ಅಮೆರಿಕದ ಮಧ್ಯಸ್ಥಿಕೆಯಿಂದ ಜಾರಿಯಲ್ಲಿದ್ದ ಕದನ ವಿರಾಮದ ನಡುವೆಯೂ ಮಂಗಳವಾರ ಇಸ್ರೇಲ್ ಗಾಜಾದಲ್ಲಿ ವಾಯುದಾಳಿ ನಡೆಸಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ.
ಹಮಾಸ್‌ನಿಂದ ಇಸ್ರೇಲ್ ಸೈನಿಕರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ಪ್ರಬಲ ದಾಳಿಗಳನ್ನು” ನಡೆಸಲು ಆದೇಶಿಸಿದ್ದಾರೆ.
ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಮೂರು ವೈಮಾನಿಕ ದಾಳಿಗಳು ನಡೆದಿದ್ದು, ಒಂದು ದಾಳಿಯಲ್ಲಿ ವಾಹನವೊಂದಕ್ಕೆ ತಾಗಿ ಐವರು ಸಾವನ್ನಪ್ಪಿದ್ದಾರೆ. ಗಾಜಾದ ಪ್ರಮುಖ ಆಸ್ಪತ್ರೆಯಾದ ಅಲ್-ಶಿಫಾದ ಬಳಿಯೂ ಒಂದು ದಾಳಿ ನಡೆದಿದೆ. ಆದರೆ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, “ಕೆಲವು ಚಕಮಕಿಗಳಿದ್ದರೂ ಶಾಂತಿ ಒಪ್ಪಂದ ಉಳಿದಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತದಾನದ ಹಕ್ಕನ್ನು ಚುನಾವಣಾ ಆಯೋಗ ರಕ್ಷಿಸುತ್ತಿದೆಯೇ?
ಶಾಂತಿ ಒಪ್ಪಂದದಂತೆ, ಹಮಾಸ್ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಆದರೆ, ಉಳಿದಿರುವ ಒತ್ತೆಯಾಳುಗಳ ಶವಗಳನ್ನು ಹಸ್ತಾಂತರಿಸುವ ವಿಚಾರದಲ್ಲಿ ವಿಳಂಬವಾಗುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್‌ನ ದಾಳಿಗಳಿಂದ ಗಾಜಾದಲ್ಲಿ ಕಳೆದ 2 ವರ್ಷಗಳಿಂದ 68 ಸಾವಿರಕ್ಕೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.
ಗಾಜಾದ ಜನರು ಮತ್ತೆ ಯುದ್ಧ ಆರಂಭವಾಗುವ ಭಯದಲ್ಲಿದ್ದಾರೆ. “ನಾವು ವಿಶ್ರಾಂತಿ ಬಯಸುತ್ತೇವೆ, ಆದರೆ ಯುದ್ಧ ಮತ್ತೆ ಶುರುವಾಗಬಹುದು ಎಂಬ ಭಯವಿದೆ” ಎಂದು 60 ವರ್ಷದ ನಾಗರಿರೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಗಾಜಾ ಕದನ ವಿರಾಮಕ್ಕೆ ಅಪಾಯ ಇಲ್ಲ: ಡೊನಾಲ್ಡ್ ಟ್ರಂಪ್
ಗಾಜಾ ಕದನ ವಿರಾಮಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಗಾಜಾ ಮೇಲೆ ಕೂಡಲೇ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ಹೊರಡಿಸಿದ್ದರು. ಈ ಕುರಿತು ಏರ್‌ಪೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಗಾಜಾ ಒಪ್ಪಂದಕ್ಕೆ ಅಪಾಯವಿಲ್ಲ. ಒಂದು ವೇಳೆ ಇಸ್ರೇಲ್ ಸೈನಿಕರು ಮೃತಪಟ್ಟಿದ್ದರೆ ಪ್ರತಿದಾಳಿ ನಡೆಸಬೇಕು’ ಎಂದು ಹೇಳಿದ್ದಾರೆ. ತನ್ನ ಸೇನೆಯ ಮೇಲೆ ದಾಳಿ ಮಾಡಿದ ಹಮಾಸ್, ಕದನ ವಿರಾಮ ನಿಯಮವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಗಾಜಾ ಮೇಲೆ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಆದೇಶ ನೀಡಿದ್ದರು.





