ನನ್ನ ಮಧ್ಯಸ್ಥಿಕೆಯಿಂದ ಭಾರತ – ಪಾಕ್ ಪರಮಾಣು ಯುದ್ಧ ಮಾತ್ರವಲ್ಲ, ಹಲವು ದೇಶಗಳ ಯುದ್ಧ ನಿಲ್ಲಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಕಾಂಗ್ರೆಸ್ ಸದಸ್ಯರೊಂದಿಗೆ ನಡೆದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಭಾರತ ಮತ್ತು ಪಾಕಿಸ್ತಾನ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ರುವಾಂಡಾ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದೇವೆ. ಭಾರತ ಪಾಕ್ ಸಂಘರ್ಷದಲ್ಲಿ ಐದು ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
“ಅವರು ಐದು ಜೆಟ್ ವಿಮಾನಗಳನ್ನು ಹೊಡೆದುರುಳಿಸಿದರು. ಯುದ್ಧವು ಮತ್ತಷ್ಟು ಗಂಭೀರತೆ ಪಡೆದುಕೊಳ್ಳುತ್ತಿತ್ತು. ನಾನು ಅವರಿಗೆ ಕರೆ ಮಾಡಿ, ‘ಯುದ್ಧ ಮುಂದುವರಿದರೆ, ಇನ್ನು ಮುಂದೆ ವ್ಯಾಪಾರವಿಲ್ಲ. ನೀವು ಹೀಗೆ ಮಾಡಿದರೆ, ನೀವು ಒಳ್ಳೆಯವರಾಗಿರುವುದಿಲ್ಲ. ಅವರಿಬ್ಬರೂ ಪ್ರಬಲ ಪರಮಾಣು ರಾಷ್ಟ್ರಗಳು. ಪರಮಾಣು ಯುದ್ಧ ಕೂಡ ಸಂಭವಿಸುತ್ತಿತ್ತು. ಆನಂತರ ಅದು ಎಲ್ಲಿ ಕೊನೆಗೊಳ್ಳುತ್ತಿತ್ತು ಎಂದು ಯಾರಿಗೆ ತಿಳಿದಿತ್ತು. ಆ ಯುದ್ಧವನ್ನು ನಾನು ನಿಲ್ಲಿಸಿದೆ’ ಎಂದು ಟ್ರಂಪ್ ಹೇಳಿದರು.
ಅಮೆರಿಕವು ಇರಾನ್‌ನ ಸಂಪೂರ್ಣ ಪರಮಾಣು ಸಾಮರ್ಥ್ಯವನ್ನು ಕಸಿದುಕೊಂಡಿದೆ. ಕೊಸೊವೊ ಮತ್ತು ಸೆರ್ಬಿಯಾ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿವೇಶನ ಎಂದಾಕ್ಷಣ ಹೆದರಿ ಓಡುವ ಪ್ರಧಾನಿ ಮೋದಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ನಿಲ್ಲಿಸುವ ಆಮಿಷದ ಮೂಲಕ ನಿಲ್ಲಿಸಿದೆ ಎಂದು ಪದೇ ಪದೇ ಹೇಳುತ್ತಿರುವ ಟ್ರಂಪ್, ಕಳೆದ ಶುಕ್ರವಾರ ಮೊದಲ ಬಾರಿಗೆ ಸಂಘರ್ಷದ ಸಮಯದಲ್ಲಿ “ಐದು ಜೆಟ್‌ಗಳನ್ನು ಹೊಡೆದುರುಳಿಸಲಾಯಿತು” ಎಂದು ಹೇಳಿದರು.
“ಭಾರತ, ಪಾಕಿಸ್ತಾನ ಯುದ್ಧದಲ್ಲಿ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಅದು ಕೆಟ್ಟದಾಗುತ್ತಾ ಹೋಗುತ್ತಿತ್ತು, ಅಲ್ಲವೇ? ಅದು ಆಗಾಗಲಿದೆ ಎಂದು ತೋರುತ್ತಿತ್ತು, ಇವೆರೆಡು ಗಂಭೀರ ಪರಮಾಣು ದೇಶಗಳು ಪರಸ್ಪರ ಬಾಂಬ್ ಹಾಕಲು ತಯಾರಾಗಿದ್ದವು” ಎಂದು ಟ್ರಂಪ್ ಶ್ವೇತಭವನದಲ್ಲಿ ರಿಪಬ್ಲಿಕನ್ ಸೆನೆಟರ್‌ಗಳಿಗೆ ಆಯೋಜಿಸಿದ್ದ ಭೋಜನಕೂಟದಲ್ಲಿ ಹೇಳಿದ್ದರು.
ಮೇ 10 ರಂದು, ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ಸುದೀರ್ಘ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ “ಪೂರ್ಣ ಮತ್ತು ತಕ್ಷಣದ” ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದಾಗಿನಿಂದ, ಅವರು ವಿವಿಧ ಸಂದರ್ಭಗಳಲ್ಲಿ ತಮ್ಮ ಹೇಳಿಕೆಯನ್ನು ಹಲವಾರು ಬಾರಿ ಪುನರಾವರ್ತಿಸಿದ್ದಾರೆ.





