ಎಲೋನ್ ಮಸ್ಕ್ ಒಡೆತನದ ʼಸ್ಪೇಸ್ ಎಕ್ಸ್ʼ ಕಂಪನಿ 2026ರ ಅಂತ್ಯದ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳು ಇಲ್ಲದ ಸ್ಟಾರ್‌ಶಿಪ್ ರಾಕೆಟ್ ಅನ್ನು ಕಳುಹಿಸಲು ಹಾಕಿಕೊಂಡಿದ್ದ ಯೋಜನೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ತಜ್ಞರು ಹೇಳುವಂತೆ ಈ ಯೋಜನೆ ಮಾರ್ಚ್ 2027ರಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಯೋಜನೆಯ ರಾಕೆಟ್ ಅಭಿವೃದ್ಧಿಯ ಹಂತದಲ್ಲಿದ್ದು ಹೆಚ್ಚಿನ ಪರೀಕ್ಷೆಗೆ ಒಳಪಡುತ್ತಿದೆ. ಸ್ಟಾರ್‌ಶಿಪ್ ಒಂದು ದೊಡ್ಡದಾದ ಸ್ಟೇನ್‌ಲೆಸ್-ಸ್ಟೀಲ್ ಬಾಹ್ಯಾಕಾಶ ನೌಕೆಯಾಗಿದ್ದು, ಮರುಬಳಕೆ ಮಾಡಬಹುದಾದ ಹಾಗೂ ಚಂದ್ರ, ಮಂಗಳಗಳಿಗೆ ಮಾನವರು ಮತ್ತು ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ಟಾರ್‌ಶಿಪ್ ರಾಕೆಟ್ ಅನ್ನು ಮೊದಲು ಮಂಗಳ ಗ್ರಹದ ಮೇಲೆ ಇಳಿಸುವುದಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ, ಮೊದಲು ಚಂದ್ರನ ಮೇಲೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಚಂದ್ರ ಹತ್ತಿರದಲ್ಲಿದೆ. ಆದ್ದರಿಂದ ಸಂವಹನವು ತ್ವರಿತವಾಗಿ ಹಾಗೂ ಕಾರ್ಯಚರಣೆನ್ನು ಸುಲಭಗೊಳಿಸಬಹುದು ಎಂದು ತಜ್ಞರ ಹೇಳಿದ್ದಾರೆ.
ಸ್ಪೇಸ್‌ಎಕ್ಸ್‌ನ ಯೋಜನೆಯ ಸ್ಟಾರ್‌ಶಿಪ್ ಮೊದಲು ಚಂದ್ರನ ಮೇಲೆ ಇಳಿಸಲಾಗುತ್ತದೆ. ನಂತರ ಹಂತ ಹಂತವಾಗಿ, ಮಂಗಳ ಗ್ರಹಕ್ಕೆ ಕಳುಹಿಸಲಾಗುತ್ತದೆ ಎಂದು ವರದಿಯಾಗಿದೆ. ಮಂಗಳ ಗ್ರಹದಲ್ಲಿನ ಕಠಿಣ ಸವಾಲುಗಳನ್ನು ಎದುರಿಸುವ ಮೊದಲು ಸುರಕ್ಷಿತ ವಾತಾವರಣದಲ್ಲಿ ರಾಕೆಟ್ ಕಳುಹಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಚಂದ್ರನ ಮೇಲೆ ರಾಕೆಟ್‌ಗಳನ್ನು ಕಳುಹಿಸುವ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಅಮೆರಿಕ ಸೇರಿದಂತೆ ಅನೇಕ ದೇಶಗಳು ಮುಂಚೂಣಿಯಲ್ಲಿವೆ. ಅದರಲ್ಲಿ ಚೀನಾ ಕೂಡ ಮನುಷ್ಯರನ್ನು ಚಂದ್ರನ ಮೇಲೆ ಕಳುಹಿಸುವ ಕೆಲಸ ಮಾಡುತ್ತಿದೆ. 1972ರಲ್ಲಿ ನಾಸಾ ಅಪೋಲೋ-17 ಕಳುಹಿಸಿದ ನಂತರ ಯಾರೂ ಹೋಗಿಲ್ಲ. ಅದಕ್ಕಾಗಿಯೇ ಚಂದ್ರನ ಮೇಲೆ ಇಳಿಯುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗುವ ಒತ್ತಡಕ್ಕೆ ಸ್ಪೇಸ್‌ಎಕ್ಸ್ ತಯಾರಾಗಿರುವಂತಿದೆ.
ವಾಲ್‌ಸ್ಟ್ರೀಟ್ ಜರ್ನಲ್ ವರದಿಯಂತೆ ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಇತರ ಕ್ಷೇತ್ರಗಳಿಗೂ ವಿಸ್ತರಿಸಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಈಗಾಗಲೇ xAI ಎಂಬ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಕಂಪನಿಯನ್ನು ಸ್ವಾಧಿನಪಡಿಸಿಕೊಂಡಿದೆ. ಸ್ಪೇಸ್‌ಎಕ್ಸ್ 1 ಟ್ರಿಲಿಯನ್ ಡಾಲರ್ ಮತ್ತು AI ಕಂಪನಿ 250 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದೆ. ಚಂದ್ರ ಅಥವಾ ಮಂಗಳ ಗ್ರಹಗಳ ಕಾರ್ಯಚರಣೆಗೆ AI ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸ್ಪೇಸ್‌ಎಕ್ಸ್ ಇನ್ನು ಸ್ಪಷ್ಟಪಡಿಸಿಲ್ಲ.





