ʼಫ್ರಾನ್ಸೆಸ್ಕಾ ಅಲ್ಬನೀಸ್‌ʼ ಎಂಬ ಗಟ್ಟಿಗಿತ್ತಿ; ಈಕೆಗೆ ʼದೊಡ್ಡʼವರು ಅದುರುವುದೇಕೆ?

Date:

ʼಫ್ರಾನ್ಸೆಸ್ಕಾ ಅಲ್ಬನೀಸ್‌ʼ, ಇತ್ತೀಚೆಗೆ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಮಾನವ ಹಕ್ಕುಗಳ ವಲಯದಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿರುವ ಹೆಸರು. ಪ್ಯಾಲೆಸ್ತೀನಿಯನ್‌ ಪ್ರದೇಶಗಳಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿಯ ಕುರಿತು ಸತ್ಯಾಧಾರಿತ ವರದಿಗಳನ್ನು ಮೊನಚು ಭಾಷೆಯಲ್ಲಿ ಬಿತ್ತರಿಸುತ್ತಿರುವ ಕಾರಣಕ್ಕೆ ಆಕೆ ಪ್ರಶಂಸೆಯ ಜತೆಗೆ ತೀವ್ರ ವಿರೋಧಕ್ಕೂ ಗುರಿಯಾಗಿದ್ದಾರೆ.

ಫ್ರಾನ್ಸೆಸ್ಕಾ, ಇಟಲಿಯ ಮಾನವ ಹಕ್ಕುಗಳ ವಕೀಲೆ. 2022ರಲ್ಲಿ ಆಕೆಯನ್ನು ಯುನೈಟೆಡ್ ನೇಷನ್ಸ್ (UN) ಮಾನವ ಹಕ್ಕುಗಳ ಮಂಡಳಿಯು United Nations Human Rights Council ಅಡಿಯಲ್ಲಿ Occupied Palestinian Territory (ಗಾಜಾ, ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರೂಸಲೇಮ್) ಪ್ರದೇಶಗಳ ಮಾನವ ಹಕ್ಕುಗಳ ಕುರಿತ ವಿಶೇಷ ವರದಿಗಾರ್ತಿ(UN Special Rapporteur) ಯಾಗಿ ನೇಮಿಸಿತು. ಈ ಹುದ್ದೆ ಸ್ವತಂತ್ರವಾದದ್ದು. ಅಂದರೆ, ಆಕೆ ಯಾವುದೇ ಸರ್ಕಾರದ ಪರವಾಗಿ ಅಲ್ಲ, ಕೇವಲ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳ ಆಧಾರದ ಮೇಲೆ ವರದಿ ಸಲ್ಲಿಸುವ ಜವಾಬ್ದಾರಿ ಹೊಂದಿದ್ದಾರೆ.

2023ರ ಗಾಜಾ ಯುದ್ಧದ ನಂತರ ಅಲ್ಬನೀಸ್ ಅವರ ವರದಿಗಳು ಹೆಚ್ಚು ಗಮನ ಸೆಳೆದವು. ನಾಗರಿಕರ ಸಾವುನೋವು, ಆಸ್ಪತ್ರೆಗಳು, ಶಾಲೆಗಳು ಮತ್ತು ಶರಣಾರ್ಥಿ ಶಿಬಿರಗಳ ಮೇಲೆ ನಡೆದ ದಾಳಿಗಳು, ಆಕ್ರಮಿತ ಪ್ರದೇಶಗಳಲ್ಲಿನ ದೀರ್ಘಕಾಲದ ನಿರ್ಬಂಧಗಳು.. ಇವೆಲ್ಲವನ್ನೂ ಆಕೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಹಾಗೂ ಮಾನವೀಯ ಕಾನೂನುಗಳ ಚೌಕಟ್ಟಿನಲ್ಲಿ ವಿಶ್ಲೇಷಿಸಿದರು. ಕೆಲವು ವರದಿಗಳಲ್ಲಿ ‘ಸಂರಚನಾತ್ಮಕ ಹಿಂಸೆ’, ‘ಸಿಸ್ಟಮ್ಯಾಟಿಕ್ ದಮನ’, ‘ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಗಳ ಅಪಾಯ’, ‘ಬ್ರೂಟಲ್‌ʼ ಎಂಬ ಪದಗಳನ್ನು ಬಳಸಿದ್ದು, ಪಾಶ್ಚಾತ್ಯ ರಾಷ್ಟ್ರಗಳ ಅಸಹನೆಯ ಕಟ್ಟೆ ಒಡೆಯುವಂತೆ ಮಾಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇತ್ತೀಚೆಗೆ ಆಕೆ ಮತ್ತೆ ಸುದ್ದಿಯಲ್ಲಿರುವುದಕ್ಕೆ ಪ್ರಮುಖ ಕಾರಣ, ಆಕೆಯ ಹೇಳಿಕೆಗಳನ್ನು ಸಂದರ್ಭದಿಂದಲೇ ಬೇರ್ಪಡಿಸಿ ತಪ್ಪಾಗಿ ಉಲ್ಲೇಖಿಸಿ, ಇಡೀ ಹೇಳಿಕೆಯನ್ನು ತಿರುಚಿದ ಆರೋಪ. ಕೆಲವು ಯುರೋಪಿಯನ್ ರಾಜಕಾರಣಿಗಳು ಮತ್ತು ಪ್ರೋ-ಇಸ್ರೇಲ್ ಲಾಬಿ ಸಂಘಟನೆಗಳು, “ಅಲ್ಬನೀಸ್ ಇಸ್ರೇಲ್ ಅನ್ನು ʼಮಾನವತೆಯ ಶತ್ರುʼ ಎಂದು ಕರೆದಿದ್ದಾರೆ” ಎಂದು ಆರೋಪಿಸಿದರು. ಈ ಹೇಳಿಕೆಯನ್ನು ಆಕೆ ತೀವ್ರವಾಗಿ ತಳ್ಳಿಹಾಕಿದ್ದು, ತನ್ನ ಮಾತುಗಳನ್ನು ಕತ್ತರಿಸಿ, ಅರ್ಥ ಬದಲಾಯಿಸಿ ಪ್ರಚಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ವಿಡಿಯೋ ಮತ್ತು ಲಿಖಿತ ಪಠ್ಯವನ್ನು ಪರಿಶೀಲಿಸಿದರೆ, ಆಕೆ ಉದ್ದೇಶಿಸಿದ್ದು ರಾಜಕೀಯ ವ್ಯವಸ್ಥೆಗಳು ಮತ್ತು ನೀತಿಗಳ ವಿಮರ್ಶೆ, ಯಾವುದಾದರೂ ಜನಾಂಗ ಅಥವಾ ಧರ್ಮದ ವಿರುದ್ಧದ ದ್ವೇಷವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಈ ಆರೋಪಗಳ ಹಿನ್ನೆಲೆಯಲ್ಲೇ ಕೆಲವು ದೇಶಗಳು ಆಕೆಯ ರಾಜೀನಾಮೆಗೆ ಒತ್ತಾಯಿಸಿವೆ. ಫ್ರಾನ್ಸ್ ಸೇರಿದಂತೆ ಕೆಲವು ಯುರೋಪಿಯನ್ ರಾಷ್ಟ್ರಗಳ ಸಚಿವರು ಆಕೆಯ ಭಾಷೆಯನ್ನು ʼಅಸಮತೋಲನʼ, ʼಅಸಂಬದ್ಧʼ ಎಂದು ಟೀಕಿಸಿದ್ದಾರೆ. ಆದರೆ ಇದರ ವಿರುದ್ಧ ಯುನೈಟೆಡ್ ನೇಷನ್ಸ್ ನ ಹಲವು ಅಧಿಕಾರಿಗಳು ಮತ್ತು ಮಾನವ ಹಕ್ಕುಗಳ ತಜ್ಞರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಸ್ವತಂತ್ರ ವರದಿಗಾರರ ಮೇಲೆ ರಾಜಕೀಯ ಒತ್ತಡ ಹೇರುವುದೇ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವ್ಯವಸ್ಥೆಗೆ ಅಪಾಯ ಎಂದೂ ಅವರು ಎಚ್ಚರಿಸಿದ್ದಾರೆ.

ಅಮೆರಿಕ ಕೂಡ ಈ ವಿವಾದದಲ್ಲಿ ಪ್ರಮುಖ ಪಾತ್ರವಹಿಸಿದೆ. ಅಲ್ಬನೀಸ್ ಅವರ ಕೆಲವು ವರದಿಗಳು ಮತ್ತು ಹೇಳಿಕೆಗಳನ್ನು ʼರಾಜಕೀಯ ಪ್ರೇರಿತʼ ಎಂದು ಸುಖಾಸುಮ್ಮನೆ ಟೀಕಿಸಿರುವ ಅಮೆರಿಕ, ಆಕೆಯ ಮೇಲೆ ನಿರ್ಬಂಧಗಳನ್ನೂ ವಿಧಿಸಿದೆ. ಇದು ಯುಎನ್ ವಿಶೇಷ ವರದಿಗಾರರ ಇತಿಹಾಸದಲ್ಲಿ ತೀರಾ ಅಪರೂಪದ ಘಟನೆ. ಮಾನವ ಹಕ್ಕುಗಳ ವಲಯದಲ್ಲಿ ಇದನ್ನು ಅಪಾಯಕಾರಿ ಪೂರ್ವಪ್ರಸಂಗ (dangerous precedent) ಎಂದು ಹಲವರು ವಿಶ್ಲೇಷಿಸಿದ್ದಾರೆ. ಇದು ಭವಿಷ್ಯದಲ್ಲಿ ಯಾವುದೇ ಸ್ವತಂತ್ರ ವರದಿಗಾರರ ದನಿ ಅಡಗಿಸುವ ಸಾಧನವಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪ್ರೇರಿತ ದಾಳಿಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಆಕೆ ಇತರೆ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೂ ಸಿಲುಕಿಕೊಂಡಿದ್ದಾರೆ. ಅವರೇ ಕೆಲವೆಡೆ ಹೇಳಿಕೊಂಡಿರುವಂತೆ, “ಹಣಕಾಸು ಸಂಸ್ಥೆಗಳು ಮತ್ತು ಇನ್ಶುರೆನ್ಸ್ ಕಂಪನಿಗಳು ಹೆಚ್ಚುವರಿ ಪರಿಶೀಲನೆ ನಡೆಸುತ್ತಿವೆ. ಆ ಕಾರಣಕ್ಕೆ ಸಾಮಾನ್ಯವಾಗಿ ಸಿಗಬೇಕಾದ ಆರೋಗ್ಯ ಅಥವಾ ಪ್ರಯಾಣ ವಿಮೆ ಪಡೆಯುವುದೂ ದುಸ್ತರವಾಗಿದೆ. ಇನ್ಶುರೆನ್ಸ್ ನಿರಾಕರಣೆ ಎಂದರೆ ಚಿಕಿತ್ಸೆ, ಪ್ರಯಾಣ ಅಥವಾ ವೃತ್ತಿಪರ ಚಟುವಟಿಕೆಗಳಲ್ಲಿ ಸುಲಭವಾಗಿ ತೊಡಗಿಕೊಳ್ಳುವುದೂ ಕಷ್ಟ. ಎಲ್ಲದರಲ್ಲೂ ಅನಿಶ್ಚಿತತೆ ಹೆಚ್ಚುತ್ತದೆ. ಕ್ರೆಡಿಟ್ ಕಾರ್ಡ್, ಪೇಮೆಂಟ್ ಸೇವೆಗಳಲ್ಲೂ ತಾತ್ಕಾಲಿಕ ಅಡಚಣೆಗಳು ಎದುರಾಗುತ್ತಿವೆ”. ಯುಎನ್ ವರದಿಗಾರರ ಹುದ್ದೆ ಪೂರ್ಣಕಾಲಿಕ ಸಂಬಳದ ಕೆಲಸವಲ್ಲದ ಕಾರಣ, ಈ ಎಲ್ಲ ಆರ್ಥಿಕ ಹೊರೆ ಆಕೆಯ ಮೇಲೆ ಬೀಳುತ್ತದೆ. ಸಾಮಾಜಿಕವಾಗಿ ಟ್ರೋಲಿಂಗ್‌, ಬೆದರಿಕೆಗಳು ಮತ್ತು ಅಪಪ್ರಚಾರವೂ ಆಕೆಯ ದೃಢತೆಯನ್ನು ಅಲುಗಾಡಿಸುತ್ತಿವೆ.

ವಿಮರ್ಶಕರ ಪ್ರಕಾರ, ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಸಂದರ್ಭದಲ್ಲಿ ಪಾಶ್ಚಾತ್ಯ ಸರ್ಕಾರಗಳು ಇಸ್ರೇಲ್‌ಗೆ ನೀಡುತ್ತಿರುವ ರಾಜಕೀಯ ಮತ್ತು ಸೈನಿಕ ಬೆಂಬಲವನ್ನು ಪ್ರಶ್ನಿಸುವ ದನಿಗಳನ್ನು ದುರ್ಬಲಗೊಳಿಸುವುದೇ ಈ ದಾಳಿಗಳ ಉದ್ದೇಶ. ಅಲ್ಬನೀಸ್ ಅವರ ವರದಿಗಳು ನೇರವಾಗಿ ಅಂತಾರಾಷ್ಟ್ರೀಯ ಕಾನೂನುಗಳ ಪ್ರಶ್ನೆ ಎತ್ತುವುದರಿಂದ, ಅವುಗಳನ್ನು ʼಆಂಟಿ-ಸೆಮಿಟಿಕ್ʼ ಎಂದು ಟ್ಯಾಗ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಆದರೆ ಯುಎನ್ ಮತ್ತು ಅನೇಕ ಯಹೂದಿ ಮಾನವ ಹಕ್ಕು ಸಂಘಟನೆಗಳೇ ಸ್ಪಷ್ಟಪಡಿಸಿರುವಂತೆ, ಇಸ್ರೇಲ್ ಸರ್ಕಾರದ ನೀತಿಗಳನ್ನು ಟೀಕಿಸುವುದು ಆಂಟಿ-ಸೆಮಿಟಿಸಂ ಅಲ್ಲ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಲೈಂಗಿಕ ಗುರುತು ಪಾಶ್ಚಾತ್ಯವಲ್ಲ, ವಾಸ್ತವ; ಇದಕ್ಕೆ ಪುರಾಣಗಳೇ ಸಾಕ್ಷಿ

ಹಲವರು ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದರೂ ಆಕೆ ಜಗ್ಗಿಲ್ಲ. ತಮ್ಮ ಹುದ್ದೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗಟ್ಟಿ ದನಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಯುಎನ್ ಮಾನವ ಹಕ್ಕುಗಳ ಮಂಡಳಿಯೊಳಗಿನ ಅಧಿಕೃತ ಬೆಂಬಲವೂ ಆಕೆಗಿದೆ. ಆಕೆ ಮುಂದುವರಿದು ಗಾಜಾ ಮತ್ತು ಆಕ್ರಮಿತ ಪ್ರದೇಶಗಳಲ್ಲಿನ ಅಮಾನವೀಯ ಪರಿಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಡುವ ಕೆಲಸವನ್ನು ಮುಂದುವರೆಸಿದ್ದಾರೆ.

ಈ ವಿವಾದ ಮಾನವ ಹಕ್ಕುಗಳ ವರದಿಗಾರಿಕೆ ಎಷ್ಟು ಸ್ವತಂತ್ರವಾಗಿರಬೇಕು, ರಾಜಕೀಯ ಶಕ್ತಿಗಳು ಸತ್ಯಾಧಾರಿತ ವರದಿಗಳನ್ನು ಹೇಗೆ ಎದುರಿಸುತ್ತವೆ, ತಮ್ಮ ಬುಡಕ್ಕೆ ಬಂದಾಗ ಹೇಗೆ ಎದುರುಗೊಳ್ಳುತ್ತವೆ, ಯಾವ ವಾಮಮಾರ್ಗ ಬಳಸುತ್ತವೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಮೌಲ್ಯ ಏನು ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಫ್ರಾನ್ಸೆಸ್ಕಾ ಅಲ್ಬನೀಸ್ ಅವರ ಪ್ರಕರಣ, ಮಾನವ ಹಕ್ಕುಗಳ ಧ್ವನಿ ಇಂದು ಎಷ್ಟು ಅಸುರಕ್ಷಿತವಾಗುತ್ತಿದೆ ಎಂಬುದರ ಜೀವಂತ ಉದಾಹರಣೆಯಾಗಿ ಉಳಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...