ಭಾರತದ ಆರ್ಥಿಕತೆಯ ವೇಗ ಕೆಲ ವರ್ಷಗಳಿಂದ ಏರುತ್ತಲೇ ಇದೆ. ಹಲವು ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಜಪಾನನ್ನು ಹಿಂದಿಕ್ಕಿ ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಇದೇ ರೀತಿ ಮುಂದುವರೆದರೆ ಮುಂದಿನ 50 ವರ್ಷಗಳಲ್ಲಿ ಅಂದರೆ, 2075ರ ಹೊತ್ತಿಗೆ ಅಮೆರಿಕವನ್ನೂ ಹಿಂದಿಕ್ಕಿ ಭಾರತ ಬೆಳೆಯಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ನಡೆಸಿದ ದೀರ್ಘಾವಧಿ ಆರ್ಥಿಕ ಅಂದಾಜು ವರದಿ ಹೇಳುತ್ತದೆ.
ಸುಮಾರು 4.18 ಟ್ರಿಲಿಯನ್ ಡಾಲರ್‌ಗಳ ಒಟ್ಟು ದೇಶೀಯ ಉತ್ಪನ್ನ (GDP) ಹೊಂದಿರುವ ಭಾರತದ ಆರ್ಥಿಕತೆ, ಮುಂದಿನ ಎರಡು–ಮೂರು ವರ್ಷಗಳಲ್ಲಿ ಜರ್ಮನಿಯನ್ನೂ ಮೀರಿಸಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆಯಂತೆ. ಆದರೆ 2ನೇ ಸ್ಥಾನಕ್ಕೇರಲು 50 ವರ್ಷಗಳು ಬೇಕಾಗಬಹುದು. 57 ಟ್ರಿಲಿಯನ್ ಜಿಡಿಪಿಯೊಂದಿಗೆ ಚೀನಾ ಎಂದಿನಂತೆ ಅಗ್ರಸ್ಥಾನದಲ್ಲಿರುತ್ತದೆ.
ಈ ವರದಿಯ ಪ್ರಕಾರ, ಏಷ್ಯಾ ಮತ್ತು ಆಫ್ರಿಕಾದ ಉದಯೋನ್ಮುಖ ದೇಶಗಳು ಜಾಗತಿಕ ಉತ್ಪಾದನೆಯಲ್ಲಿ ಹೆಚ್ಚು ಪಾಲು ಹೊಂದಲಿವೆ. ಇಂದಿನ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ವೃದ್ಧಾಪ್ಯಕ್ಕೆ ಹೋಗುವುದರಿಂದ ಮತ್ತು ಆರ್ಥಿಕ ಬೆಳವಣಿಗೆ ನಿಧಾನಗೊಳ್ಳುವುದರಿಂದ, ಕ್ರಮಾಂಕದಲ್ಲಿ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಚೀನಾ ಹಿಂದೆ ಭಾರತ 52.5 ಟ್ರಿಲಿಯನ್ ಡಾಲರ್ GDPಯೊಂದಿಗೆ 2ನೇ ಸ್ಥಾನದಲ್ಲಿರಲಿದೆ ಎಂದು ಊಹಿಸಲಾಗಿದೆ. ಅಮೆರಿಕ 51.5 ಟ್ರಿಲಿಯನ್ ಡಾಲರ್ GDPಯೊಂದಿಗೆ ಮೂರನೇ ಸ್ಥಾನದಲ್ಲಿರಲಿದೆ. ಈ ಮೂರು ದೇಶಗಳ ಆರ್ಥಿಕತೆಗಳು ಜಗತ್ತಿನಲ್ಲಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಇಂಡೋನೇಷ್ಯಾ 13.7 ಟ್ರಿಲಿಯನ್ ಡಾಲರ್ GDPಯೊಂದಿಗೆ ನಾಲ್ಕನೇ ಸ್ಥಾನ, ನೈಜೀರಿಯಾ (13.1 ಟ್ರಿಲಿಯನ್), ಪಾಕಿಸ್ತಾನ (12.3 ಟ್ರಿಲಿಯನ್), ಈಜಿಪ್ಟ್ (10.4 ಟ್ರಿಲಿಯನ್), ಬ್ರೆಜಿಲ್ (8.7 ಟ್ರಿಲಿಯನ್), ಜರ್ಮನಿ (8.1 ಟ್ರಿಲಿಯನ್) ಮತ್ತು ಮೆಕ್ಸಿಕೋ (7.6 ಟ್ರಿಲಿಯನ್) ಕ್ರಮವಾಗಿ ಸ್ಥಾನ ಹಂಚಿಕೊಳ್ಳಲಿವೆ ಎಂದು ವರದಿ ಹೇಳುತ್ತದೆ. ಅದೇ ಸಮಯದಲ್ಲಿ, ಬ್ರಿಟನ್ ಮತ್ತು ಜಪಾನ್ ಕ್ರಮಾಂಕದಲ್ಲಿ ಹಿಂದೆ ಸರಿಯುವ ಸಾಧ್ಯತೆ ಇದ್ದು, ಅವುಗಳ GDP ಕ್ರಮವಾಗಿ 7.6 ಟ್ರಿಲಿಯನ್ ಮತ್ತು 7.5 ಟ್ರಿಲಿಯನ್ ಗಳಷ್ಟಿರಬಹುದಂತೆ.
ಈ ಬೆಳವಣಿಗೆಗೆ ಜನಸಂಖ್ಯೆಯ ಸ್ವರೂಪ (demography) ಪ್ರಮುಖ ಪಾತ್ರ ವಹಿಸಲಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ತಿಳಿಸಿದೆ. ಯುವ ಮತ್ತು ವಿಸ್ತರಿಸುತ್ತಿರುವ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ, ನೈಜೀರಿಯಾ, ಪಾಕಿಸ್ತಾನ, ಈಜಿಪ್ಟ್ ಮತ್ತು ಎಥಿಯೋಪಿಯಾ ಮೊದಲಾದ ದೇಶಗಳು, ಸರಿಯಾದ ನೀತಿಗಳನ್ನು ಅನುಸರಿಸಿ, ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ವೇಗವಾಗಿ ಆರ್ಥಿಕವಾಗಿ ಬೆಳೆಯಬಹುದು. ಇತ್ತ ಜಪಾನ್, ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ ಮೊದಲಾದ ವೃದ್ಧಾಪ್ಯ ಸಮಾಜಗಳು ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಅನುಭವಿಸಬಹುದು.
ಇದನ್ನೂ ಓದಿ: ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ? ಗೋಲ್ಡ್‌ಮನ್ ಸ್ಯಾಚ್ಸ್ ವರದಿ ಹೇಳುವುದೇನು?
ಈ ಅಂದಾಜುಗಳು ಭವಿಷ್ಯದಲ್ಲಿ ಯುವ ಕಾರ್ಮಿಕ ಶಕ್ತಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿರಂತರ ನೀತಿ ಸುಧಾರಣೆಗಳ ನೆರವಿನಿಂದ, ಭಾರತ 2075ರ ವೇಳೆಗೆ ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬಹುದು ಎಂದು ಸೂಚಿಸುತ್ತವೆ. ಚೀನಾಗಿಂತ ಸ್ವಲ್ಪ ಹಿಂದೆ ಉಳಿದರೂ, ಈ ಬೆಳವಣಿಗೆ ಹೆಚ್ಚು ಉದ್ಯೋಗಾವಕಾಶಗಳು, ಹೆಚ್ಚಿದ ಆದಾಯ ಮತ್ತು ಉತ್ತಮ ಆರ್ಥಿಕ ಅವಕಾಶಗಳಿಗೆ ದಾರಿ ಮಾಡಿಕೊಡಬಹುದು. ಆದರೆ, ಇಂತಹ ದೀರ್ಘಾವಧಿ ಅಂದಾಜುಗಳು ಕಾಲಕ್ರಮೇಣ ಬದಲಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಗೋಲ್ಡ್‌ಮನ್ ಸ್ಯಾಕ್ಸ್ ಈ ಅಂದಾಜುಗಳನ್ನು ಮೊದಲ ಬಾರಿಗೆ 2022ರಲ್ಲಿ ಪ್ರಕಟಿಸಿತ್ತು, ಮತ್ತು ಇತರೆ ಅಂತಾರಾಷ್ಟ್ರೀಯ ಆರ್ಥಿಕ ವರದಿಗಳಲ್ಲೂ ಇದೇ ರೀತಿಯ ನಿರ್ಣಯಗಳು ಕಾಣಿಸಿಕೊಂಡಿದ್ದವು. 2025ನೇ ವರ್ಷ ಮುಗಿದಿರುವ ಈ ಹೊತ್ತಿನಲ್ಲಿ ಈ ವರದಿ ಪುನಃ ಜಾಗತಿಕವಾಗಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಆದರೆ, ಮುಂದಿನ ದಶಕಗಳಲ್ಲಿ ಜಾಗತಿಕ ಹಾಗೂ ದೇಶೀಯ ಪರಿಸ್ಥಿತಿಗಳು ಹೇಗೆ ರೂಪುಗೊಳ್ಳುತ್ತವೆಯೋ ಅದರ ಮೇಲೆ ಈ ಅಂಕಿಅಂಶಗಳು ಬಹಳ ಮಟ್ಟಿಗೆ ಅವಲಂಬಿತವಾಗಿರುತ್ತವೆ ಎಂದು ಅರ್ಥಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ.





