2023ರಲ್ಲಿ ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ, ಇದೇ ಮೊದಲ ಬಾರಿಗೆ ಗಾಜಾದ ಮಕ್ಕಳು ಪರೀಕ್ಷೆ ಬರೆದಿದ್ದಾರೆ ಎಂದು ಪ್ಯಾಲೆಸ್ತೀನ್ ಶಿಕ್ಷಣ ಸಚಿವಾಲಯ ತಿಳಿಸಿದೆ.
ಉನ್ನತ ಶಿಕ್ಷಣಕ್ಕಾಗಿನ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಮತ್ತು ಪ್ರೌಢ ಶಿಕ್ಷಣ ಪರೀಕ್ಷೆಗಳನ್ನು ಪ್ಯಾಲೆಸ್ತೀನ್ ಶಿಕ್ಷಣ ಇಲಾಖೆ ನಡೆಸಿದೆ. ಒಟ್ಟು 1,500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ವರದಿಯಾಗಿದೆ.
ಜುಲೈ ತಿಂಗಳ ಆರಂಭದಲ್ಲಿ ಪ್ಯಾಲೆಸ್ತೀನ್ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನು ಪ್ರಕಟಿಸಿತ್ತು. ಪರೀಕ್ಷೆಯನ್ನು ವಿಶೇಷ ತಂತ್ರಾಂಶ ಬಳಸಿಕೊಂಡು ವಿದ್ಯುನ್ಮಾನ ಸಾಧನಗಳ ಮೂಲಕ ಆಯೋಜಿಸಲಾಗಿತ್ತು. ಪರೀಕ್ಷೆ ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲ ತಾಂತ್ರಿಕ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತೆಂದು ಎಂದು ಗಾಝಾ ಪಟ್ಟಿಯ ಶಿಕ್ಷಣ ಸಚಿವಾಲಯ ತಿಳಿಸಿದೆ.
2023ರ ಅಕ್ಟೋಬರ್‌ನಲ್ಲಿ ಗಾಜಾಪಟ್ಟಿ ಮೇಲೆ ಇಸ್ರೇಲ್ ಜನಾಂಗೀಯ ಯುದ್ಧ ಆರಂಭಿಸಿತು. ಅಂದಿನಿಂದ ಈವರೆಗೆ ನಿರಂತರವಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣಕಾರಿ ವೈಮಾನಿಕ ದಾಳಿಯಿಂದಾಗಿ, ಗಾಜಾಪಟ್ಟಿ ಅಕ್ಷಶಃ ನಲುಗಿ ಹೋಗಿದೆ. ಭಾರೀ ಜನಹಾನಿ ಮತ್ತು ವಿನಾಶಗಳಾಗಿವೆ.
2023ರಿಂದ 2025ರ ಜುಲೈವರೆಗೆ, 58,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1,40,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಝಾದ ಶೇ.90ರಷ್ಟು ಮನೆಗಳು ಧ್ವಂಸವಾಗಿವೆ. ಆಸ್ಪತ್ರೆಗಳು, ಶಾಲೆಗಳು ಹಾಗೂ ಇತರ ಮೂಲಸೌಕರ್ಯಗಳು ನಾಶವಾಗಿವೆ.
ಇತ್ತೀಚೆಗೆ ನಡೆದ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಇಸ್ರೇಲ್ ತತ್ತರಿಸಿಹೋಗಿದೆ. ಪರಿಣಾಮವಾಗಿ, ಗಾಝಾ ಮೇಲಿನ ದಾಳಿಯಿಂದ ಇಸ್ರೇಲ್ ಕೊಂಚ ಹಿಂದೆ ಸರಿದಿದೆ. ಈ ನಡುವೆ, ಬಿದ್ದುಹೋದ ಶಾಲೆಗಳ ನಡುವೆ, ತಾವಿರುವ ಸ್ಥಳಗಳಿಂದಲೇ ಗಾಜಾ ಮಕ್ಕಳು ಪರೀಕ್ಷೆ ಬರೆದಿದ್ದಾರೆ.




