- ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಮಸ್ಕ್ ಕಾರ್ಯ
- 44 ಬಿಲಿಯನ್ ಡಾಲರ್‌ಗೆ ಟ್ವಿಟರ್ ಖರೀದಿಸಿದ್ದ ಮಸ್ಕ್
ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಆಯ್ಕೆಯಾಗಿರುವವರ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಈ ಹಿಂದೆ ಮಸ್ಕ್ ತಾವು ಟ್ವಿಟರ್‌ನ ಸಿಇಒ ಸ್ಥಾನದಿಂದ ಕೆಳಗುಳಿಯುವುದಾಗಿ ಘೋಷಿಸಿದ್ದರು. ಆದರೆ ಹೊಸ ಸಿಇಒನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಇದೀಗ ಮಸ್ಕ್ ಶುಕ್ರವಾರ (ಮೇ 12) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೂತನ ಟ್ವಿಟರ್‌ನ ಸಿಇಒ ಹೆಸರನ್ನು ಪ್ರಕಟಿಸಿದ್ದಾರೆ.
ಲಿಂಡಾ ಯಾಕಾರಿನೊ ಎಂಬ ಟೆಕ್ ಮಹಿಳೆ ಹಾಗೂ ಹಣಕಾಸು ತಜ್ಞೆಯನ್ನು ಎಲಾನ್ ಮಸ್ಕ್ ಟ್ವಿಟರ್ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
“ಲಿಂಡಾ ಯಾಕಾರಿನೊ ಅವರನ್ನು ನೂತನ ಸಿಇಒ ಆಗಿ ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಅವರ ಜೊತೆ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್‌ನಲ್ಲಿ ಮಸ್ಕ್ ಹೇಳಿದ್ದಾರೆ.
“ನಾನು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತೇನೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು” ಎಂದು ಮಸ್ಕ್ ಹೇಳಿದ್ದಾರೆ.
ಎಲಾನ್ ಮಸ್ಕ್ ಅವರು ಶುಕ್ರವಾರ ನಸುಕಿನ ಜಾವ ಈ ಕುರಿತು ಟ್ವೀಟ್ ಮಾಡಿ ತಾವು ಟ್ವಿಟರ್‌ಗೆ ನೂತನ ಸಿಇಒ ನೇಮಿಸಿಕೊಂಡಿರುವುದಾಗಿ ಹೇಳಿದ್ದರು.
ನೂತನ ಸಿಇಒ ಒಬ್ಬ ಮಹಿಳೆ ಎಂದು ಹೇಳಿದ್ದ ಮಸ್ಕ್, ಅವರ ಹೆಸರು ಬಹಿರಂಗಪಡಿಸಿರಲಿಲ್ಲ.
ಲಿಂಡಾ ಯಾಕರಿನೊ ಅವರೇ ಟ್ವಿಟರ್‌ನ ನೂತನ ಸಿಇಒ ಆಗಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಈ ಸುದ್ದಿ ಓದಿದ್ದೀರಾ? ತೃತೀಯ ರಂಗಕ್ಕೆ ಬೆಂಬಲವಿಲ್ಲ; ಪ್ರಧಾನಿ ಮೋದಿ ಭೇಟಿ ಬಳಿಕ ನವೀನ್ ಪಟ್ನಾಯಕ್ ಸ್ಪಷ್ಟನೆ
ಎಲಾನ್ ಮಸ್ಕ್, ಟೆಸ್ಲಾ, ಸ್ಪೇಸ್ಎಕ್ಸ್ ಮೊದಲಾದ ಕಂಪನಿಗಳ ಮಾಲೀಕರಾಗಿದ್ದಾರೆ. ಕಳೆದ 2022ರ ಅಕ್ಟೋಬರ್ ತಿಂಗಳಲ್ಲಿ 44 ಬಿಲಿಯನ್ ಡಾಲರ್‌ಗೆ ಟ್ವಿಟರ್ ಅನ್ನು ಖರೀದಿಸಿದ್ದರು.
ಈ ವೇಳೆ ಸಿಇಒ ಆಗಿದ್ದ ಭಾರತ ಮೂಲದ ಪರಾಗ್ ಅಗರ್‌ವಾಲ್ ಅವರನ್ನು ವಜಾಗೊಳಿಸಿ ಮಸ್ಕ್ ತಾವು ಆ ಸ್ಥಾನ ವಹಿಸಿಕೊಂಡಿದ್ದರು.
ಅಲ್ಲದೆ ನೂತನ ಸಿಇಒ ದೊರಕಿದ ನಂತರ ತಾವು ಹುದ್ದೆ ತೊರೆಯುವುದಾಗಿ ಹೇಳಿದ್ದರು.





