಸಜ್ಜಿತ” ಸಂರಕ್ಷಣೆಯ ತನಕ ಹೆಪ್ಪುಗಟ್ಟಿರುವ ಅಧಿಕಾರವಿದು.
ಇಂದು ಅಮೆರಿಕದ ಫೆಡರಲ್ ಸಾಲವು $38.565 ಟ್ರಿಲಿಯನ್ (3,540.34 ಲಕ್ಷ ಕೋಟಿ ರೂಪಾಯಿ) ಆಗಿದ್ದು, ಪ್ರತಿ ನಿಮಿಷಕ್ಕೆ ಏಳು ಮಿಲಿಯನ್ ಡಾಲರ್ ಗಳಷ್ಟು (64.17 ಕೋಟಿ ರುಪಾಯಿಗಳು) ಮತ್ತು ದಿನಂಪ್ರತಿ 10 ಬಿಲಿಯನ್ ಡಾಲರ್‌ಗಳಷ್ಟು (916.1 ಕೋಟಿ ರುಪಾಯಿ) ಹೆಚ್ಚುತ್ತಲೇ ಇದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ವರ್ಷಕ್ಕೆ $1.3 ಟ್ರಿಲಿಯನ್‌ಗಿಂತ (119.178 ಲಕ್ಷ ಕೋಟಿ ರುಪಾಯಿಗಳು) ಹೆಚ್ಚಿನ ಮೊತ್ತವನ್ನು ಬಡ್ಡಿಯಾಗಿ ಪಾವತಿಸಬೇಕಾಗಿರುವ ಭಾರೀ ಮೊತ್ತ. ಇದಕ್ಕೆ ಕಾರಣ ಸಾಲದ ಖರೀದಿದಾರರನ್ನು ಹುಡುಕಲು ಎದುರಾಗುತ್ತಿರುವ ಕಷ್ಟ ಮತ್ತು ದುರ್ಬಲ ಡಾಲರ್ ಕರೆನ್ಸಿಯಿಂದಾಗಿ ಫೆಡರಲ್ ಬ್ಯಾಂಕ್ ಸ್ವತಃ ಡಾಲರ್‌ಗಳನ್ನು ಖರೀದಿಸಲು ಅಸಮರ್ಥವಾಗಿದೆ. ಜೊತೆಗೆ, ಭವಿಷ್ಯದಲ್ಲಿ ಬಡ್ಡಿದರಗಳು ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಅಮೆರಿಕ ಖಜಾನೆ ಕಡಿಮೆ ಅವಧಿಯ ಬಾಂಡ್‌ಗಳಿಗೆ ಆದ್ಯತೆ ನೀಡಿದೆ. ಆದರೆ ಇದು ಗೆಲ್ಲಲು ಕಷ್ಟವೆನಿಸಿರುವ ಬಾಜಿ. ನಿರಂತರ ಹರಾಜುಗಳ ಮೂಲಕ ಅಮೆರಿಕೆಯ ಬೊಕ್ಕಸದ ಮೇಲೆ ಸತತ ಒತ್ತಡವನ್ನು ಉಂಟುಮಾಡುತ್ತಿದೆ.
ಫೆಡರಲ್ ಆದಾಯ ಮತ್ತು ವೆಚ್ಚಗಳ ನಡುವೆ ಗಂಭೀರ ಅಂತರವಿರುವುದರಿಂದಲೂ ಸಾಲ ಹೆಚ್ಚುತ್ತಿದೆ. ತೆರಿಗೆ ಆದಾಯ ಕ್ರಮೇಣ ಕುಸಿಯುತ್ತಿದ್ದು, ವಿಶೇಷವಾಗಿ ಸೇನಾ ವೆಚ್ಚ ಸೇರಿದಂತೆ ಖರ್ಚುಗಳು ಹೆಚ್ಚುತ್ತಿವೆ. ಇದಲ್ಲದೆ, ಸಾಲ ಸಂಕಷ್ಟಕ್ಕೆ ಕಾರಣ ಮತ್ತು ಪರಿಣಾಮ ಎರಡೂ ಆಗಿರುವ ಇನ್ನೆರಡು ಅಂಶಗಳಿವೆ. ಮೊದಲನೆಯದು ಚಿನ್ನ ಮತ್ತು ಬೆಳ್ಳಿಯ ಬೆಲೆಯ ತೀವ್ರ ಏರಿಕೆ; ಇವುಗಳ ಮಾರುಕಟ್ಟೆ ಮೌಲ್ಯ ಈಗ ಸುಮಾರು $40 ಟ್ರಿಲಿಯನ್‌ಗೆ (3,667.02 ಲಕ್ಷ ಕೋಟಿ ರುಪಾಯಿಗಳು) ತಲುಪಿದ್ದು, ಇದೊಂದು ಸಾರ್ವಕಾಲಿಕ ದಾಖಲೆ.
ಈ ವೇಗದ ಪತನಪಯಣಕ್ಕೆ ಕಾರಣವೆಂದರೆ, ಅಮೆರಿಕದ ಬೆಟ್ಟದಂತಹ ಸಾಲ ಮತ್ತು ದುರ್ಬಲ ಡಾಲರ್ ಕರೆನ್ಸಿ. ಇದಕ್ಕೆ ಪರ್ಯಾಯವಾಗಿ ಮಾರುಕಟ್ಟೆಗಳು ಸುರಕ್ಷಿತ ಹೂಡಿಕೆಗಳಿಗಾಗಿ ನಿರಂತರ ಹುಡುಕಾಟ ನಡೆಸುತ್ತಿರುವುದು. ಆದರೆ ಅದೇ ಸಮಯದಲ್ಲಿ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಸತತ ಸಾರ್ವಕಾಲಿಕ ಏರಿಕೆಯು, ಸಾಲಪತ್ರಗಳಿಂದ ದೂರ ಸರಿಯುವ ಪ್ರಕ್ರಿಯೆಗೆ ಚುರುಕು ನೀಡಿದೆ. ಅಮೆರಿಕೆಯ ಸಾಲ ಮತ್ತು ಡಾಲರ್ ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಜೊತೆಗೆ, ಚಿನ್ನದ ಮಾರುಕಟ್ಟೆಯ ಹಣಕಾಸೀಕರಣವು, ಲಾಭಾಂಶ ಅಥವಾ ಬಡ್ಡಿ ನೀಡದ ಚಿನ್ನದಲ್ಲಿ ಹೂಡಿಕೆ ಮಾಡುವ ಮಿತಿಯನ್ನು ಮೀರಿ ಹೋಗುವಂತೆ ಮಾಡಿದೆ. ಚಿನ್ನವನ್ನು ಆಧಾರ ಆಸ್ತಿಯಾಗಿ ಹೊಂದಿರುವ ಒಪ್ಪಂದಗಳು ಲಾಭದಾಯಕ ಪ್ರತಿಫಲಗಳನ್ನು ನೀಡುವುದರಿಂದ, ಈ ಪ್ರಕ್ರಿಯೆ ಬೆಳ್ಳಿಯನ್ನು ಕೈಗಾರಿಕಾ ಲೋಹದಿಂದ ಸುರಕ್ಷಿತ ಹೂಡಿಕೆಯ ಆಸ್ತಿಯಾಗಿ ಪರಿವರ್ತಿಸಲು ಸಹಾಯ ಮಾಡಿದೆ ಮತ್ತು ಅದನ್ನು ಆಧರಿಸಿ ಅಪಾರ ಪ್ರಮಾಣದ ವಿನಿಮಯ ವಹಿವಾಟು ನಿಧಿಗಳು ಏರ್ಪಟ್ಟಿವೆ.
ಅಮೆರಿಕದ ಸಾಲದ ಸ್ಥಿತಿಗತಿಯನ್ನು ದುರ್ಬಲಗೊಳಿಸುವ ಎರಡನೇ ಅಂಶವೆಂದರೆ, ವಾಲ್ ಸ್ಟ್ರೀಟ್‌ನ ಮೌಲ್ಯವನ್ನು $75 ಟ್ರಿಲಿಯನ್‌ಗಿಂತ (6,900 ಲಕ್ಷ ಕೋಟಿ ರೂಪಾಯಿಗಳು) ಮೇಲಕ್ಕೆ ತಳ್ಳಿ, ಇನ್ನೂ ಜೀವಂತವಿರುವ ಹಣಕಾಸು ನೀರುಗುಳ್ಳೆ. ಈ ಪರಿಸ್ಥಿತಿಯಲ್ಲಿ, ಚಿನ್ನ, ಬೆಳ್ಳಿ ಮತ್ತು ಷೇರುಗಳು ಫೆಡರಲ್ ಸಾಲದೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿವೆ. ಪರಿಣಾಮವಾಗಿ, ಭಾಗಶಃವಾದರೂ ಸುಸ್ತಿಯಾಗುವ ಅಪಾಯ ಮತ್ತು ಅಮೆರಿಕದ ದಿವಾಳಿಯಾಗುವ ಭೀತಿ ಹೆಚ್ಚುತ್ತಿದೆ.
ಟ್ರಂಪ್ ಸಾಮ್ರಾಜ್ಯಶಾಹಿ ತಂತ್ರದ ತುರ್ತು ಮೊರೆ ಹೋಗಿರುವ ಗುಟ್ಟು ಇದೇ ಆಗಿದೆ. ಜಾಗತಿಕ ಉಳಿತಾಯವನ್ನು ಅಮೆರಿಕದ ಋಣಬಾಧ್ಯತೆಯೆಡೆಗೆ ಏಕಪ್ರಕಾರವಾಗಿ ಹರಿಸುವಂತೆ ಅಮೆರಿಕದ ಬ್ಯಾಂಕುಗಳು ಮತ್ತು ನಿಧಿಗಳನ್ನು ನಂಬಿಸುವುದು ಅತ್ಯಗತ್ಯ. ಅದಕ್ಕಾಗಿ, ನಿಧಿಗಳು ಮತ್ತು ಬ್ಯಾಂಕುಗಳಿಗೆ ಸೇರಿದ ಅಮೆರಿಕದ ಕಂಪನಿಗಳಿಗೆ ವೆನೆಜುವೆಲಾ, ಇರಾನ್, ಡೆನ್ಮಾರ್ಕ್, ನೈಜೀರಿಯಾ ಹಾಗೂ ಇತರೆ ದೇಶಗಳ ಸಂಪನ್ಮೂಲಗಳ ಮೇಲೆ ತಾನು ನಿಯಂತ್ರಣ ಹೊಂದಿರುವುದಾಗಿ ಮನವರಿಕೆ ಮಾಡಿಸಬೇಕಿದೆ. ಇದೇ ಕಾರಣಕ್ಕೆ, ಯುರೋಪಿಯನ್ ಮತ್ತು ಪಾಶ್ಚಾತ್ಯ ಅಧೀನ ರಾಷ್ಟ್ರಗಳ ಮೇಲೆ ಭಾರೀ ತೆರಿಗೆಗಳನ್ನು (ಟ್ಯಾರಿಫ್) ವಿಧಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ ಗಾರ್ಮೆಂಟ್‌ಗೆ ರಾಹುಲ್ ಗಾಂಧಿ ಭೇಟಿ; ಅಮೆರಿಕ ಸುಂಕಗಳಿಂದ ಉದ್ಯೋಗ ನಷ್ಟದ ಎಚ್ಚರಿಕೆ
ಇದಕ್ಕಾಗಿ ಅಂತರರಾಷ್ಟ್ರೀಯ ವಿನಿಮಯ ಕರೆನ್ಸಿಯಾಗಿ ಡಾಲರ್ ಪ್ರಾಬಲ್ಯವನ್ನು ಮಿಲಿಟರಿ ಕಾರ್ಯಾಚರಣೆ ಬೆದರಿಕೆಗಳ ಮೂಲಕವಾದರೂ ಬಲವಂತವಾಗಿ ಹೇರಬೇಕಾಗಿದೆ. ಅಮೆರಿಕೆಯ ಫೆಡರಲ್ ಬ್ಯಾಂಕ್ ಮುಖ್ಯಸ್ಥ ಜೆರೋಮ್ ಪೌವೆಲ್ ಅವರನ್ನು ವಜಾಗೊಳಿಸಿ ಬಡ್ಡಿದರಗಳನ್ನು ತಗ್ಗಿಸುವ ಕ್ರಮ ಜರುಗಿಸಲಾಗುತ್ತದೆ. ಇದರಿಂದ ಸಾಲದ ವೆಚ್ಚ ಕಡಿಮೆಯಾಗುತ್ತದೆ, ಆದರೆ ಅದೇ ಸಮಯದಲ್ಲಿ ಅಮೆರಿಕದ ಷೇರುಪತ್ರಗಳನ್ನು ಖರೀದಿಸುವ ಆಕರ್ಷಣೆಯೂ ತಗ್ಗುತ್ತದೆ. ಜೊತೆಗೆ ಜಿಡಿಪಿಯನ್ನು ಬೆಂಬಲಿಸುವ ಹಣಕಾಸು ನೀರುಗುಳ್ಳೆ ಮತ್ತು ಸಾಲದ ನಡುವಿನ ಆಂತರಿಕ ವಿರೋಧದಲ್ಲಿಯೂ ಅಮೆರಿಕದ ಹತಾಶೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ನೀರುಗುಳ್ಳೆಯು, ಸಾಲವನ್ನು ಯಾವುದೇ ರೀತಿಯಲ್ಲಿ ಸ್ಥಿರಗೊಳಿಸಲು ವಿಫಲವಾಗುತ್ತಿದೆ.
ಅಮೆರಿಕೆಯು ಜಗತ್ತಿನ ಎಲ್ಲೆಡೆಯ ಸಂಪನ್ಮೂಲಗಳನ್ನು ಆಕ್ರಮಿಸಿ ಕಬಳಿಸುವ, ಅಂತರರಾಷ್ಟ್ರೀಯ ಟೀಕೆಯನ್ನೂ, ದೇಶದೊಳಗಿನ ಭಿನ್ನಾಭಿಪ್ರಾಯವನ್ನೂ ಸಹಿಸದ ಸಾಮ್ರಾಜ್ಯಶಾಹಿ ವ್ಯವಸ್ಥೆಯಾಗಿ ನಿರ್ಣಾಯಕವಾಗಿ ರೂಪಾಂತರಗೊಳ್ಳುತ್ತಿದೆ. ಉತ್ಪಾದಿಸುವ ಸಾಮರ್ಥ್ಯವನ್ನು ಕಳೆದುಕೊಂಡು, ಉದಾರವಾದಿ ತತ್ವಗಳ ಪ್ರಕಾರ ನಂಬಿಕೆಯನ್ನು ಕಳೆದುಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಲು ಟ್ರಂಪ್ ಕಲ್ಪಿಸಿಕೊಂಡಿರುವ ಅಸಾಧ್ಯ ದಾರಿಯಾಗಿ ಹೋಗಿದೆ. ಇದೇ ಉದಾರವಾದಿ ತತ್ತ್ವಗಳೇ ಈ ವಿಪತ್ತಿನ ಮೂಲ ಕಾರಣಗಳಾಗಿವೆ.





