ಸಿರಾಟ್- ಪರಿಹಾರ ನೀಡುವ ಕಥನಾತ್ಮಕ ಮಾಧ್ಯಮವಲ್ಲ. ವಿವರಣೆ, ಸಮಾಧಾನ ಅಥವಾ ಮುಕ್ತಾಯಗಳನ್ನು ನೀಡದೆ, ಪ್ರೇಕ್ಷಕರನ್ನು ಒಂದು ಅನುಭವಾತ್ಮಕ ಸ್ಥಿತಿಯಲ್ಲಿ ನಿಲ್ಲಿಸುವ ಚಿತ್ರ. ಸಿರಾಟ್ ಸೇತುವೆಯಂತೆ, ಇದು ಅಸ್ಥಿರ, ಅಪೂರ್ಣ ಮತ್ತು ಅಪಾಯಕಾರಿ. ಚಿತ್ರದ ತಾತ್ವಿಕತೆ ಅಡಗಿರುವುದು ಅಲ್ಲಿಯೇ.
ಹದಿನೇಳನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸ್ಪೇನ್ ದೇಶದ ಒಲಿವರ್ ಲ್ಯಾಕ್ಸ್ ನಿರ್ದೇಶನದ ‘ಸಿರಾಟ್'(Sirât-2025) ಸಿನಿಮಾ ಅನುಭವದ ಗಡಿಗಳನ್ನು ವಿಸ್ತರಿಸಿದ ಚಿತ್ರ. ಬೆಳಕನ್ನೂ ಸೇರಿದಂತೆ ತನ್ನ ಹತ್ತಿರ ಬರುವ ಎಲ್ಲ ದ್ರವ್ಯರಾಶಿಯನ್ನೂ ಸೆಳೆಯುವ, ಬ್ಲಾಕ್‍ಹೋಲ್‍ನಂತೆ ಪ್ರೇಕ್ಷಕನ ಪಂಚೇಂದ್ರಿಯಗಳನ್ನೂ ತಡವುತ್ತಾ, ಯೋಚಿಸಲೂ ಅವಕಾಶ ನೀಡದ ರೀತಿಯಲ್ಲಿ ಅವನ ಮೈಮನಸ್ಸನ್ನು ತನ್ನೊಳಗೆ ಸೆಳೆದುಕೊಳ್ಳುವ ಈ ಚಿತ್ರವು ಒಂದು ರುದ್ರ ಭಯಂಕರ ದೃಶ್ಯನಿಧಿ.
ಒಲಿವರ್ ಲ್ಯಾಕ್ಸ್ ನಿರ್ದೇಶಿಸಿದ ಸಿರಾಟ್ ಕೇವಲ ಪ್ರೇಕ್ಷಕನನ್ನು ಸೆಳೆಯುವ, ಅಚ್ಚರಿ, ಆಘಾತ ತರುವ ರೋಮಾಂಚನಕಾರಿ ದೃಶ್ಯಗಳ ಸರಮಾಲೆಯಲ್ಲ; ಪೌರಾಣಿಕ ಸಂಕೇತಗಳು, ಕುಣಿಯಲು ಪ್ರೇರೇಪಿಸುವ ಸಂಗೀತ, ಹೃದಯವನ್ನು ಹಿಂಡುವ ನೋವು, ಪ್ರಾಣ ಒತ್ತೆ ಇಟ್ಟು ನಡೆಸುವ ಸಾಹಸ, ಅನಿರೀಕ್ಷಿತ ಸಾವುಗಳು ಮತ್ತು ಮರುಭೂಮಿಯ ಭೌತಿಕ ಕಠೋರತೆಯನ್ನು ಒಟ್ಟುಗೂಡಿಸಿ ಪಂಚೇಂದ್ರಿಯಗಳನ್ನು ಕಲಕಿ ಅಸ್ತಿತ್ವವಾದಕ್ಕೆ ಭಾಷ್ಯ ಬರೆದಿರುವ ರಸ್ತೆಯ ಪಯಣದಲ್ಲಿ ನಡೆಯುವ ಕಥನಚಿತ್ರ. 2025ರ ಸಾಲಿನ ಕಾನ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರ ಮಂಡಳಿಯ ಪ್ರಶಸ್ತಿ ಪಡೆದು, ಅಕಾಡೆಮಿ ಪ್ರಶಸ್ತಿಯ(ಆಸ್ಕರ್) ಅತ್ಯುತ್ತಮ ವಿದೇಶೀ ಚಿತ್ರ ವಿಭಾಗದಲ್ಲಿ ಸ್ಪೇನ್‌ನ ಅಧಿಕೃತ ಚಿತ್ರವಾಗಿಯೂ ಆಯ್ಕೆಯಾಗಿರುವ ಸಿರಾಟ್, ಇತ್ತೀಚಿನ ವರ್ಷಗಳಲ್ಲಿ ವಿಮರ್ಶಾ ವಲಯದಲ್ಲಿ ಅತ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿರುವ ಚಿತ್ರ.
ಇದನ್ನು ಓದಿದ್ದೀರಾ?: ಸಾವು, ಸ್ಮಶಾನ, ಗೋರಿ, ಸ್ಮಾರಕ- ಚದುರಿದ ಚಿತ್ರಗಳು
ಸಿರಾಟ್– ‘ಅನಿರೀಕ್ಷಿತ ತಿರುವುಗಳ ರೋಮಾಂಚನಕಾರಿ ರಸ್ತೆ ಪಯಣ’ –ಇದು ಚಿತ್ರದ ಟ್ಯಾಗ್‌ಲೈನ್. ಇದು ಸಿನೆಮಾ ಸಾಗುವ ರೀತಿಗೊಂದು ದಿಕ್ಸೂಚಿ ನೀಡುತ್ತದೆ. ಚಿತ್ರದ ಮೊದಲ ಭಾಗವು ಬಹುತೇಕ ನಿರೀಕ್ಷಿಸಿದ ಜಾಡಿನಲ್ಲಿಯೇ ಮುಂದುವರಿಯುತ್ತದೆ. ಆದರೆ ಎರಡನೇ ಅಂಕದ ಅಂತ್ಯದ ವೇಳೆಗೆ, ಕಥೆಯೊಳಗೆ ನಾವು ಸಂಪೂರ್ಣವಾಗಿ ಲೀನಗೊಂಡಿರುವಾಗಲೇ, ಆರಾಮವಾಗಿ ಚಿತ್ರ ನೋಡುವ ಅವಕಾಶವನ್ನು ನಿರ್ದೇಶಕ ಅತ್ಯಂತ ವಿನಾಶಕಾರಿ ರೀತಿಯಲ್ಲಿ ಕಸಿದುಕೊಳ್ಳುತ್ತಾನೆ. ಆ ಕ್ಷಣದಿಂದ ಸಿರಾಟ್ ಸಂಪೂರ್ಣವಾಗಿ ಬೇರೆಯೇ ಚಿತ್ರವಾಗಿ ರೂಪಾಂತರಗೊಳ್ಳುತ್ತದೆ.

‘ಮ್ಯಾಡ್ ಮ್ಯಾಕ್ಸ್’ ಸರಣಿ ಚಿತ್ರಗಳ ಕ್ರೂರ ಮತ್ತು ಯಾದೃಚ್ಛಿಕ ಅಂದರೆ ಗೊತ್ತು ಗುರಿಯಿಲ್ಲದ ರಸ್ತೆರೊಚ್ಚಿನ ಹಿಂಸಾಚಾರ ಮತ್ತು ಪೀಟರ್ ವೇಯರ್ ಅವರ ಪಿಕ್ನಿಕ್ ಅಟ್ ‘ಹ್ಯಾಂಗಿಂಗ್ ರಾಕ್'(1985) ಚಿತ್ರದ ಆಧ್ಯಾತ್ಮಿಕ–ಅಸ್ತಿತ್ವಾತ್ಮಕ ಭಾವಲೋಕದ ಮಧ್ಯೆ ಎಲ್ಲೋ ನೆಲೆಸಿರುವಂತೆ ಕಾಣುವ ಈ ಚಿತ್ರದ ಕಥನವನ್ನು ಲ್ಯಾಕ್ಸ್ ಎರಡು ಗಂಟೆಗಳ ಕಾಲ ಟೋನ್, ಕಲ್ಪನೆಗಳು ಮತ್ತು ಭಾವನೆಗಳ ನಿರಂತರ ಬದಲಾವಣೆಯಿಂದ ತುಂಬುತ್ತಾರೆ. ಹಾಗೆ ನೋಡಿದರೆ ಈ ಚಿತ್ರದ ತಾತ್ವಿಕ ನೆಲೆಯನ್ನು ಹೆನ್ರಿ ಜಾರ್ಜಸ್ ಕ್ಲೌಜಾಟ್‍ನ ಫ್ರೆಂಚ್ ಚಿತ್ರ ‘ವೇಜಸ್ ಆಫ್ ಫಿಯರ್'(1953) ಚಿತ್ರದಲ್ಲಿ ಗುರುತಿಸಬಹುದು. ಸಿರಾಟ್‍ನಲ್ಲಿ ಸಣ್ಣ ಕುಟುಂಬಕ್ಕೆ ಸೇರಿದ ಪ್ರಿಯ ವ್ಯಕ್ತಿಯ ಹುಡುಕಾಟದ ಕಥೆಯೇ ನಮ್ಮ ಕಾಲದ ಅತಿದೊಡ್ಡ ಜಾಗತಿಕ ಸಂಕಟಗಳಲ್ಲಿ ಒಂದಕ್ಕೆ ರೂಪಕವಾಗುತ್ತದೆ. ಈ ಪ್ರಯತ್ನ ನಿಸ್ಸಂದೇಹವಾಗಿ ಮಹತ್ವಾಕಾಂಕ್ಷಿಯದ್ದೇ. ಆದರೆ ಚಿತ್ರದ ಎರಡು-ಮೂರನೇ ಭಾಗದಲ್ಲಿ ಪಡೆದುಕೊಳ್ಳುವ ಈ 180 ಡಿಗ್ರಿ ತೀವ್ರ ತಿರುವು ಮತ್ತು ಕಥೆಯ ಹಠಾತ್ ಬದಲಾವಣೆಗಳಿಂದ ಕೊನೆಯ ಭಾಗವನ್ನು ನೋಡಲು ಪ್ರೇಕ್ಷಕ ಅತಿಯಾಗಿ ಚಡಪಡಿಸುವುದು ಖಂಡಿತ. ಪ್ರೇಕ್ಷಕನಿಗೆ ಯೋಚಿಸಲೂ ಅವಕಾಶವಿಲ್ಲದಂತೆ ಒಂದರ ಹಿಂದೆ ಮತ್ತೊಂದರಂತೆ ಘಟಿಸುವ ಅನಿರೀಕ್ಷಿತ ಸಾವುಗಳ ಸರಣಿ ಮತ್ತು ಅಂಥ ಘಟನೆಗಳನ್ನು ಸಂಯೋಜಿಸಿರುವ ರೀತಿಯನ್ನು ವೀಕ್ಷಿಸಿದ ಪ್ರೇಕ್ಷಕನಿಗೆ ಮೃತ್ಯುದರ್ಶನವಾದಂತಾಗಿ ಕೊರಳು ಬಿಗಿದ ಅನುಭವವಾಗುತ್ತದೆ. ಚಿತ್ರಮಂದಿರದಲ್ಲೇ ಪ್ರೇಕ್ಷಕ ಅಸ್ಥಿರಗೊಳುವಷ್ಟು ಸಾವು ಎದುರಿಗೆ ಬಂದು ನಿಲ್ಲುತ್ತದೆ. ತೀವ್ರ ಆಘಾತದಿಂದ ತತ್ತರಿಸುವ ಪ್ರೇಕ್ಷಕನ ಪಾಲಿಗೆ ಉಳಿಯುವುದು- ಉಳಿದವರು ಹೇಗೆ ಸಾಯುವರೋ ಎನ್ನುವ ಆತಂಕ ಅಥವಾ ಅವರಾದರೂ ಉಳಿಯಲಿ ಎನ್ನುವ ಪ್ರಾರ್ಥನೆಯಷ್ಟೇ!
ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಲ್ಯಾಕ್ಸ್ ಅವರ ಉದ್ದೇಶವಾಗಿದ್ದರೆ ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಅವರ ಉದ್ದೇಶ ಅದನ್ನೂ ಮೀರಿದ್ದು ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ, ಒಂದೆಡೆ ಪ್ರಕೃತಿಯೇ ಮುನಿದು ಮಗ ಮತ್ತು ಮುದ್ದಿನ ನಾಯಿಮರಿಯನ್ನು ಬಾಯ್ದೆರೆದಂತೆ ಕಬಳಿಸಿದರೆ, ಮತ್ತೊಂದೆಡೆ ನಿಂತ ನೆಲವೇ ಸ್ಫೋಟಿಸಿ ಮನುಷ್ಯರು ಕ್ಷಣಾರ್ಧದಲ್ಲಿ ಭಸ್ಮವಾಗುವ ನಶ್ವರತೆ ರಾಚುತ್ತದೆ. ವಿಮೋಚನೆಯೇ ಇಲ್ಲದ ಪರಿಸ್ಥಿತಿಯಲ್ಲಿ ಕಾಣೆಯಾದ ಮಗಳ ಹುಡುಕಾಟದ ಉದ್ದೇಶವೇ ಮರೆಯಾಗುತ್ತದೆ. ಉಳಿಯುವುದೇ ಮುಖ್ಯವಾಗಿ ಹುಡುಕಾಟವೇ ಅರ್ಥಹೀನವೆನಿಸತೊಡಗುತ್ತದೆ. ಆ ಹಂತದಲ್ಲಿ ಅಸ್ತಿತ್ವವಾದದ ನಿಲುವು ಪ್ರಕಟವಾಗುವ ಗಳಿಗೆಗಳನ್ನು ದೃಶ್ಯಮಾಧ್ಯಮದಲ್ಲಿ ಬೆಚ್ಚಿಬೀಳಿಸಿಯೇ ನಿರ್ದೇಶಕ ಕಟ್ಟಿರುವುದು ಗಾಢವಾಗಿ ತಟ್ಟುತ್ತದೆ.
ಸಿರಾಟ್ ಚಿತ್ರದಲ್ಲಿ ಕಥೆ ಮತ್ತು ಕಥನ ಒಂದು ನೆಪ. ಕಥಾವಸ್ತುವಿನ ಮಟ್ಟದಲ್ಲಿ ಸಿರಾಟ್ ಪರಿಚಿತವೆನಿಸುವಷ್ಟು ಸರಳವಾಗಿದೆ. ಲೂಯಿಸ್(ಸರ್ಜೀ ಲೋಪೆಸ್) ಮತ್ತು ಅವನ 12 ವರ್ಷದ ಮಗ ಎಸ್ಟೆಬಾನ್(ಬ್ರುನೋ ನುನ್ಯೆಸ್), ನೃತ್ಯಗತಿಯನ್ನು ಉತ್ತೇಜಿಸುವ ಎಲೆಕ್ಟ್ರಾನಿಕ್ ಸಂಗಿತ ಆವರಿಸಿರುವ, ಪರ್ವತಶ್ರೇಣಿಗಳಿಂದ ಸುತ್ತುವರೆದ, ಬಿಸಿಲಿನಿಂದ ಉರಿಯುತ್ತಿರುವ ಮೊರೊಕ್ಕೊದ ಬಿಸಿಯಾದ ರುದ್ರಭಯಂಕರ ಮರುಭೂಮಿಯ ಬಯಲಿಗೆ ಬರುತ್ತಾರೆ. ಅಲ್ಲಿ ಆಯೋಜಿಸಿರುವ ರೇವ್ ಪಾರ್ಟಿಯಲ್ಲಿ ಕಿವಿಗೆ ಅಪ್ಪಳಿಸುವ ಸಂಗೀತ, ಯಜ್ಞಕುಂಡದಲ್ಲಿ ನರ್ತಿಸುವ ಶಿವಗಣಗಳಂತೆ ಜಗತ್ತನ್ನು ಮರೆತು ಆಮೋದದ ಜಗತ್ತನ್ನು ಸೃಷ್ಟಿಸಿ ತನ್ಮಯವಾಗಿ ಕುಣಿಯುತ್ತಿರುವ ಸಮೂಹವಿದೆ. ಸಂಗೀತ, ಡ್ರಗ್ ನಶೆಯ ಮಂಪರಿನಲ್ಲಿ ಸ್ವಚ್ಛಂದವಾಗಿ ಕಾಲಕಳೆಯುವ ಈ ರೇವ್‌ಪಾರ್ಟಿಯ ಪರಿಸರದಲ್ಲಿ ಸಂಪೂರ್ಣ ಅಸಂಬದ್ಧವಾಗಿ ಕಾಣಿಸುವ ಅಪ್ಪ-ಮಗ ಐದು ತಿಂಗಳ ಹಿಂದೆ ಮನೆಬಿಟ್ಟು ಹೊರಟುಹೋಗಿರುವ ತಮ್ಮ ಮಗಳು ಮತ್ತು ಅಕ್ಕ ಮಾರ್ನ್‍ನನ್ನು ಹುಡುಕಲು ಆಕೆಯ ಚಿತ್ರವಿರುವ ಮಾಹಿತಿಕಾರ್ಡನ್ನು ಅವರು ಹಂಚುತ್ತಿದ್ದಾರೆ. ಅಲ್ಲಿ ಸಿಗದ ಮಗಳು ಮರುಭೂಮಿಯ ಮತ್ತೊಂದೆಡೆ ಮಾರಿಶಿಯಾನಾದಲ್ಲಿ ಗುಪ್ತವಾಗಿ ನಡೆಯುತ್ತಿರುವ ರೇವ್ ಕೂಟದಲ್ಲಿರಬಹುದೆಂದು ಅನುಭವೀ ರೇವರ್‌ಗಳು ಸಂಶಯ ವ್ಯಕ್ತಪಡಿಸುತ್ತಾರೆ. ಆದರೆ ಈ ರೇವ್ ಪಾರ್ಟಿಯ ಮೇಲೆ ಶಸ್ತ್ರಸಜ್ಜಿತ ಪಡೆಗಳು ಹಠಾತ್ ಎರಗಿ ಎಲ್ಲರನ್ನು ಅವರವರ ದೇಶಗಳಿಗೆ ಹಿಂತಿರುಗಿಸಲು ಮುಂದಾಗುತ್ತವೆ.

ಇದನ್ನು ಓದಿದ್ದೀರಾ?: ನೋಡಬೇಕಾದ ಚಿತ್ರ: ಅಲೆಕ್ಸಾಂಡ್ರೆ ಕೊಬೆರಿಡ್ಜೆ ಅವರ ‘ಡ್ರೈ ಲೀಫ್’
ಜೇಡ್(ಜೇಡ್ ಓಕಿಡ್), ಟೊನಿನ್(ಜೋಶ್ ಜನವರಿ), ಬಿಗ್ವಿ(ರಿಚರ್ಡ್ ಬೆಲ್ಲಾಮಿ), ಸ್ಟೆಫಿ(ಸ್ಟೆಫಾನಿಯಾ ಗಡ್ಡಾ), ಮತ್ತು ಜೋಷ್(ಜೋಷುವಾ ಲಿಯಂ ಹೆಂಡರ್ಸನ್) –ಎರಡು ವಾಹನವಿರುವ ವಿಲಕ್ಷಣ ವರ್ತನೆಯ ಐವರಿರುವ ಗುಂಪು ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡು ಬೇರೆ ದಾರಿ ಹಿಡಿಯುತ್ತದೆ. ಆಗ ಅಕ್ಕನ ಹುಡುಕಾಟಕ್ಕೆ ಎಸ್ಟೆಬಾನ್‌ನ ಒತ್ತಾಯದಂತೆ ತಂದೆ ಆ ಗುಂಪನ್ನು ಹಿಂಬಾಲಿಸುತ್ತಾನೆ. ಆರಂಭದಲ್ಲಿ ಹಿಂಜರಿಕೆಯಿದ್ದರೂ, ಆ ಗುಂಪು ತಂದೆ–ಮಗನನ್ನು ತಮ್ಮೊಂದಿಗೆ ಸಾಗಲು ಅನುಮತಿಸುತ್ತದೆ. ತಿಕ್ಕಲರಂತೆ ಕಾಣುವ ರೇವರ್ ಗುಂಪಿನ ಜೊತೆ ಹೋಗಲು ಲೋಪೆಸ್ ಮತ್ತು ಎಸ್ಟೆಬಾನ್ ಹಾದಿಯನ್ನು ಬದಲಿಸುವುದು ಚಿತ್ರದ ಕಥೆಗೆ ಸಿಗುವ ತಿರುವಿನ ರೂಪಕವೆನ್ನುವಂತೆ ಚಿತ್ರಿಸಲಾಗಿದೆ. ರೇವ್ ತಂಡದಲ್ಲಿರುವ ಮೂವರು ಪುರುಷರಲ್ಲಿ ಒಬ್ಬನಿಗೆ ಬಲಗೈನ ಮುಷ್ಠಿಭಾಗವಿಲ್ಲ. ಮತ್ತೊಬ್ಬನಿಗೆ ಒಂದು ಕಾಲಿಲ್ಲ. ಉಕ್ಕಿನ ಕೃತಕ ಕಾಲಿನಲ್ಲಿ ಸಹಜವಾಗಿ ನಡೆಯಬಲ್ಲ. ಜೀವವನ್ನೇ ಪಣಕ್ಕೊಡ್ಡಿ ಸಾಹಸಕ್ಕೆಳೆಸುವ ಈ ವಿಲಕ್ಷಣ ಗುಂಪು ಮೊರೊಕ್ಕೊದ ಪರ್ವತಗಳು ಮತ್ತು ಮರುಭೂಮಿಗಳನ್ನು ದಾಟುತ್ತಾ, ರಾಷ್ಟ್ರದ ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಯುದ್ಧಗಳಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸುತ್ತದೆ. ಈ ವಿಭಿನ್ನ ಪಾತ್ರಗಳು ಪ್ರಯಾಣದಲ್ಲಿ ಪರಸ್ಪರದಿಂದ ಏನಾದರೂ ಕಲಿಯುವ ಸ್ಥಿತಿಗೆ ತಲುಪುತ್ತಾರೆ. ಲೂಯಿಸ್ ತನಗಿಂತ ಸಂಪೂರ್ಣ ವಿಭಿನ್ನ ಜೀವನ ನಡೆಸುವ ಜನರ ಬಗ್ಗೆ ತನ್ನ ದೃಷ್ಟಿಕೋನವನ್ನು ನಿರಂತರವಾಗಿ ಪ್ರಶ್ನಿಸಿಕೊಳ್ಳುತ್ತಾನೆ. ಮಗ ಎಸ್ಟೆಬಾನ್‍ಗೆ ಕುಟುಂಬ ಎಂದರೆ ಕೇವಲ ರಕ್ತಸಂಬಂಧವಷ್ಟೇ ಅಲ್ಲ ಎಂಬುದು ನೇರವಾಗಿ ಅನುಭವಕ್ಕೆ ಬರುತ್ತದೆ. ಸಂಕಟದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾ, ಅಡೆ ತಡೆಯೊಡ್ಡುವ ದುರ್ಗಮ ಪ್ರಕೃತಿಯನ್ನು ಭೇದಿಸುವ ಸಾಹಸಗಳಲ್ಲಿ ರೋಮಾಂಚನ ಅನುಭವಿಸುತ್ತಾ. ಸಂತಸವನ್ನು ಹಂಚಿಕೊಳ್ಳುವ ಕ್ರಿಯೆಯಲ್ಲಿ ಸಾರ್ಥಕ ಕಾಣುತ್ತಾ ಅಚ್ಚರಿಯಾಗುವಷ್ಟು ಬದುಕು ಮಧುರವಾಗಿರುವ ಸಮಯದಲ್ಲೇ… ಒಂದು ಭಯಾನಕ ಘಟನೆ ಸಂಭವಿಸುತ್ತದೆ.
ಆ ಘಟನೆ ಸಿನಿಮಾದ ಅತ್ಯಂತ ನಿರ್ಣಾಯಕ ತಿರುವು. ಕಥನದ ಪ್ರಮುಖ ಭಾಗ. ಅದನ್ನು ವಿವರಿಸಿದರೆ ಪ್ರೇಕ್ಷಕರು ಅನುಭವಿಸಬೇಕಾದ ಆಘಾತ, ಭಾವನಾತ್ಮಕ ತೀವ್ರತೆ ಎಲ್ಲವೂ ಕಸಿದುಕೊಂಡಂತಾಗುತ್ತದೆ. ಇದು ನಿರ್ದೇಶಕ ಹೆಣೆದಿರುವ ಚತುರ ಕಥನ ತಂತ್ರ: ಪ್ರೇಕ್ಷಕರ ಮನಸ್ಸನ್ನು ಹೆಚ್ಚು ಆಘಾತಕಾರಿ ಮತ್ತು ಗಾಢವಾಗಿ ಸ್ಪರ್ಶಿಸುವ ಘಟನೆ. ಈ ವಿಲಕ್ಷಣ ತಂಡದ ಸಾಹಸ ಯಾತ್ರೆ ಆರಂಭವಾದಾಗ ಲ್ಯಾಕ್ಸ್ ಒಂದು ಸೂಕ್ಷ್ಮವಾದ ಭೀತಿಯ ವಾತಾವರಣವನ್ನು ನಿರ್ಮಿಸಿದರೂ, ಅಲ್ಲಲ್ಲಿಯೇ ನಿರಾಳವಾಗುವ ಸನ್ನಿವೇಶಗಳನ್ನು ಸೃಷ್ಟಿಸಿದ್ದಾನೆ. ಹಾಗಾಗಿ ಎದುರಾದ ಅಪಾಯಕ್ಕೆ ಪರಿಹಾರ ಸಾಧ್ಯವೆಂಬ ನಂಬಿಕೆಯಲ್ಲಿದ್ದ ಪ್ರೇಕ್ಷಕನಿಗೆ ಇಲ್ಲಿ ಸಂಭವಿಸುವುದು ಎಷ್ಟು ಆಘಾತಕಾರಿಯೆಂದರೆ, ಆ ದೃಶ್ಯದ ನಂತರ ಆತ ಚಿತ್ರದಲ್ಲಿ ಮತ್ತೆ ಲೀನವಾಗಲು ದೀರ್ಘ ಸಮಯ ಹಿಡಿಯುತ್ತದೆ. ಅದಾದ ಬಳಿಕ ಪರಿಸ್ಥಿತಿ ಇನ್ನಷ್ಟು ವಿನಾಶಕಾರಿಯಾಗುತ್ತದೆ.
ಇದನ್ನು ಓದಿದ್ದೀರಾ?: ಸೂಪರ್‌ಸ್ಟಾರ್ ಮಿಥ್ ಮುರಿದ ಮಮ್ಮುಟ್ಟಿ- ಮಾದರಿಯಾಗುವರೇ?
ಚಿತ್ರದ ಕೊನೆಯ ದೃಶ್ಯಗಳಲ್ಲಿ ನಿರ್ದೇಶಕ ಕೇವಲ ಸಾಹಸ-ದುರಂತದ ಒಂದು ಕಥೆಯನ್ನು ಹೇಳುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಯುದ್ಧ, ಹಿಂಸಾಚಾರ, ಬಡತನ ಅಥವಾ ವಿಪತ್ತಿನ ಕಾರಣದಿಂದ ತಮ್ಮ ದೇಶವನ್ನು ಬಿಟ್ಟು ಹೊರಡಬೇಕಾದ ಜಗತ್ತಿನ ಲಕ್ಷಾಂತರ ನಿರಾಶ್ರಿತರ, ನೆಲೆ ಹುಡುಕುವವರ ಸಂಕಷ್ಟದ ಒಂದು ರೂಪಕವಾಗಿ ನಿರೂಪಿಸಲು ಯತ್ನಿಸಿದ್ದಾರೆ. ತಮ್ಮ ಸುರಕ್ಷತೆಗಾಗಿ ಅವರು ತೆಗೆದುಕೊಳ್ಳುವ ಪ್ರಯಾಣ ಬಹಳ ಅಪಾಯಕರವಾಗಿರುತ್ತದೆ. ಸಮುದ್ರ, ಮರುಭೂಮಿ, ಹಸಿವು, ಹಿಂಸೆ- ಇವುಗಳ ನಡುವೆ ಅವರು ಯಾವ ಕ್ಷಣದಲ್ಲಾದರೂ ಸಾವಿನ ಅಂಚಿನಲ್ಲಿ ನಿಂತಿರುವಂತಿರುತ್ತಾರೆ. ಸಿರಾಟ್ ಎಂಬುದು ಇಸ್ಲಾಮಿಕ್ ಧರ್ಮದ ಪ್ರಕಾರ ನರಕದ ಮೇಲಿನ ಸೂಕ್ಷ್ಮ ಸೇತುವೆ(ಗರುಡ ಪುರಾಣದಲ್ಲಿ ಪ್ರಸ್ತಾಪಿಸಿರುವ ವೈತರಣೀ ನದಿಯಂತೆ, ಅದು). ನ್ಯಾಯ ನಿರ್ಣಯದ ದಿನ(The Day of Judgement) ಆತ್ಮಗಳು ದೇವರನ್ನು ತಲುಪಲು ಕ್ರಮಿಸಬೇಕಾದ ದುರ್ಗಮ ಪಥ. ಲ್ಯಾಕ್ಸ್ ಈ ರೂಪಕವನ್ನು ಚಿತ್ರಭಾಷೆಯಾಗಿ ಪರಿವರ್ತಿಸುತ್ತಾರೆ. ನೆಲಬಾಂಬುಗಳನ್ನು ಹುದುಗಿಸಿಕೊಂಡಿರುವ ನಿರ್ಭಾವುಕ ಮರುಭೂಮಿಯ ಹಾದಿಯು ಅಪಾಯಕಾರಿ ಮತ್ತು ಅನಿಶ್ಚಿತವಾದ ‘ಸಿರಾಟ್’ ರೂಪದಲ್ಲಿ ಪಾತ್ರಗಳಿಗೆ ಎದುರಾಗುತ್ತದೆ.

ಸಿರಾಟ್ ಕೇವಲ ಮರಳುಭೂಮಿಯಲ್ಲಿ ಕಾಣೆಯಾಗಿರುವ ಮಗಳನ್ನು ಹುಡುಕುವ ತಂದೆಯ ಕಥೆಯಲ್ಲ. ಅದು ಸುಲಭ ಉತ್ತರಗಳನ್ನು ನೀಡದ ಜಗತ್ತಿನಲ್ಲಿ ‘ಇರುವುದು'(ಅಸ್ತಿತ್ವ) ಎಂದರೆ ಏನು ಎಂಬ ಪ್ರಶ್ನೆಯನ್ನು ಧ್ಯಾನಿಸುವ ಕಠೋರ, ಮಂತ್ರಮುಗ್ಧಗೊಳಿಸುವ ಚಿತ್ರ. ಇಲ್ಲಿ ಮರಳುಭೂಮಿ ಕೇವಲ ಕಥಾಭಿತ್ತಿ ಮಾತ್ರವಲ್ಲ. ಮಾನವನ ಹಂಬಲಗಳಿಗೆ ಬ್ರಹ್ಮಾಂಡ ಸ್ಪಂದಿಸುವುದಿಲ್ಲ ಎಂಬ ಅಸ್ತಿತ್ವವಾದಿ ಕಲ್ಪನೆಯನ್ನು ನೆನಪಿಸುವ ವಿಶಾಲ, ನಿರ್ಭಾವುಕ, ಅತಿಯಾದ ಮೌನದಿಂದ ತುಂಬಿದ ಪ್ರಪಂಚ. ನಿರಂತರ ಹುಡುಕಾಟದಲ್ಲಿ ತಂದೆಯು ಯಶಸ್ವಿಯಾಗುತ್ತಾನೆಯೇ ಇಲ್ಲವೇ ಎಂಬುದು ಮುಖ್ಯವಾಗದು. ಅಸ್ತಿತ್ವವಾದದ ಮೂಲ ತಾತ್ವಿಕತೆಯು(existence precedes essence) ಹೇಳುವಂತೆ ಹುಡುಕಾಟವೇ ಅವನ ಬದುಕಿಗೆ ಆಕೃತಿ ನೀಡುತ್ತದೆ.
ಇದನ್ನು ಓದಿದ್ದೀರಾ?: ಕೈರೋ ಸ್ಟೇಷನ್: ಅರಬ್ ಸಿನೆಮಾದ ಆಧುನಿಕತೆಯ ಉದಯ ಮತ್ತು ಅಲಕ್ಷಿತ ಮಾನವನ ದುರಂತ
ಲ್ಯಾಕ್ಸ್ ಅವರ ಚಿತ್ರಕಲಾ ಶೈಲಿಯು ಹಾಲಿವುಡ್‍ಗಿಂಥ ಯೂರೋಪಿಯನ್ ಕಲಾತ್ಮಕ ಪಂಥದ ಶೈಲಿಗೆ ಅನುಗುಣವಾಗಿದೆ. ಬೆಚ್ಚಿಬೀಳಿಸುವ ಕಥನ ತಂತ್ರವಿದ್ದರೂ ವಿಶಿಷ್ಟವಾದ ಮನೋವೈಜ್ಞಾನಿಕತೆ, ಮಾನವ ಸಮಸ್ಯೆ, ತಾತ್ವಿಕ ಸಂಘರ್ಷ, ಧರ್ಮ, ಯುದ್ಧ, ಸ್ಮೃತಿ, ರಾಜಕೀಯದ ಎಳೆಗಳು, ನೈತಿಕ ಬಿಕ್ಕಟ್ಟಿನ ಪ್ರಶ್ನೆಗಳು, ನಿಜಜೀವನದ ವ್ಯಕ್ತಿಗಳ ಅಭಿನಯ, ತೆರೆದ ಅಂತ್ಯ ಇತ್ಯಾದಿ… ಹೀಗೆ ಯೂರೋಪಿಯನ್ ಶೈಲಿಯ ವಿಶಿಷ್ಟ ಸಂಗತಿಗಳನ್ನು ಅಳವಡಿಸಿಕೊಂಡಿದ್ದಾರೆ. ದೀರ್ಘ ಶಾಟ್‌ಗಳು ಸಮಯವನ್ನು ವಿಸ್ತರಿಸುತ್ತವೆ. ಸಂಭಾಷಣೆ ಅತಿ ಕಡಿಮೆ. ವಿಶಾಲ ದೃಶ್ಯಗಳಲ್ಲಿ ಮಾನವರು ಅನಂತ ದಿಕ್ಕುಗಳ ನಡುವೆ ಸಣ್ಣ ಬಿಂದುಗಳಂತೆ ಕಾಣುತ್ತಾರೆ. ಮಧ್ಯೆ ಮಧ್ಯೆ ಬರುವ ರೇವ್ ಸಂಗೀತ, ನೃತ್ಯ, ಹಾಸ್ಯ, ವಿರಾಮದ(ರಿಲೀಫ್) ಬಿಡುವು ನೀಡುತ್ತವೆ. ಆದರೆ ಆ ಉಲ್ಲಾಸ ಕ್ಷಣಿಕ. ಜನಸಮೂಹದಲ್ಲಿದ್ದರೂ ನಾವು ನಮ್ಮ ಆಯ್ಕೆಗಳೊಂದಿಗೆ ಅಂತಿಮವಾಗಿ ಒಂಟಿಯಾಗಿಯೇ ಇರುತ್ತೇವೆ ಎಂಬುದನ್ನು ಚಿತ್ರ ನೆನಪಿಸುತ್ತದೆ. ಇದನ್ನು ತೆರೆಯ ಮೇಲೆ ಮೂರ್ತಗೊಳಿಸಲು ಅವರು ಬಳಸಿರುವ ಸಿನೆಮಾ ಸಾಧನಗಳು ಪರಿಣಾಮಕಾರಿಯಾಗಿವೆ. ನಿರ್ಜನ ಪ್ರದೇಶದಲ್ಲಿ ಕಂಡ ಕುರಿಗಾಹಿಗೆ ಸಹಾಯಕ್ಕಾಗಿ ಮೊರೆಯಿಟ್ಟರೂ ದೊರೆಯದ ಕಠೋರತೆ. ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ತಂಡ ಮರುಭೂಮಿಯ ಅನಂತ ಬಯಲಿನಲ್ಲಿ ಗುರಿಯಿಲ್ಲದೆ ನಡೆದು ಸುಸ್ತಾದ ಸಮಯದಲ್ಲಿ ಜೇಡ್, ಟೊನಿನ್ ಮತ್ತು ಬಿಗ್ವಿ ತಮ್ಮೆಲ್ಲ ಹತಾಶೆಗಳನ್ನು ಹೊರಚೆಲ್ಲುವಂತೆ ಸಂಗೀತ ಹಾಕಿಕೊಂಡು ಕುಣಿಯುತ್ತಾರೆ. ದೈಹಿಕ ಸವಾಲನ್ನು ಮೆಟ್ಟಿ ಉಕ್ಕಿನ ಕಾಲನ್ನೇ ಅಪ್ಪಳಿಸಿ ಟೊನಿನ್ ಮಾಡುವ ನೃತ್ಯವು ಜಗತ್ತನ್ನು ಲಯಗೊಳಿಸುವ ಶಿವತಾಂಡವದಂತೆ ಬಾಸವಾಗುತ್ತಿರುವಾಗಲೇ ಭಸ್ಮಾಸುರನ ಅಂತ್ಯವಾಗಿ ಸ್ಫೋಟಗೊಳ್ಳುತ್ತದೆ. ನಂತರ ನಡೆಯುವ ಮಾನವ ಪ್ರಯತ್ನಗಳ ಸೋಲು, ಹತಾಶೆ ಮನುಷ್ಯನ ಅಸ್ತಿತ್ವಕ್ಕೇ ಸವಾಲಾಗಿ ನೆಲಬಾಂಬು ಹುದುಗಿರುವ ಮರುಭುಮಿಯು ಸಾವಿನ ಸೆರೆಮನೆಯಾಗುತ್ತದೆ. ಹಾಗಾಗಿ ದೃಶ್ಯಗಳು ಮೂಡಿಸುವ ಆಳವಾದ ಪರಿಣಾಮ ಅಸ್ವಸ್ಥಗೊಳಿಸುವಂತಿದೆ. ಇವು ಅಸ್ತಿತ್ವವಾದಿ ಚಿಂತನೆಯ ದಾರ್ಶನಿಕತೆಯನ್ನು ಇನ್ನಷ್ಟು ಗಾಢಗೊಳಿಸಿವೆ. ನಾವು ಪಾತ್ರಗಳ ಒಂಟಿತನ, ಪರಕೀಯತೆ, ಸಂಕಟ, ಅಸಹಾಯಕತೆ, ಪ್ರಕೃತಿಯ ನಿರ್ಭಾವುಕತೆಯನ್ನು ಕೇವಲ ನೋಡುವುದಲ್ಲ, ಅನುಭವಿಸುತ್ತೇವೆ.
ಜಗತ್ತಿನಲ್ಲಿರುವ ನಿರಾಶ್ರಿತರು, ಅಸಹಾಯಕರು ಮನುಷ್ಯ ಘನತೆ, ಗೌರವ, ಸಹಜನರೊಡನೆ ಪ್ರೀತಿ, ಕುಟುಂಬ ಬಾಂಧವ್ಯ ಭಯವಿಲ್ಲದೆ ಬದುಕಬಹುದಾದ ಒಂದು ಭದ್ರತೆ ನೀಡುವ ನೆಲವನ್ನು ಹುಡುಕುವ ರೀತಿಯಲ್ಲೇ ಗೊತ್ತು ಗುರಿಯಿಲ್ಲದೆ ಅಲೆಯುವ ಚಿತ್ರದ ಪಾತ್ರಗಳೂ ತಮ್ಮ ಬದುಕಿನ ಅರ್ಥವನ್ನು, ಪ್ರೀತಿಯನ್ನು, ನೆಲೆಯನ್ನು ಒಂದು ಸಂಗೀತ-ನೃತ್ಯದ ಕೂಟದಲ್ಲಿ, ಆಕಸ್ಮಿಕವಾಗಿ ಕೂಡಿಕೊಂಡ ವ್ಯಕ್ತಿಗಳಲ್ಲಿ, ದುರ್ಗಮ ಹಾದಿಯ ಯಾತ್ರೆಯ ಸಾಹಸಗಳಲ್ಲಿ ಹುಡುಕುತ್ತವೆ. ಆದುದರಿಂದ ಈ ಸಿನಿಮಾ ಕೇವಲ ವ್ಯಕ್ತಿಗಳ ವೈಯಕ್ತಿಕ ಪ್ರಯಾಣವಲ್ಲ. ಅದು ಜಗತ್ತಿನಾದ್ಯಂತ ತಮ್ಮ ಜನ ಮತ್ತು ನೆಲ ಕಳೆದುಕೊಂಡ ಜನರ ನೋವು ಮತ್ತು ಹೋರಾಟದ ಪ್ರತಿಬಿಂಬವಾಗಿದೆ. ಅಪಾಯಕರ ಪ್ರಯಾಣವು ಪರಿತ್ಯಕ್ತ ಜನರ ನಿಜಜೀವನದ ಹೋರಾಟ ಮತ್ತು ಆಶೆಯ ಪ್ರತೀಕವೂ ಆಗಿದೆ.
ಚಿತ್ರವು ಕೊನೆಗೊಂಡು ಅಂತಿಮ ಶೀರ್ಷಿಕೆಗಳು ತೆರೆಯ ಮೇಲೆ ಮೂಡತೊಡಗಿದಾಗ ಆವರೆಗೆ ನೋಡಿದ ಸಿನೆಮಾ ದೃಶ್ಯಗಳ ಗುಂಗಿನಿಂದ ಹೊರಬಂದು ಚಿತ್ರದ ಬಗ್ಗೆ ಚಿಂತಿಸಲು ಅವಕಾಶ ಸಿಗುತ್ತದೆ. ಆ ಕ್ಷಣದಲ್ಲಿ ನಿರ್ದೇಶಕನ ಉದ್ದೇಶ ಮತ್ತು ಅವನು ಅನುಸರಿಸಿರುವ ನಿರೂಪಣಾ ವಿಧಾನದ ನಡುವೆ ತಾಳ ತಪ್ಪಿರುವಂತೆ ಭಾಸವಾಗುತ್ತದೆ. ಚಿತ್ರವು ವಿಶೇಷವಾಗಿ ಬದುಕುವ ಹಕ್ಕಿಗಾಗಿ ಹೋರಾಡುತ್ತಿರುವವರ ಜೀವ ಎಷ್ಟು ನಾಜೂಕಾದದ್ದು ಮತ್ತು ಸುಲಭವಾಗಿ ಅಪಾಯಕ್ಕೆ ತುತ್ತಾಗಬಲ್ಲದು ಎಂಬ ಕಠೋರ ಸತ್ಯವನ್ನು ಪ್ರಾಮಾಣಿಕವಾಗಿ ತೋರಿಸಲು ಪ್ರಯತ್ನಿಸುತ್ತಿದೆ ಎಂಬ ಭಾವನೆ ಬರುತ್ತದೆ. ಆದರೆ ಅಂತಿಮ ಭಾಗವು ಆ ರೀತಿಯ ಸತ್ಯಸಂಧ ಮುಖಾಮುಖಿಯನ್ನು ಗಾಢವಾಗಿ ತೋರಿಸಿಲ್ಲವೆಂಬ ಸಂಶಯ ಮೂಡುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಚಿತ್ರದಲ್ಲಿನ ಅನೇಕ ಪಾತ್ರಗಳ ಒಳಜಗತ್ತಿನ ವಿವರಗಳು ದೊರೆಯದಿರುವುದು. ಅವರ ಹಿಂದಿನ ಬದುಕು, ಚಿಂತನೆಗಳು, ಭಾವನೆಗಳು, ಮನಸ್ಸಿನ ಆಳ-ಇವುಗಳನ್ನು ನಾವು ಅನುಭವಿಸುವಷ್ಟು ಪಾತ್ರಪೋಷಣೆಯಾಗದ ಕೊರತೆ ಕಾಣುತ್ತದೆ. ಹಾಗಾಗಿ ಪ್ರೇಕ್ಷಕರು ಅವರೊಂದಿಗೆ ಗಾಢವಾಗಿ ಭಾವನಾತ್ಮಕ ಸಂಪರ್ಕ ಸಾಧಿಸಲಾರರು. ಆದ್ದರಿಂದ ಚಿತ್ರದ ಅಂತ್ಯಭಾಗದ ದಾರುಣತೆ ಅರ್ಥಪೂರ್ಣವಾಗಿ ತಟ್ಟುವುದಕ್ಕಿಂತ, ಕೇವಲ ದಿಗ್ಭ್ರಮೆ ಮೂಡಿಸಲು ಮಾಡಿದ ಪ್ರಯತ್ನದಂತೆ ಕಾಣಿಸುತ್ತದೆ. ದೃಶ್ಯಗಳು ನಿರ್ದಯ ಎನಿಸುತ್ತವೆ.
ಇದನ್ನು ಓದಿದ್ದೀರಾ?: ಎರಡು ಎಕ್ಸ್ಟ್ರಾ ಇಡ್ಲಿಯ ಮಹಿಮೆಯೂ, ಪಾತಾಳ ಭೈರವಿಯ ವಿಜಯವೂ!
ಆದರೆ ನಿರ್ದೇಶನದ ವಿಷಯದಲ್ಲಿ ಲ್ಯಾಕ್ಸ್ ಅವರನ್ನು ಆಕ್ಷೇಪಿಸಲಾಗದು. ಜಾರ್ಜ್ ಮಿಲ್ಲರ್ ಅಥವಾ ಪೀಟರ್ ವೇಯರ್ ಅವರಂತೆ ತಕ್ಷಣ ಗುರುತಿಸಬಹುದಾದ ಶೈಲಿ ಇಲ್ಲಿಲ್ಲ. ಮೊದಲೇ ಹೇಳಿದಂತೆ ಇದು ಸ್ಪಷ್ಟವಾಗಿ ಯುರೋಪಿಯನ್ ಕಲಾಪಂಥದ ಶೈಲಿ. ಸಿನೆಮಾ ಸಾಧನಗಳಾದ ಬಿಂಬ, ಧ‍್ವನಿ, ಮಾತು, ಪರಿಸರ, ತಾಂತ್ರಿಕ ಕುಶಲತೆಗಳನ್ನು ಸೂಕ್ತವಾಗಿ ಬಳಸಿರುವ ಅವರ ನಿರೂಪಣೆಯಲ್ಲಿ ಮರುಭೂಮಿ ಹೇಗೆ ನಿರ್ಜನ ನರಕವಾಗುತ್ತದೆ ಎಂಬುದನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ಸಂಗೀತ ಮತ್ತು ಧ್ವನಿ ವಿನ್ಯಾಸವೂ ಛಾಯಾಗ್ರಹಣದಷ್ಟೇ ಪ್ರಮುಖ. ಮೌರೊ ಹೆರ್ಸೆ ಮರುಭೂಮಿಯನ್ನು, ಪರ್ವತಪಂಕ್ತಿ, ಕಂದರಗಳನ್ನು ಅದ್ಭುತವಾಗಿ ಹಿಡಿದಿದ್ದಾರೆ; ನಂತರ ಅದನ್ನೇ ಕ್ಷಣಿಕ ವಿನಾಶದ ಭೂಮಿಯಾಗಿ ರೂಪಿಸುತ್ತಾರೆ. ಡೇವಿಡ್ ಕಾಂಡಿಂಗ್ ರೇ ಅವರ ಸಂಗೀತವು ಚಿತ್ರದ ಪಾತ್ರವಾದ ಜೇನ್ ಹೇಳುವಂತೆ ಅದು ನೃತ್ಯಕ್ಕಾಗಿ ಇರುವ ಸಂಗೀತ. ಎಲೆಕ್ಟ್ರಾನಿಕ್ ಶಬ್ದದ ಲಯ ವಿನ್ಯಾಸದ ಜೊತೆಗೆ ತುರ್ತು ಸೈರನ್‌ನ ಗುನುಗು, ಭೋಗವಿಲಾಸ ಮತ್ತು ಕ್ರೌರ್ಯದ ಸಂಗಮಕ್ಕೆ ಪರಿಪೂರ್ಣ ಹಿನ್ನೆಲೆಯನ್ನು ಸೃಷ್ಟಿಸುತ್ತದೆ.

ಈ ಸಿನಿಮಾ ಭಾವನಾತ್ಮಕ ರೋಲರ್‌ಕೋಸ್ಟರ್‌ನಂತಿದ್ದು, ಪ್ರತಿಯೊಂದು ತಿರುವೂ ಅದರಲ್ಲಿ ಸಿಲುಕುವವರೆಗೂ ಗೋಚರಿಸುವುದಿಲ್ಲ. ಆದರೆ ಈ ಗೊಂದಲದ ನಡುವೆಯೂ ಕಲಾವಿದರ ಅಭಿನಯವೇ ಆಧಾರಶಕ್ತಿಯಾಗಿದೆ. ತಂದೆಯಾಗಿ ಸರ್ಜೀ ಲೋಪೆಸ್ ಮತ್ತು ಮಗನಾಗಿ ನುನ್ಯೆಸ್ ಇಬ್ಬರೇ ವೃತ್ತಿಕಲಾವಿದರು. ತಮ್ಮ ನಿಜವಾದ ಹೆಸರುಗಳಲ್ಲೇ ಪಾತ್ರವನ್ನು ನಿರ್ವಹಿಸಿರುವ ರೇವ್ ಗುಂಪಿನ ಐವರಿಗೂ ನಟನೆ ಹೊಸದು. ಆದರೆ ಅವರೆಲ್ಲ ಪಾತ್ರಗಳನ್ನು ಜೀವಿಸಿದ್ದಾರೆ.
ಸಿರಾಟ್- ಪರಿಹಾರ ನೀಡುವ ಕಥನಾತ್ಮಕ ಮಾಧ್ಯಮವಲ್ಲ. ವಿವರಣೆ, ಸಮಾಧಾನ ಅಥವಾ ಮುಕ್ತಾಯಗಳನ್ನು ನೀಡದೆ, ಪ್ರೇಕ್ಷಕರನ್ನು ಒಂದು ಅನುಭವಾತ್ಮಕ ಸ್ಥಿತಿಯಲ್ಲಿ ನಿಲ್ಲಿಸುವ ಚಿತ್ರ. ಸಿರಾಟ್ ಸೇತುವೆಯಂತೆ, ಇದು ಅಸ್ಥಿರ, ಅಪೂರ್ಣ ಮತ್ತು ಅಪಾಯಕಾರಿ. ಚಿತ್ರದ ತಾತ್ವಿಕತೆ ಅಡಗಿರುವುದು ಅಲ್ಲಿಯೇ. ಚಿತ್ರದ ಅರ್ಥ, ಗ್ರಹಿಕೆ, ದೇಹ ಮತ್ತು ಕಾಲದ ನಡುವಿನ ಸಂಬಂಧಗಳನ್ನು ಮರುಚಿಂತನೆಗೆ ಒತ್ತಾಯಿಸುವ ಕೃತಿಯಾಗಿ ಸಮಕಾಲೀನ ಚಲನಚಿತ್ರ ಮೀಮಾಂಸೆಗೆ ಮಹತ್ವದ ವ್ಯಾಖ್ಯಾನವನ್ನು ಒದಗಿಸಿದೆ.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




