ಅಮೆರಿಕದ ಸಿಯಾಟಲ್‌ನಲ್ಲಿ ಕಳೆದ ವರ್ಷ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲ (23) ಅವರ ಕುಟುಂಬಕ್ಕೆ ಬರೋಬ್ಬರಿ 29 ಮಿಲಿಯನ್ ಡಾಲರ್ (ಸುಮಾರು ₹262 ಕೋಟಿ) ಪರಿಹಾರ ನೀಡಲು ಸಿಯಾಟಲ್ ನಗರ ಆಡಳಿತ ಒಪ್ಪಿಗೆ ನೀಡಿದೆ.
ಅಪಘಾತಕ್ಕೆ ಕಾರಣನಾದ ಪೊಲೀಸ್ ಅಧಿಕಾರಿ ಹಾಗೂ ನಗರ ಆಡಳಿತದ ವಿರುದ್ಧ ಜಾಹ್ನವಿ ಕುಟುಂಬವು 2024ರಲ್ಲಿ 110 ಮಿಲಿಯನ್ ಡಾಲರ್ ಪರಿಹಾರ ಕೋರಿ ದಾವೆ ಹೂಡಿತ್ತು. ಇದೀಗ ಈ ಕಾನೂನು ಹೋರಾಟವು ರಾಜಿ ಸಂಧಾನದ ಮೂಲಕ ಅಂತ್ಯಗೊಂಡಿದ್ದು, ಸಿಯಾಟಲ್ ನಗರದ ಇತಿಹಾಸದಲ್ಲೇ ಅತಿ ಹೆಚ್ಚು ಪರಿಹಾರ ಮೊತ್ತಗಳಲ್ಲಿ ಇದೂ ಒಂದಾಗಿದೆ ಎಂದು ವರದಿಯಾಗಿದೆ. ಈ ಮೊತ್ತದ ಪೈಕಿ ಸುಮಾರು 20 ಮಿಲಿಯನ್ ಡಾಲರ್ ಅನ್ನು ನಗರದ ವಿಮಾ ಕಂಪನಿಯು ಭರಿಸಲಿದೆ.
ಆಂಧ್ರಪ್ರದೇಶ ಮೂಲದ ಜಾಹ್ನವಿ ಕಂದುಲ, ಸಿಯಾಟಲ್‌ನ ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ವ್ಯವಸ್ಥೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. 2023ರ ಜನವರಿ 23ರಂದು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಪೊಲೀಸ್ ಗಸ್ತು ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು.
ಪೊಲೀಸ್ ಅಧಿಕಾರಿ ಕೆವಿನ್ ಡೇವ್, ತುರ್ತು ಕರೆಯೊಂದಕ್ಕೆ (Drug Overdose call) ಸ್ಪಂದಿಸಲು ತೆರಳುತ್ತಿದ್ದ ಭರದಲ್ಲಿ, ಗಂಟೆಗೆ 25 ಮೈಲಿ ವೇಗ ಮಿತಿಯಿದ್ದ ರಸ್ತೆಯಲ್ಲಿ ಬರೋಬ್ಬರಿ 74 ಮೈಲಿ (ಸುಮಾರು 119 ಕಿ.ಮೀ) ವೇಗದಲ್ಲಿ ವಾಹನ ಚಲಾಯಿಸುತ್ತಿದ್ದರು. ಡಿಕ್ಕಿಯ ರಭಸಕ್ಕೆ ಜಾಹ್ನವಿ ಅವರು ಸುಮಾರು 100 ಅಡಿ ದೂರಕ್ಕೆ ಹಾರಿ ಬಿದ್ದಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖುದ್ದು ರಾಜಧರ್ಮ ಪಾಲಿಸಲಿಲ್ಲ ಮೋದಿಯವರು, ಹಿಮಂತರಿಗೆ ಹೇಗೆ ಉಪದೇಶ ನೀಡಬಲ್ಲರು ಪಾಪ?
ಜಾಹ್ನವಿ ಸಾವಿನ ನಂತರ ಮತ್ತೊಬ್ಬ ಪೊಲೀಸ್ ಅಧಿಕಾರಿ ಡೇನಿಯಲ್ ಆಡರರ್ ಅವರ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಸಂಭಾಷಣೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಲ್ಲಿ ಆಡರರ್, ಜಾಹ್ನವಿ ಸಾವಿನ ಬಗ್ಗೆ ಲಘುವಾಗಿ ಮಾತನಾಡುತ್ತಾ, “ಆಕೆಯ ಪ್ರಾಣಕ್ಕೆ ಸೀಮಿತ ಮೌಲ್ಯವಿದೆ (Limited value), ನಗರ ಆಡಳಿತ ಒಂದು ಚೆಕ್ ಬರೆದುಕೊಟ್ಟರೆ ಸಾಕು” ಎಂದು ನಗುತ್ತಾ ಹೇಳಿದ್ದ ದೃಶ್ಯಗಳು ಬಹಿರಂಗಗೊಂಡಿದ್ದವು.
ಭಾರತ ಸರ್ಕಾರವು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸೂಕ್ತ ತನಿಖೆಗೆ ಒತ್ತಾಯಿಸಿತ್ತು. ಸಾರ್ವಜನಿಕರ ಆಕ್ರೋಶದ ಬಳಿಕ ಅಧಿಕಾರಿ ಆಡರರ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅಪಘಾತವೆಸಗಿದ್ದ ಅಧಿಕಾರಿ ಕೆವಿನ್ ಡೇವ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿತ್ತಾದರೂ, ನಿರ್ಲಕ್ಷ್ಯದ ಚಾಲನೆಗಾಗಿ ಅವರಿಗೆ 5,000 ಡಾಲರ್ ದಂಡ ವಿಧಿಸಿ, ಇಲಾಖೆಯಿಂದ ವಜಾಗೊಳಿಸಲಾಗಿತ್ತು.
ಕುಟುಂಬದ ಪರ ವಕೀಲೆ ಎರಿಕಾ ಇವಾನ್ಸ್ ಪ್ರತಿಕ್ರಿಯಿಸಿ, “ಜಾಹ್ನವಿ ಸಾವು ಅತ್ಯಂತ ನೋವು ತರುವ ಸಂಗತಿ. ಆಕೆಯ ಜೀವ ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಸಮುದಾಯಕ್ಕೆ ಅಮೂಲ್ಯವಾಗಿತ್ತು. ಹಣದಿಂದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಈ ಪರಿಹಾರವು ನೊಂದ ಕುಟುಂಬಕ್ಕೆ ಒಂದಷ್ಟು ನೆಮ್ಮದಿ ನೀಡಬಹುದು” ಎಂದು ತಿಳಿಸಿದ್ದಾರೆ.





