ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯ (UN COP30) ಮುಖ್ಯ ವೇದಿಕೆ ಸಮೀಪದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 21 ಮಂದಿ ಗಾಯಗೊಂಡಿದ್ದಾರೆ. ‘ನೀಲಿ ವಲಯ’ದಲ್ಲಿ ಈ ಘಟನೆ ಸಂಭವಿಸಿದ್ದು, ಅಲ್ಲೇ ಎಲ್ಲಾ ಸಭೆಗಳು, ಮಾತುಕತೆಗಳು, ಮಾಧ್ಯಮ ಕೇಂದ್ರ ಮತ್ತು ಮುಖ್ಯ ಸಮಗ್ರ ಸಭಾಂಗಣ ಸೇರಿದಂತೆ ಎಲ್ಲಾ ಉನ್ನತ ಗಣ್ಯರ ಕಚೇರಿಗಳಿವೆ ಎಂದು ವರದಿಯಾಗಿದೆ.
ಬೆಂಕಿ ದುರಂತದ ಸುದ್ದಿ ಹರಡಿದ ತಕ್ಷಣ, ಜನರು ಸುರಕ್ಷತೆಗಾಗಿ ಎಲ್ಲಾ ನಿರ್ಗಮನ ದ್ವಾರಗಳಿಂದ ಹೊರಗೆ ಓಡಿ ಹೋಗಿದ್ದು, ಅಧಿಕಾರಿಗಳು ಸಂಪೂರ್ಣ ಸುರಕ್ಷತಾ ಪರಿಶೀಲನೆಗಾಗಿ ಸ್ಥಳವನ್ನು ಮುಚ್ಚಿದರು. ರಾತ್ರಿ 8:40ರಿಂದ ಆರು ಗಂಟೆಗಳಿಗೂ ಅಧಿಕ ಕಾಲ ಶೃಂಗಸಭೆ ಪ್ರವೇಶಕ್ಕೆ ಅವಕಾಶವೇ ಇರಲಿಲ್ಲ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ರಾಯಚೂರು | ಯೂನಿಯನ್ ಬ್ಯಾಂಕ್ ನಲ್ಲಿ ಅಗ್ನಿ ಅವಘಡ
“ಅಗ್ನಿ ಅವಘಡದಿಂದಾಗಿ 21 ಮಂದಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು 19 ಮಂದಿ ಹೊಗೆ ಉಸಿರಾಡಿ ಅಸ್ವಸ್ಥರಾಗಿದ್ದು, ಇನ್ನಿಬ್ಬರು ಬೆಂಕಿ ಅವಘಡದ ಸುದ್ದಿ ತಿಳಿದು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
“ಅಗ್ನಿ ಅವಘಡದ ಪರಿಣಾಮಕ್ಕೆ ಒಳಗಾದವರಿಗೆ ತಕ್ಷಣ ಸಹಾಯ ನೀಡಲಾಗಿದ್ದು, 12 ಮಂದಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ತೆರಳಿದ್ದಾರೆ. ಉಳಿದವರು ಬೆಲೆಮ್‌ನ ಆರೋಗ್ಯ ಸೌಲಭ್ಯಗಳಲ್ಲಿ ಮತ್ತು ಇತರೆಡೆ ಸೂಕ್ತ ಆರೈಕೆಯನ್ನು ಪಡೆಯುತ್ತಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.
ಇನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ಥಳದಲ್ಲಿದ್ದರು. ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆ (UNDSS) ಕೂಡಲೇ ಅವರನ್ನು ಸ್ಥಳಾಂತರಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ ಬೆಂಕಿ ಅವಘಡ ಸಂಭವಿಸಿದಾಗ ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಕೂಡ ಭಾರತೀಯ ನಿಯೋಗದೊಂದಿಗೆ ನೀಲಿ ವಲಯದೊಳಗೆ ಇದ್ದರು. ಆದರೆ ಅವರನ್ನು ಮತ್ತ ಇತರೆ ಭಾರತೀಯ ಅಧಿಕಾರಿಗಳು ಸ್ಥಳದಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಸಚಿವಾಲಯದ ವಕ್ತಾರರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.





