AI ಕ್ರಾಂತಿಯಿಂದ ಜಾಗತಿಕ RAM ಕೊರತೆ: ದುಬಾರಿಯಾಗಲಿವೆ ಸ್ಮಾರ್ಟ್‌ಫೋನ್‌!

Date:

ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ AI ಕ್ರಾಂತಿ ಮುಂದುವರೆದಿದೆ. ಆದರೆ ಅದಕ್ಕೆ ಬೇಕಾದ ಬೆಲೆಯನ್ನು ಜನರೇ ತೆರುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಮಾನವನಿಗಿಂತ ನೂರು ಹೆಜ್ಜೆ ಮುಂದಿರುವ ಕೃತಕ ಬುದ್ಧಿಮತ್ತೆ ಸೃಷ್ಟಿಸಿರುವ ಉತ್ಕರ್ಷವು ಸದ್ಯ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ತಲ್ಲಣ ಉಂಟು ಮಾಡುತ್ತಿದೆ. ಈ AI ಉಬ್ಬರದಿಂದ ಉಂಟಾದ RAM ಕೊರತೆ ಮುಂದಿನ ದಿನಗಳಲ್ಲಿ ಮೊಬೈಲ್‌ ಫೋನ್‌ಗಳನ್ನು ದುಬಾರಿ ಮಾಡುವ ಹಂತಕ್ಕೆ ತಲುಪಿದೆ.

ವೈದ್ಯಕೀಯದಿಂದ ರಕ್ಷಣಾ ವಲಯದವರೆಗೆ, ಶಿಕ್ಷಣದಿಂದ ಹಣಕಾಸು ಮಾರುಕಟ್ಟೆಯವರೆಗೆ AI ತನ್ನ ಹಸ್ತಕ್ಷೇಪ ವಿಸ್ತರಿಸುತ್ತಿರುವಾಗ, ಅದರ ಲಾಭಗಳ ಕುರಿತು ಜಗತ್ತು ಉತ್ಸಾಹ, ಕುತೂಹಲಗಳಿಂದ ಮಾತನಾಡುತ್ತಿದೆ. ಈ ಉಬ್ಬರದ ಹಿಂದಿನ ಕಾರಣ ಏನು? ಆ ಬೆಲೆ ಯಾರು ತೆರಬೇಕು? ಎಂಬ ಪ್ರಶ್ನೆಗಳಿಗೆ ಇತ್ತೀಚೆಗೆ ಬೆಳೆಯುತ್ತಿರುವ RAM (Random access memory) ಕೊರತೆ  ಉತ್ತರ ನೀಡುತ್ತಿದೆ.

ಇದುವರೆಗೆ ಸ್ಮಾರ್ಟ್‌ಫೋನ್ ಉದ್ಯಮವು ‘ಹೆಚ್ಚು ಸ್ಪೆಕ್ಸ್, ಕಡಿಮೆ ಬೆಲೆ’ ತತ್ವದ ಮೇಲೆ ಬೆಳೆಯುತ್ತಿತ್ತು. ಪ್ರತಿವರ್ಷ RAM ಹೆಚ್ಚಳ, ಕ್ಯಾಮೆರಾ ಸುಧಾರಣೆ, ವೇಗದ ಪ್ರೊಸೆಸರ್‌ಗಳು, ಆಕರ್ಷಕ ಡಿಸೈನ್‌ ಕಲರ್‌ ಅಪ್‌ಗ್ರೇಡ್ ಸಾಮಾನ್ಯವಾಗಿದ್ದವು. 2GB ಯಿಂದ ಮೊದಲುಗೊಂಡು 4GB, 6GB, 8GB, 12GB ಈಗಿನ 16GB RAM  ವರೆಗೆ ಬೆಳೆದುನಿಂತಿದೆ. ಆದರೆ AI ಕ್ರಾಂತಿಯ ನಂತರ ಈ ಸರಳ ರೇಖೆಯ ಬೆಳವಣಿಗೆಗೆ ಅಡ್ಡಿಯಾಗಿದೆ. RAM ಈಗ ಮೊಬೈಲ್ ಫೋನ್‌ಗಳಲ್ಲಿ ಮಾತ್ರ ಅಡಕವಾಗಿರದೆ ಅದು AI ನ ಕಾರ್ಯಕ್ಷೇತ್ರದ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

AI ಮಾದರಿಗಳು ಕಾರ್ಯನಿರ್ವಹಿಸುವ ರೀತಿ ಅಸಾಧಾರಣ ಪ್ರಮಾಣದ ಮೆಮೊರಿಯನ್ನು ಬೇಡುತ್ತವೆ. ಚಾಟ್‌ಬಾಟ್‌ಗಳು, ಜನರೇಟಿವ್ AI, ವೀಡಿಯೋ ಕ್ರಿಯೇಷನ್, ಸ್ವಯಂಚಾಲಿತ ವಾಹನಗಳು, ವೈದ್ಯಕೀಯ ನಿರ್ಣಯ ವ್ಯವಸ್ಥೆಗಳು ದೊಡ್ಡ ಪ್ರಮಾಣದ ಡೇಟಾವನ್ನು ಕ್ಷಣಾರ್ಧದಲ್ಲಿ ಸಂಸ್ಕರಿಸಬೇಕಾಗುತ್ತದೆ. ಇದಕ್ಕಾಗಿ ಡೇಟಾ ಸೆಂಟರ್‌ಗಳಲ್ಲಿ ಬಳಸುವ High Bandwidth Memory ಮತ್ತು ಅತ್ಯಾಧುನಿಕ DRAM ಮೇಲಿನ ಬೇಡಿಕೆ ಏಕಾಏಕಿ ಸ್ಫೋಟಗೊಂಡಿದೆ. Google, Microsoft, Amazon, OpenAI ಗಳಂತಹ ದೊಡ್ಡ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿ ಹೂಡಿ AI ಮೂಲಸೌಕರ್ಯವನ್ನು ವಿಸ್ತರಿಸುತ್ತಿವೆ. ಈ ಹೂಡಿಕೆಯ ಭಾರ RAM ಮೇಲೆ ಬಿದ್ದಿದೆ.

smart phone

ಜಗತ್ತಿನ ಪ್ರಮುಖ ಮೆಮೊರಿ ತಯಾರಕರಾದ Samsung, SK Hynix ಮತ್ತು Micron ಈ ಬದಲಾವಣೆಯನ್ನು ತಕ್ಷಣ ಗುರುತಿಸಿವೆ. AI ಕ್ಷೇತ್ರದಲ್ಲಿ ಬಳಸುವ ಮೆಮೊರಿಯಿಂದ ಲಾಭದ ಪ್ರಮಾಣ ಗ್ರಾಹಕ ಉತ್ಪನ್ನಗಳಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚು ಲಾಭದ ಕ್ಷೇತ್ರಗಳತ್ತ ತಿರುಗಿಸುವ ನಿರ್ಧಾರಗಳಾಗುತ್ತಿವೆ. ಪರಿಣಾಮ, ಮೊಬೈಲ್ ಫೋನ್‌ಗಳಲ್ಲಿ ಬಳಸುವ LPDDR4X ಮತ್ತು LPDDR5 RAM ಉತ್ಪಾದನೆಗೆ ಹಿಂದಿನಷ್ಟು ಆದ್ಯತೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ RAM ತಯಾರಿಕೆಯನ್ನು ಕೈಗಾರಿಕೆಯಲ್ಲಿ ಸೃಷ್ಟಿಯಾಗುವ ಸಾಮಾನ್ಯ ವಸ್ತುವಿನಂತೆ ತಕ್ಷಣ ಹೆಚ್ಚಿಸಲಾಗುವುದಿಲ್ಲ. ಹೊಸ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಗೆ ವರ್ಷಗಳ ಕಾಲ ಬೇಕಾಗುತ್ತದೆ. ಹೀಗಾಗಿ ಏಕಾಏಕಿ ಬೇಡಿಕೆ ಏರಿದಾಗ ತಕ್ಷಣ ಪೂರೈಕೆ ಸಾಧ್ಯವಾಗುತ್ತಿಲ್ಲ.

ಈ ಅಸಮತೋಲನವೇ RAM ಬೆಲೆ ಏರಿಕೆಯ ಮೂಲ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ DRAM ಬೆಲೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದನ್ನು ಗಮನಿಸಬಹುದು. ಬೆಲೆಗಳು ದ್ವಿಗುಣವಾಗಿವೆ ಎಂಬ ವರದಿಗಳೂ ಬಂದಿವೆ. ಮೊದಲು ಲ್ಯಾಪ್‌ಟಾಪ್ ಮತ್ತು ಸರ್ವರ್ ಮಾರುಕಟ್ಟೆಯಲ್ಲಿ ಈ ಬೆಲೆ ಏರಿಕೆ ಕಾಣಿಸಿಕೊಂಡರೂ, ಈಗದು ಮೊಬೈಲ್ ಉದ್ಯಮಕ್ಕೆ ಕಾಲಿಟ್ಟಿದೆ. RAM ಮೊಬೈಲ್ ಫೋನ್‌ನ ಅತಿ ದುಬಾರಿ ಘಟಕವಲ್ಲದಿದ್ದರೂ, ಬೆಲೆ ಏರಿಕೆಯ ಸಂದರ್ಭದಲ್ಲಿ ಅದು ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ವಿಶೇಷವಾಗಿ ಕಡಿಮೆ ಲಾಭದ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಬಜೆಟ್ ಫ್ರೆಂಡ್ಲಿ ಬ್ರಾಂಡ್‌ಗಳಿಗೆ ಇದು ದೊಡ್ಡ ಸವಾಲಾಗಿದೆ.

Samsung ನಂತಹ ಕಂಪನಿಗಳು ಸ್ವತಃ RAM ತಯಾರಕರಾಗಿದ್ದರೂ, ಅವುಗಳಿಗೂ ಈ ಏರುಪೇರಿನಿಂದ ಸಂಪೂರ್ಣ ರಕ್ಷಣೆ ಇಲ್ಲ. AI-HBM (High Bandwidth Memory) ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ, Galaxy A ಮತ್ತು M ಸರಣಿಯಂತಹ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ RAM ಮೌಲ್ಯ ಕುಸಿಯುತ್ತಿರುವುದು ಕಾಣಿಸಿಕೊಳ್ಳುತ್ತಿದೆ. ಕೆಲವು ಮಾರುಕಟ್ಟೆಗಳಲ್ಲಿ ಹಿಂದಿನಂತೆ 8GB RAM ನೀಡುತ್ತಿದ್ದ ಮಾದರಿಗಳು ಈಗ 6GB ವೇರಿಯಂಟ್‌ಗಳೊಂದಿಗೆ ಬರುತ್ತಿವೆ. ಬೆಲೆ ಇಳಿಕೆಯಾಗದೆ, ನಿರಂತರವಾಗಿ ಏರಿಕೆಯಾಗುತ್ತಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

“Samsung ಮತ್ತು Oppo ಸೇರಿದಂತೆ ಕೆಲ ಕಂಪನಿಗಳು ಈಗಾಗಲೇ ಆಯ್ದ ಮಾದರಿಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿವೆ. ಉದಾಹರಣೆಗೆ, ಈ ವರ್ಷ ಬಿಡುಗಡೆಯಾದ 8GB RAM ಹೊಂದಿರುವ Oppo Reno 14 ಮೊದಲು ₹37,999 ಇದ್ದರೆ, ಈಗ Amazonನಲ್ಲಿ ₹39,999ಕ್ಕೆ ಮಾರಾಟವಾಗುತ್ತಿದೆ. ಅದೇ ರೀತಿ Galaxy A17ನ 8GB ವೇರಿಯಂಟ್ ₹18,999ಕ್ಕೆ ಲಭ್ಯವಾಗಿದ್ದರೂ, ಈಗ ಅದು ಸ್ಟಾಕ್‌ ಔಟ್ ಆಗಿದ್ದು, 6GB RAM ಮಾದರಿಯನ್ನು ₹19,499ಕ್ಕೆ ಮಾರಲಾಗುತ್ತಿದೆ. Apple iPhone 17 ಸರಣಿಯ ಬೆಲೆ ಏರಿಕೆಯ ಬಗ್ಗೆ ವದಂತಿಗಳಿದ್ದರೂ, ಕಂಪನಿಯು, ಮೆಮೊರಿ ಕೊರತೆಯನ್ನು ಮೊದಲೇ ಅರಿತು ಮುಂಚಿತವಾಗಿ ಉತ್ಪಾದನೆ ಆರಂಭಿಸಿದ್ದರಿಂದ ತಕ್ಷಣದ ಬೆಲೆ ಏರಿಕೆ ಇಲ್ಲದಿರಬಹುದು.

APple 1

ಫೋನ್‌ ಅಪ್‌ಗ್ರೇಡ್‌ ಮಾಡಿಕೊಳ್ಳುವ ಯೋಜನೆ ಇದ್ದರೆ, ಈಗಲೇ ಖರೀದಿಸುವುದು ಒಳಿತು ಎನ್ನುತ್ತಾರೆ ತಜ್ಞರು. ಮುಂದಿನ ತಿಂಗಳುಗಳಲ್ಲಿ RAM ಮತ್ತು ಸ್ಟೋರೇಜ್ ಬೆಲೆಗಳು ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. Realmeನ ಉತ್ಪನ್ನ ಮಾರುಕಟ್ಟೆ ಮುಖ್ಯಸ್ಥ ಫ್ರಾನ್ಸಿಸ್ ವಾಂಗ್ ಹೇಳುವಂತೆ, 2026ರಿಂದ ಬೆಲೆಗಳು ನಿರಂತರವಾಗಿ ಏರಿಕೆಯಾಗುವ ಸಾಧ್ಯತೆ ಇದೆ. CMF by Nothingನ ಉಪಾಧ್ಯಕ್ಷ ಹಿಮಾಂಶು ಟಂಡನ್ ಕೂಡ ಹೊಸ ಉತ್ಪಾದನೆಯ ಎಲ್ಲಾ ವಿಭಾಗಗಳಲ್ಲಿ ತಕ್ಷಣದ ಬೆಲೆ ಏರಿಕೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ಅವರ ಪ್ರಕಾರ, ಫ್ಲ್ಯಾಗ್‌ಶಿಪ್ ಫೋನ್‌ಗಳು 7–10 ಶೇಕಡಾ, ಮಧ್ಯಮ ಶ್ರೇಣಿಯ ಫೋನ್‌ಗಳು 6–8 ಶೇಕಡಾ ಮತ್ತು ಬಜೆಟ್ ಫೋನ್‌ಗಳು 4–6 ಶೇಕಡಾ ಹೆಚ್ಚು ದುಬಾರಿಯಾಗಬಹುದು” ಎಂದು ಹೇಳಿರುವುದಾಗಿ ʼದ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ವರದಿ ಮಾಡಿದೆ.

ಕಡಿಮೆ ಬೆಲೆಗೆ ಹೆಚ್ಚು ಸ್ಪೆಕ್ಸ್ ನೀಡುವ ತಂತ್ರದಿಂದ ಯಶಸ್ವಿಯಾಗಿದ್ದ Xiaomi, Redmi, Poco ಮತ್ತು Realme ಗಳಂತಹ ಬ್ರಾಂಡ್‌ಗಳಿಗೆ ಈ ಪರಿಸ್ಥಿತಿ ಇನ್ನೂ ಕಠಿಣವಾಗಿದೆ. ಇಷ್ಟು ವರ್ಷ ಕಡಿಮೆ ಬೆಲೆಗೆ ಉತ್ಪನ್ನ ಕೊಟ್ಟ ಈ ಸಂಸ್ಥೆಗಳು  RAM ಬೆಲೆ ಏರಿಕೆಯ ಹೊರೆಯನ್ನು ನೇರವಾಗಿ ಗ್ರಾಹಕರೆಡೆಗೆ ತಳ್ಳಿದರೆ, ಮಾರುಕಟ್ಟೆ ಕಳೆದುಕೊಳ್ಳುವ ಅಪಾಯ ಇದೆ. ಅದಕ್ಕಾಗಿ ಈ ಕಂಪನಿಗಳು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ. ʼVirtual RAMʼ, ʼRAM Expansionʼ, ʼDynamic RAMʼ ಮುಂತಾದ ಟ್ರಿಕ್ಸ್‌ಗಳನ್ನು ತಮ್ಮ ಜಾಹೀರಾತುಗಳಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದೇ ಅದಕ್ಕೆ ಉದಾಹರಣೆ. ʼಆದರೆ, ಇವು ಭೌತಿಕ RAMಗೆ ಪರ್ಯಾಯವಾಗಿ ಕೆಲಸ ಮಾಡಲ್ಲ. ಸ್ಟೋರೇಜನ್ನು ತಾತ್ಕಾಲಿಕ ಮೆಮೊರಿಯಾಗಿ ಬಳಸುವುದರಿಂದ ಕಾರ್ಯಕ್ಷಮತೆಯಲ್ಲಿ ಮಿತಿಗಳೂ ಉಳಿಯುವ ಸಂಭವವನ್ನು ತಳ್ಳಿಹಾಕುವಂತಿಲ್ಲʼ ಎನ್ನುತ್ತಾರೆ ತಂತ್ರಜ್ಞಾನ ತಜ್ಞರು.

ಇದರ ನಡುವೆ, ಬಜೆಟ್ ಫ್ರೆಂಡ್ಲಿ ಉತ್ಪನ್ನಗಳ ಬಳಕೆದಾರರು ಮತ್ತೆ 4GB RAM ಕಾಲಕ್ಕೆ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಇದು ಕೆಲ ವರ್ಷಗಳ ಹಿಂದೆ ತಂತ್ರಜ್ಞಾನ ಲೋಕ ದಾಟಿಬಂದ ಹಂತವೆಂದು ಭಾವಿಸಲಾಗಿತ್ತು. ಆದರೆ AI ನ ಬೇಡಿಕೆ ಮತ್ತು ಬೆಳವಣಿಗೆ ಈ ಹಿಂಜರಿಕೆಯನ್ನು ಅನಿವಾರ್ಯವನ್ನಾಗಿ ಮಾಡುತ್ತಿದೆ. ಪರಿಣಾಮವಾಗಿ, ಮುಂದಿನ ಕೆಲವೇ ವರ್ಷಗಳಲ್ಲಿ ಮೊಬೈಲ್ ಅಪ್‌ಗ್ರೇಡ್ ಚಕ್ರ ನಿಧಾನಗೊಳ್ಳಬಹುದು. ಜನರು ಹೊಸ ಫೋನ್ ಖರೀದಿಯನ್ನು ಮುಂದೂಡುವ ಸಾಧ್ಯತೆ ಇದೆ. ಇದು ಒಟ್ಟಾರೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ವೃದ್ಧಿಯನ್ನು ಕೂಡ ಕುಂಠಿತಗೊಳಿಸಬಹುದು ಎಂಬುದು ತಜ್ಞರ ಎಚ್ಚರಿಕೆ.

ಆಪಲ್ ಕಂಪನಿಯ ಸ್ಥಿತಿ ಇತರ ಬ್ರಾಂಡ್‌ಗಳಿಗಿಂತ ಭಿನ್ನವಾಗಿದೆ. ತನ್ನದೇ ಆದ ಸಾಫ್ಟ್‌ವೇರ್–ಹಾರ್ಡ್‌ವೇರ್ ಸಮನ್ವಯದಿಂದ ಕಡಿಮೆ RAM ನಲ್ಲಿಯೇ ಉತ್ತಮ ಕಾರ್ಯಕ್ಷಮತೆ ನೀಡುವಲ್ಲಿ ಆಪಲ್ ಯಶಸ್ವಿಯಾಗಿದೆ. ದೀರ್ಘಾವಧಿಯ ಸರಬರಾಜು ಒಪ್ಪಂದಗಳ ಮೂಲಕ RAM ಲಭ್ಯತೆಯನ್ನು ಕೂಡ ಅದು ಭಾಗಶಃ ಭದ್ರಪಡಿಸಿಕೊಂಡಿದೆ. ಆದರೂ ಜಾಗತಿಕ ಚಿಪ್ ಮತ್ತು ಮೆಮೊರಿ ವೆಚ್ಚದ ಏರಿಕೆಯ ಬಿಸಿ ಆಪಲ್‌ನ್ನೂ ತಟ್ಟಿದೆ. ಇದರಿಂದ ಮುಂದಿನ iPhone ಮಾದರಿಗಳ ಸರಾಸರಿ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

ಸದ್ಯ ಈ RAM ಕೊರತೆ ಅಥವಾ ಹೆಚ್ಚಿದ ಬೆಲೆ ಕೇವಲ ತಾತ್ಕಾಲಿಕ ಅಡಚಣೆಯೇ ಅಥವಾ ದೀರ್ಘಕಾಲೀನ ಬದಲಾವಣೆಯ ಆರಂಭವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ತಜ್ಞರ ಅಭಿಪ್ರಾಯದಲ್ಲಿ, ಹೊಸ RAM ಫ್ಯಾಬ್ರಿಕೇಶನ್ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲು ಇನ್ನೂ ಎರಡರಿಂದ ಮೂರು ವರ್ಷಗಳು ಬೇಕಾಗಬಹುದು. ಅಷ್ಟರವರೆಗೆ ಬೆಲೆಗಳು ‘ಹೈ ಝೋನ್’ಲ್ಲೇ ಉಳಿಯುವ ಸಾಧ್ಯತೆ ಹೆಚ್ಚು. ಇದರರ್ಥ, 16GB RAM ಹೊಂದಿರುವ ಫೋನ್‌ಗಳು ಸಾಮಾನ್ಯ ವೈಶಿಷ್ಟ್ಯವಲ್ಲದೆ, ಪ್ರೀಮಿಯಂ ಅಥವಾ ಐಷಾರಾಮಿ ಉತ್ಪನ್ನಗಳ ಪಟ್ಟಿಗೆ ಸೇರಬಹುದು.

ಇದನ್ನೂ ಓದಿ: ದಲಿತ-ಮಹಿಳೆಯರಿಗೆ ಘನತೆಯ ಹಕ್ಕು ಕೊಟ್ಟ ʼಮನರೇಗಾʼ; ಹಕ್ಕಿನ ಬೇರು ಕಿತ್ತ ʼವಿಬಿ-ಜಿ ರಾಮ್‌ಜಿʼ

AI ಯಿಂದ ಭವಿಷ್ಯದಲ್ಲಿ ಪ್ರತಿಯೊಬ್ಬರ ಬದುಕು ಸುಲಭವಾಗುತ್ತದೆ ಎಂಬ ಭರವಸೆಯ ನಡುವೆ ಅದೇ AIನ ಬೆಳವಣಿಗೆಗೆ ಬೇಕಾದ ಮೂಲಸೌಕರ್ಯದ ವೆಚ್ಚವನ್ನು ಇಂದು ಸಾಮಾನ್ಯ ಮೊಬೈಲ್ ಬಳಕೆದಾರರು ಪರೋಕ್ಷವಾಗಿ ಕಟ್ಟಬೇಕಾಗಿದೆ. ಹೆಚ್ಚು ಬೆಲೆ, ಕಡಿಮೆ ಸ್ಪೆಕ್ಸ್ ಅಥವಾ ಅಪ್‌ಗ್ರೇಡನ್ನು ನಿಧಾನಿಸುವುದು/ಕೊಳ್ಳುವುದನ್ನು ಮುಂದೂಡುವುದು.. ಈ ಆಯ್ಕೆಗಳ ನಡುವೆ ಗ್ರಾಹಕರು ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ.

ಮೊಬೈಲ್ ಫೋನ್‌ಗಳು ಸಂಪೂರ್ಣವಾಗಿ ಕೈಗೆಟುಕದ ವಸ್ತುವಾಗುತ್ತವೆಯೇ? ಬಹುಶಃ ಇಲ್ಲ. ಆದರೆ ಕಡಿಮೆ ಬೆಲೆಯಲ್ಲಿ ಹೆಚ್ಚು RAM ಇರುವ ಫೋನ್‌ ಕೊಳ್ಳುವ ಕನಸು ಮುಂದಿನ ಕೆಲ ವರ್ಷಗಳಿಗೆ ಮುಂದೂಡಲ್ಪಡುವುದು ನಿಶ್ಚಿತ. AI ಭವಿಷ್ಯವನ್ನು ಕಟ್ಟುತ್ತಿರಬಹುದು ಆದರೆ ಆ ಭವಿಷ್ಯದ ಬೆಲೆಯನ್ನು ಯಾರು, ಹೇಗೆ ಮತ್ತು ಎಷ್ಟು ವ್ಯಯಿಸಬೇಕಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸ್ಪಷ್ಟವಾಗಿಲ್ಲ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...