ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ, ಮಧ್ಯಪ್ರಾಚ್ಯದಲ್ಲಿ ಉದ್ವಗ್ನತೆ ಉಂಟಾಗಿದೆ. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯಾಗಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ಆರಂಭಿಸಿದೆ. ಪರಿಣಾಮ, ಮಧ್ಯಪ್ರಾಚ್ಯದ ಬಹುತೇಕ ಎಲ್ಲ ರಾಷ್ಟ್ರಗಳು ವಿಮಾನ ಕಾರ್ಯಚಾರಣೆಯನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ, ಹಲವಾರು ಭಾರತೀಯರು ಅರೇಬಿಯನ್ ರಾಷ್ಟ್ರಗಳಲ್ಲಿ ಸಿಲುಕೊಂಡಿದ್ದಾರೆ. ಭಾರತದ ಸ್ಟಾರ್ ಬ್ಯಾಡ್ಮಂಟನ್ ಆಟಗಾರ್ತಿ ಪಿ.ವಿ ಸಿಂಧು ಕೂಡ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ತಾವು ಎದುರಿಸಿದ ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ.
‘ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಿಂಧು, ಮಾರ್ಗಮಧ್ಯೆ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ, ಅವರು ಮತ್ತು ಅವರ ತಂಡವು ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದೆ. ತಾವಿದ್ದ ಪ್ರದೇಶದ ಬಳಿಯೇ ಭೀಕರ ಸ್ಫೋಟ ಸಂಭವಿಸಿದೆ. ಇದು ‘ಅತ್ಯಂತ ಉದ್ವಿಗ್ನ’ ಮತ್ತು ‘ಭಯಾನಕ ಕ್ಷಣ’ ಎಂದು ಸಿಂಧು ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಅಗ್ನಿಪರೀಕ್ಷೆ ಮುಂದುವರಿಯುತ್ತಲೇ ಇದೆ. ಪರಿಸ್ಥಿತಿ ಗಂಟೆಗಟ್ಟಲೆ ಭಯಾನಕವಾಗುತ್ತಿದೆ. ಕೆಲವು ಗಂಟೆಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಸ್ಥಳದ ಬಳಿ ಸ್ಫೋಟ ಸಂಭವಿಸಿದೆ. ನನ್ನ ತರಬೇತುದಾರ ಹೊಗೆ ಮತ್ತು ಅವಶೇಷಗಳಿಗೆ ಹತ್ತಿರವಾಗಿದ್ದರಿಂದ ಅವರು ಆ ಪ್ರದೇಶದಿಂದ ಬೇಗನೆ ಓಡಿಹೋಗಬೇಕಾಯಿತು. ಇದು ನಮಗೆಲ್ಲರಿಗೂ ಅತ್ಯಂತ ಉದ್ವಿಗ್ನ ಮತ್ತು ಭಯಾನಕ ಕ್ಷಣವಾಗಿತ್ತು. ಈಗ ನನನ್ನು ಮತ್ತು ತಂಡವನ್ನು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಬರೆದಿದ್ದಾರೆ.
“ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ. ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳ ಪ್ರಯತ್ನಗಳಿಗೆ ಧನ್ಯವಾದಗಳು. ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವಲ್ಲಿ ಅವರ ಅದ್ಭುತ ಬೆಂಬಲ ಮತ್ತು ನಿರಂತರ ಸಹಾಯಕ್ಕಾಗಿ ದುಬೈನಲ್ಲಿರುವ ಭಾರತೀಯ ಹೈಕಮಿಷನ್‌ಗೆ ವಿಶೇಷ ಧನ್ಯವಾದಗಳು” ಎಂದು ಸಿಂಧು ಹೇಳಿದ್ದಾರೆ.




