ಇಂಗ್ಲೆಂಡ್‌ನ ಓಲ್ಡ್‌ಬರಿಯ ಬಳಿಯ ಉದ್ಯಾನವನವೊಂದರಲ್ಲಿ ಸೆ.9 ರಂದು 20ರ ವರ್ಷದ ಸಿಖ್ ಯುವತಿಯೊಬ್ಬರ ಮೇಲೆ ಇಬ್ಬರು ಅಪರಿಚಿತರು ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಅತ್ಯಾಚಾರವೆಸಗುವ ಸಂದರ್ಭದಲ್ಲಿ ಆರೋಪಿಗಳು “ನಿನ್ನ ದೇಶಕ್ಕೆ ಹಿಂತಿರುಗು” ಎಂದು ಜನಾಂಗೀಯವಾಗಿ ಅವಮಾನಿಸಿದ್ದಾರೆ ಎಂದು ವರದಿಯಾಗಿದೆ.
ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಈ ಘಟನೆಯನ್ನು ಜನಾಂಗೀಯ ದ್ವೇಷದಿಂದ ಕೂಡಿದ ಅಪರಾಧವೆಂದು ಪರಿಗಣಿಸಿ, ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಆರೋಪಿಗಳಿಬ್ಬರೂ ಶ್ವೇತವರ್ಣದವರಾಗಿದ್ದಾರೆ ಎಂದು ವಿವರಿಸಲಾಗಿದೆ. ಪೊಲೀಸರು ಈ ಪ್ರದೇಶದ ಸಿಸಿಟಿವಿ, ಡ್ಯಾಶ್‌ಕ್ಯಾಮ್ ಅಥವಾ ಮೊಬೈಲ್ ದೃಶ್ಯಗಳನ್ನು ಸಂಗ್ರಹಿಸಲು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮು ರಾಜಕಾರಣ: ಒಡೆದ ಮನೆಯಲ್ಲಿ ಹಿಂದುತ್ವಕ್ಕೆ ಒಡೆಯನಾರು?
“ಇದೊಂದು ಭೀಕರ ದಾಳಿಯಾಗಿದ್ದು, ಈ ಇಬ್ಬರು ಆರೋಪಿಗಳನ್ನು ನೋಡಿದವರು ಅಥವಾ ಯಾವುದೇ ದೃಶ್ಯ ಹೊಂದಿರುವವರು ತಕ್ಷಣ ನಮ್ಮನ್ನು ಸಂಪರ್ಕಿಸಬೇಕು” ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯಿಂದ ಸಿಖ್ ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಜನಾಂಗೀಯ ದ್ವೇಷದ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಸಮುದಾಯ ವರದಿಗಳನ್ನು ಮಾಡಿದೆ.
ಲೇಬರ್ ಸಂಸದೆ ಪ್ರೀತ್ ಕೌರ್ ಗಿಲ್ ಈ ದಾಳಿಯನ್ನು ಖಂಡಿಸಿದ್ದು, ಇದನ್ನು “ತೀವ್ರ ಹಿಂಸಾಚಾರ ಮತ್ತು ಜನಾಂಗೀಯ ದ್ವೇಷದ ಕೃತ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಘಟನೆ ನಡೆದ ಪ್ರದೇಶದಲ್ಲಿ ಗಸ್ತು ತೀವ್ರಗೊಳಿಸಿದ್ದು, ಸಂತ್ರಸ್ತೆಗೆ ವಿಶೇಷ ಸಹಾಯವನ್ನು ಒದಗಿಸಲಾಗುತ್ತಿದೆ. ತನಿಖೆ ಮುಂದುವರೆದಿದೆ.





