ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಕುರಿತು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಗ್ರೀನ್‌ಲ್ಯಾಂಡ್‌ಗೆ ಇಷ್ಟವಿರಲಿ, ಇಲ್ಲದಿರಲಿ, ನಾನು ಈ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರುವುದು ಖಚಿತ,” ಎಂದು ಅವರು ಘೋಷಿಸಿದ್ದಾರೆ.
ಶ್ವೇತಭವನದಲ್ಲಿ ಶುಕ್ರವಾರ ನಡೆದ ತೈಲ ಮತ್ತು ಅನಿಲ ಉದ್ಯಮದ ಪ್ರಮುಖರೊಂದಿಗಿನ ಸಭೆಯಲ್ಲಿ ಮಾತನಾಡಿದ ಟ್ರಂಪ್, ವೆನೆಜುವೆಲಾದ ತೈಲ ನಿಕ್ಷೇಪಗಳ ಮೇಲೆ ಅಮೆರಿಕದ ಕಂಪನಿಗಳು ಹಿಡಿತ ಸಾಧಿಸುವ ಯೋಜನೆಯನ್ನು ಚರ್ಚಿಸುತ್ತಲೇ, ಗ್ರೀನ್‌ಲ್ಯಾಂಡ್ ವಿಚಾರವನ್ನೂ ಪ್ರಸ್ತಾಪಿಸಿದರು. ಪ್ರತಿಸ್ಪರ್ಧಿ ರಾಷ್ಟ್ರಗಳು ಆಕ್ರಮಿಸಿಕೊಳ್ಳುವ ಮೊದಲೇ ಆಯಕಟ್ಟಿನ ಪ್ರದೇಶಗಳ ಮೇಲೆ ಅಮೆರಿಕ ಪ್ರಭುತ್ವ ಸಾಧಿಸಬೇಕು ಎಂಬ ತಮ್ಮ ಸಾಮ್ರಾಜ್ಯಶಾಹಿ ವಿದೇಶಾಂಗ ನೀತಿಯನ್ನು ಅವರು ಸಮರ್ಥಿಸಿಕೊಂಡರು.
“ಒಂದು ವೇಳೆ ನಾವು ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳದಿದ್ದರೆ, ರಷ್ಯಾ ಅಥವಾ ಚೀನಾ ಅದನ್ನು ಆಕ್ರಮಿಸಿಕೊಳ್ಳಲಿವೆ,” ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದರು. ಗ್ರೀನ್‌ಲ್ಯಾಂಡ್ ಸುತ್ತಲೂ ಚೀನಾ ಮತ್ತು ರಷ್ಯಾದ ಯುದ್ಧನೌಕೆಗಳು ಸುತ್ತುವರಿದಿವೆ ಎಂದು ಅವರು ಸುಳ್ಳು ಮಾಹಿತಿ ನೀಡಿದರು. ವಾಸ್ತವದಲ್ಲಿ, ಆರ್ಕ್ಟಿಕ್ ವಲಯದಲ್ಲಿ ರಷ್ಯಾ ಮತ್ತು ಚೀನಾ ಸಕ್ರಿಯವಾಗಿದ್ದರೂ, ಗ್ರೀನ್‌ಲ್ಯಾಂಡ್ ಅವುಗಳ ನೌಕೆಗಳಿಂದ ಸುತ್ತುವರಿದಿಲ್ಲ. ಬದಲಾಗಿ, ಅಲ್ಲಿ ಅಮೆರಿಕದ ಸೇನಾ ನೆಲೆ ಈಗಾಗಲೇ ಅಸ್ತಿತ್ವದಲ್ಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್; ಸರ್ಕಾರದ ಹೆಂಗರುಳಿನ ಯೋಜನೆಗೆ ಬೇಕಿದೆ ಅಧಿಕಾರಿಗಳ ಬದ್ಧತೆ
ಗ್ರೀನ್‌ಲ್ಯಾಂಡ್ ಸ್ವಾಧೀನದ ಟ್ರಂಪ್ ಅವರ ಪ್ರಸ್ತಾಪವನ್ನು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಅಧಿಕಾರಿಗಳು ಈ ಹಿಂದೆಯೇ ಕಟುವಾಗಿ ವಿರೋಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ನಾನು ಸುಲಭವಾಗಿ (ಮಾತುಕತೆಯ ಮೂಲಕ) ಒಪ್ಪಂದ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಆದರೆ ಅದು ಸಾಧ್ಯವಾಗದಿದ್ದರೆ, ನಾವು ‘ಕಠಿಣ ಮಾರ್ಗ’ವನ್ನು (ಬಲ ಪ್ರಯೋಗ) ಹಿಡಿಯಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ನ್ಯಾಟೋ ಒಪ್ಪಂದಕ್ಕೆ ಅಪಾಯ
ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿದೆ. ಡೆನ್ಮಾರ್ಕ್ ಮತ್ತು ಅಮೆರಿಕಗಳೆರಡೂ ‘ನ್ಯಾಟೋ’ (NATO) ಒಕ್ಕೂಟದ ಸ್ಥಾಪಕ ಸದಸ್ಯ ರಾಷ್ಟ್ರಗಳು. ನ್ಯಾಟೋ ಒಪ್ಪಂದದ ಪ್ರಕಾರ, ಒಂದು ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲಾ ಸದಸ್ಯರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಟ್ರಂಪ್ ಅವರು ಬಲವಂತವಾಗಿ ಗ್ರೀನ್‌ಲ್ಯಾಂಡ್ ಪಡೆಯಲು ಮುಂದಾದರೆ, ಈ ಪ್ರಮುಖ ಸೇನಾ ಮೈತ್ರಿಕೂಟದ ತತ್ವವೇ ಮುರಿದು ಬೀಳುವ ಸಾಧ್ಯತೆಯಿದೆ.





