Tesla ಕಂಪನಿಯ ಸಿಇಒ ಹಾಗೂ OpenAI ಸಹ-ಸಂಸ್ಥಾಪಕ ಎಲಾನ್ ಮಸ್ಕ್, OpenAIಯ ಚಾಟ್‌ಬಾಟ್ ChatGPT ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅದನ್ನು ʼDevilʼ (ದೆವ್ವ) ಎಂದು ಕರೆದಿದ್ದಾರೆ.
ChatGPT ಒಬ್ಬ ವ್ಯಕ್ತಿಯನ್ನು ʼತನ್ನ ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದೆʼ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ ಮಸ್ಕ್ ಅವರ ಈ ಪ್ರತಿಕ್ರಿಯೆ ಹೊರಬಿದ್ದಿದೆ. ʼXʼ ನಲ್ಲಿ ಹಂಚಿಕೊಳ್ಳಲಾದ ಒಂದು ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, “This is diabolical. OpenAI’s ChatGPT convinced a guy to do a murder-suicide!” ಎಂದು ಬರೆದಿದ್ದಾರೆ. ಜೊತೆಗೆ, ಸುರಕ್ಷತೆಯ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಗರಿಷ್ಠ ಮಟ್ಟದಲ್ಲಿ ಸತ್ಯಶೋಧಕವಾಗಿರಬೇಕು ಹಾಗೂ ಭ್ರಮೆಗಳಿಗೆ ಪೋಷಣೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಹೀಗೊಂದು ಮೊಕದ್ದಮೆ ದಾಖಲಾಗಿತ್ತು. ಅದರ ಪ್ರಕಾರ, 56 ವರ್ಷದ ವ್ಯಕ್ತಿಯೊಬ್ಬ ChatGPT ಪ್ರಭಾವಕ್ಕೆ ಒಳಗಾಗಿ ಕೊಲೆಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಪ್ರಕರಣದಲ್ಲಿ AI ಚಾಟ್‌ಬಾಟ್, ಆ ವ್ಯಕ್ತಿಯೊಂದಿಗೆ ನಡೆಸಿದ ಸಂಭಾಷಣೆಗಳು ಅವನ ಮನಸ್ಥಿತಿಯ ಮೇಲೆ ಗಾಢ ಪ್ರಭಾವ ಬೀರಿದ್ದು, ಕೊನೆಗೆ ಈ ದುರಂತಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಕುಟುಂಬದವರು ಆರೋಪಿಸಿದ್ದರು.

ಕನೆಕ್ಟಿಕಟ್ ರಾಜ್ಯದ ಗ್ರೀನ್ವಿಚ್‌ನಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸುಸಾನ್ ಎಬರ್ಸನ್ ಆಡಮ್ಸ್(83) ಎಂಬ ವೃದ್ಧೆ ತನ್ನ ಮನೆಯಲ್ಲೇ ಕೊಲೆಯಾಗಿದ್ದರು. ಪೊಲೀಸ್ ಮಾಹಿತಿ ಪ್ರಕಾರ, ಆಕೆಯ ಪುತ್ರನೇ ಸ್ಟೈನ್-ಎರಿಕ್ ಸೋಲ್ಬರ್ಗ್(56) ತಾಯಿಯನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದನು. ಸ್ಟೈನ್-ಎರಿಕ್ ಸೋಲ್ಬರ್ಗ್ ಕೊಲೆಗಿಂತ ಮೊದಲು ಕನಿಷ್ಠ ಐದು ತಿಂಗಳ ಕಾಲ ChatGPT ಅನ್ನು ಅತಿಯಾಗಿ ಬಳಸುತ್ತಿದ್ದ. ಕೆಲವೊಮ್ಮೆ ದಿನಕ್ಕೆ ಹಲವು ಗಂಟೆಗಳ ಕಾಲ ಚಾಟ್‌ಬಾಟ್‌ನೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಎಂದು ಪ್ರಕರಣದ ವಿವರಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚಾಟ್‌ಬಾಟ್ ನೀಡಿದ ಪ್ರತಿಕ್ರಿಯೆಗಳು ಆತನ ನಿರ್ಧಾರಗಳನ್ನು, ಅವನಲ್ಲಿದ್ದ ಪ್ಯಾರನಾಯ್ಡ್ ಭ್ರಮೆಗಳನ್ನು ತೀವ್ರವಾಗಿ ಪ್ರಭಾವಿಸಿವೆ ಎಂದು ಕುಟುಂಬದವರು ವಾದಿಸಿದ್ದಾರೆ.
ಏತನ್ಮಧ್ಯೆ ಮಸ್ಕ್, OpenAI ಸಿಇಒ ಸ್ಯಾಮ್ ಆಲ್ಟ್‌ಮನ್ ಹಾಗೂ ಸಂಸ್ಥೆ ಕುರಿತು ಕೂಡ ಆರೋಪ ಮಾಡಿದ್ದಾರೆ. ಇತ್ತೀಚೆಗೆ Xನಲ್ಲಿ ಹಂಚಿಕೊಳ್ಳಲಾದ ಒಂದು ಪೋಸ್ಟ್‌ನಲ್ಲಿ, “OpenAI ವಿರುದ್ಧ ಮಸ್ಕ್ ಹೂಡಿರುವ ಮೊಕದ್ದಮೆಯಲ್ಲಿ ಅವರು ಗೆಲ್ಲುವ ಸಾಧ್ಯತೆ ಶೇ.57ರಷ್ಟಿದೆ. ಜೊತೆಗೆ, OpenAI ಅಧ್ಯಕ್ಷರು ಸಂಸ್ಥೆಯನ್ನು ಲಾಭದಾಸ್ತಿಯ ಸಂಸ್ಥೆಯಾಗಿ ರೂಪಿಸಲು ಬಯಸಿದ್ದರು” ಎಂಬ ನ್ಯಾಯಾಲಯದ ದಾಖಲೆಗಳನ್ನೂ ಆ ಪೋಸ್ಟ್ ಉಲ್ಲೇಖಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, ʼಟ್ರಯಲ್ ಆರಂಭಕ್ಕೆ ಕಾಯುತ್ತಿದ್ದೇನೆ. ತನಿಖೆ ಮತ್ತು ಸಾಕ್ಷ್ಯಗಳು ನಿಮ್ಮನ್ನು ಬೆಚ್ಚಿಬೀಳುಸುತ್ತವೆʼ ಎಂದು ಹೇಳಿದ್ದಾರೆ. ಸಂಸ್ಥೆ ತನ್ನ ಮೂಲ ಲಾಭರಹಿತ ಗುರಿಯಿಂದ ದೂರ ಸರಿದು ವಾಣಿಜ್ಯ ಲಾಭದತ್ತ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸ್ಥೆಯ ಮೂಲ ತತ್ವಗಳಿಂದ ದಾರಿ ತಪ್ಪಲಾಗಿದೆ ಮತ್ತು ತನ್ನನ್ನು ವಂಚಿಸಲಾಗಿದೆ ಎಂಬುದೂ ಮಸ್ಕ್ ಅವರ ಪ್ರಮುಖ ಆರೋಪವಾಗಿದೆ ಎಂದು TOI ವರದಿ ಮಾಡಿದೆ.
ಇದನ್ನೂ ಓದಿ: ನಿಯಂತ್ರಣವಿಲ್ಲದ AI ಬೆಳವಣಿಗೆ ಅಪಾಯಕ್ಕೆ ದಾರಿ: ಮೈಕ್ರೋಸಾಫ್ಟ್ AI ಸಿಇಒ ಎಚ್ಚರಿಕೆ!
ChatGPT ವಿರುದ್ಧ ಕೇಳಿಬಂದಿರುವ ಈ ಕೊಲೆ-ಆತ್ಮಹತ್ಯೆ ಆರೋಪಗಳು ಮತ್ತು ಎಲಾನ್ ಮಸ್ಕ್ ಅವರ ಕಟುವಾದ ಪ್ರತಿಕ್ರಿಯೆಗಳು, ಕೃತಕ ಬುದ್ಧಿಮತ್ತೆಯ ಸುರಕ್ಷತೆ, ನೈತಿಕತೆ ಮತ್ತು ಜವಾಬ್ದಾರಿತನದ ಕುರಿತ ಜಾಗತಿಕ ಚರ್ಚೆಗೆ ಮತ್ತಷ್ಟು ತೀವ್ರತೆ ತಂದಿವೆ. ವಿಶೇಷವಾಗಿ ಮಾನಸಿಕವಾಗಿ ದುರ್ಬಲರಾಗಿರುವ ವ್ಯಕ್ತಿಗಳ ಮೇಲೆ AI ಸಾಧನಗಳ ಪ್ರಭಾವ ಎಷ್ಟು ಗಂಭೀರವಾಗಿರಬಹುದು ಎಂಬ ಪ್ರಶ್ನೆ ಈಗ ಕಾನೂನು ಹಂತದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. OpenAI ಈ ಆರೋಪಗಳಿಗೆ ಯಾವ ರೀತಿಯ ಅಧಿಕೃತ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳಲಿದೆ.





