ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾಗೆ ಹಸ್ತಾಂತರಿಸುವಂತೆ ಕೋರಿ ಭಾರತಕ್ಕೆ ಪತ್ರ ಬರೆದಿದ್ದೇವೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ಆದರೆ, ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಸೀನಾ ಹಸ್ತಾಂತರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್, “ಹಸೀನಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೂರಿ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದೇವೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ, ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮರಣದಂಡನೆ ಶಿಕ್ಷೆ ವಿಧಿಸಿದೆ. ಅಲ್ಲದೆ, ರಾಜಕೀಯ ಕಾರ್ಯಕರ್ತರು ಮತ್ತು ವಿಮರ್ಶಕರ ಬಲವಂತದ ಕಣ್ಮರೆ ಪ್ರಕರಣಗಳಲ್ಲಿ ಹಸೀನಾ ಅವರು ಭಾಗಿಯಾಗಿದ್ದಾರೆ ಎಂಧು ಆರೋಪಿಸಲಾಗಿದೆ. ಈ ಪ್ರಕರಣಗಳ ವಿಚಾರಣೆಯನ್ನು ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದೆ.
ಈ ಬೆನ್ನಲ್ಲೇ, ಭಾರತದಲ್ಲಿರುವ ಹಸೀನಾ ಅವರನ್ನು ಬಾಂಗ್ಲಾಗೆ ಹಸ್ತಾಂತರಿಸುವಂತೆ ಬಾಂಗ್ದಾ ಸರ್ಕಾರ ಭಾರತವನ್ನು ಕೇಳಿದೆ.
ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಯುವಜನರು ಮೀಸಲಾತಿ ವಿಚಾರವಾಗಿ ‘ಜೆನ್ ಝಡ್’ ಪ್ರತಿಭಟನೆ ನಡೆಸಿದ್ದರು. ಪರಿಣಾಮವಾಗಿ, ಹಸೀನಾ ಅವರು ಬಾಂಗ್ಲಾ ತೊರೆದು, ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದಲೂ ಹಸೀನಾ ಅವರು ಭಾರತದಲ್ಲಿಯೇ ನೆಲೆಸಿದ್ದಾರೆ.




