ಅಮೆರಿಕ ಮೇಲಿನ ಅತಿಯಾದ ಅವಲಂಬನೆಯಿಂದ ಭಾರತದ ಸಾರ್ವಭೌಮತ್ವಕ್ಕೂ ಧಕ್ಕೆಯಾಗಬಹುದು. ಈ ಯೋಜನೆಯನ್ನು ಸಂಪೂರ್ಣವಾಗಿ ಅಮೆರಿಕದ ಕಂಪನಿಗಳೇ ನಿರ್ವಹಿಸುವುದರಿಂದ, ಅಮೆರಿಕದ ಸರ್ಕಾರ ಒತ್ತಡದಿಂದಾಗಿ, ಗೂಗಲ್ ಡೇಟಾ ಹರಿವನ್ನು ನಿಲ್ಲಿಸಬಹುದು ಅಥವಾ ನಿಯಂತ್ರಿಸಬಹುದು.
ದೆಹಲಿಯಲ್ಲಿ ನಡೆದ ‘AI ಇಂಪ್ಯಾಕ್ಟ್ ಸಮಿಟ್ 2026’ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಭಾರತದಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅವರ ಘೋಷಣೆಯಲ್ಲಿ ‘ಅಮೆರಿಕಾ-ಇಂಡಿಯಾ ಕನೆಕ್ಟ್’ (AIC) ಎಂಬ ‘ಸಬ್-ಸೀ ಕೇಬಲ್’ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಇದು, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಗೂಗಲ್ ಹೂಡಿಕೆ ಮಾಡಲಿರುವ 15 ಬಿಲಿಯನ್ ಡಾಲರ್ (ಸುಮಾರು 1.25 ಲಕ್ಷ ಕೋಟಿ ರೂ.) AI ಮೂಲಸೌಕರ್ಯ ಯೋಜನೆಯ ಭಾಗವಾಗಿದೆ. ಇದೇ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನೂ ಪಿಚೈ ಭೇಟಿ ಮಾಡಿದ್ದಾರೆ.
ಈ ‘ಸಬ್-ಸೀ ಕೇಬಲ್’ ಯೋಜನೆಯು ಭಾರತವನ್ನು ಅಮೆರಿಕ ಮತ್ತು ದಕ್ಷಿಣ ಗೋಳಾರ್ಧದ ಹಲವು ದೇಶಗಳೊಂದಿಗೆ ಸಂಪರ್ಕಿಸುವ ಹೊಸ ಫೈಬರ್-ಆಪ್ಟಿಕ್ ಮಾರ್ಗಗಳನ್ನು ರೂಪಿಸುತ್ತದೆ. AI ಆಧಾರಿತ ‘ಡೇಟಾ’ ಹರಿವನ್ನು ವೇಗಗೊಳಿಸುತ್ತದೆ. ಇಂಟರ್ನೆಟ್, ಡೇಟಾ ಟ್ರಾನ್ಸ್‌ಫರ್, ಕ್ಲೌಡ್ ಸರ್ವಿಸ್‌ಗಳು ಹಾಗೂ AI ಸಂಬಂಧಿತ ಎಲ್ಲಾ ಅಂತಾರಾಷ್ಟ್ರೀಯ ಸಂಪರ್ಕಗಳಿಗೆ ರಹದಾರಿ ಮಾಡಿಕೊಡುತ್ತದೆ ಎಂದು ಪಿಚೈ ಹೇಳಿದ್ದಾರೆ.
ಯೋಜನೆಯಡಿ ಮುಂಬೈ ಮತ್ತು ಚೆನ್ನೈ ಜೊತೆಗೆ ವಿಶಾಖಪಟ್ಟಣಂ ಹೊಸ ‘ಕೇಬಲ್ ಲ್ಯಾಂಡಿಂಗ್ ಹಬ್’ ಆಗಿ ಹೊರಹೊಮ್ಮಲಿದೆ. ಈ ಕ್ರಮವು ಭೌಗೋಳಿಕ ವೈವಿಧ್ಯತೆಯನ್ನು ಹೆಚ್ಚಿಸುವುದಲ್ಲದೆ, ಜಾಗತಿಕ ಸಂಪರ್ಕಕ್ಕಾಗಿ ಭಾರತದ ಪಶ್ಚಿಮ ಕರಾವಳಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂಬುದು ಪಿಚೈ ಅವರ ವಾದ.
ಗೂಗಲ್‌ನ ಈ ‘ಸಬ್-ಸೀ ಕೇಬಲ್’ ಯೋಜನೆಯಡಿ ವಿಶಾಖಪಟ್ಟಣಂನಿಂದ ಮೂರು ಪ್ರಮುಖ ಸಮುದ್ರಾಂತರ ಮಾರ್ಗಗಳು (ಸಬ್-ಸೀ) ಆರಂಭವಾಗಲಿವೆ. ಇವು ನಾಲ್ಕು ಖಂಡಗಳನ್ನು ಸಂಪರ್ಕಿಸುತ್ತವೆ:
1. ವಿಶಾಖಪಟ್ಟಣಂ-ಸಿಂಗಾಪುರ: ಈ ಸಬ್-ಸೀ ಕೇಬಲ್ ಮಾರ್ಗವು ಬೋಸುನ್ ಮತ್ತು ಟಬುವಾ ಸಿಸ್ಟಮ್‌ಗಳ ಮೂಲಕ ಆಸ್ಟ್ರೇಲಿಯಾ ಮತ್ತು ದಕ್ಷಿಣ ಪೆಸಿಫಿಕ್ ಮಾರ್ಗವಾಗಿ ಅಮೆರಿಕಾದ ಪಶ್ಚಿಮ ಕರಾವಳಿಯನ್ನು ತಲುಪುತ್ತದೆ.
2. ವಿಶಾಖಪಟ್ಟಣಂ-ಚೆನ್ನೈ: ಇದು ಭೂಮಿಯ ಮೇಲಿನ ಫೈಬರ್ ಸಂಪರ್ಕ ಮತ್ತು ಸಮುದ್ರಾಂತರ ಮಾರ್ಗವನ್ನು ಹೊಂದಿರಲಿದೆ. ಇದು, ಎಕ್ವಿಯಾನೋ ಮತ್ತು ನುವೆಮ್ ಕೇಬಲ್‌ಗಳ ಮೂಲಕ ದಕ್ಷಿಣ ಆಫ್ರಿಕಾವನ್ನು ತಲುಪುತ್ತದೆ. ಇದು ಆಫ್ರಿಕಾ ಮೂಲಕ ಅಮೆರಿಕಾದ ಪೂರ್ವ ಕರಾವಳಿ ಮತ್ತು ಭಾರತದ ನಡುವೆ ಸಂಪರ್ಕ ಕಲ್ಪಿಸುತ್ತದೆ.
3. ವಿಶಾಖಪಟ್ಟಣಂ-ಆಸ್ಟ್ರೇಲಿಯಾ: ಈ ಮಾರ್ಗವು ಮುಂಬೈ-ಪಶ್ಚಿಮ ಆಸ್ಟ್ರೇಲಿಯಾ ನಡುವೆ ಇರಲಿದ್ದು, ದಕ್ಷಿಣ ಗೋಳಾರ್ಧದೊಂದಿಗೆ ಭಾರತದ ಸಂಪರ್ಕವನ್ನು ಒದಗಿಸುತ್ತದೆ.
ಈ ಮಾರ್ಗಗಳು ದತ್ತಾಂಶದ ದಟ್ಟಣೆಯನ್ನು ಒಂದೇ ಹಾದಿಯಲ್ಲಿ ಕೇಂದ್ರೀಕರಿಸುವ ಬದಲಿಗೆ ವಿವಿಧ ಸಾಗರಗಳ ಮೂಲಕ ನಿರ್ವಹಿಸುತ್ತವೆ.
ಈ ‘ಸಬ್-ಸೀ ಕೇಬಲ್’ ಮಾರ್ಗಗಳನ್ನು ಬೃಹತ್ ಪ್ರಮಾಣದ ದತ್ತಾಂಶ ನಿರ್ವಹಣೆಗಾಗಿ ನಿರ್ಮಿಸಲಾಗಿದೆ. ವಿಶ್ವದ ಎಲ್ಲ ಅಂತಾರಾಷ್ಟ್ರೀಯ ಇಂಟರ್ನೆಟ್ ಟ್ರಾಫಿಕ್‌ನ 95-99% ಸಬ್‌ಸೀ ಕೇಬಲ್‌ಗಳ ಮೂಲಕವೇ ಹೋಗುತ್ತದೆ. ಭಾರತದ IT, ಸಾಫ್ಟ್‌ವೇರ್ ಎಕ್ಸ್‌ಪೋರ್ಟ್, BPO ಮತ್ತು ಡಿಜಿಟಲ್ ಸರ್ವಿಸ್‌ಗಳು ಇದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಲಿವೆ. ಇವು AI ತರಬೇತಿ, ಹೈಪರ್‌ಸ್ಕೇಲ್ ಕ್ಲೌಡ್ ಸೇವೆಗಳು ಹಾಗೂ ಕಡಿಮೆ ಸಮಯದಲ್ಲಿ ದತ್ತಾಂಶ ವರ್ಗಾವಣೆಗೆ ಅಗತ್ಯವಾದ ಹೆಚ್ಚಿನ ಬ್ಯಾಂಡ್‌ವಿಡ್ತ್ ಅನ್ನು ಬೆಂಬಲಿಸುತ್ತವೆ. ಒಂದು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾರತಕ್ಕೆ ವೇಗವಾದ ಮತ್ತು ವಿಶ್ವಾಸಾರ್ಹ ಜಾಗತಿಕ ಸಂಪರ್ಕವನ್ನು ಒದಗಿಸುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಅಮೆರಿಕ-ಇರಾನ್ ಯುದ್ಧದ ಕಾರ್ಮೋಡ; ಭಾರತದ ಆರ್ಥಿಕತೆ, ಭದ್ರತೆಗೇನು ಸವಾಲು?
ವಿಶಾಖಪಟ್ಟಣಂಅನ್ನು ಅಂತಾರಾಷ್ಟ್ರೀಯ ಗೇಟ್‌ವೇ ಆಗಿ ಪರಿವರ್ತಿಸುವ ಮೂಲಕ, ಗೂಗಲ್ ಅಸ್ತಿತ್ವದಲ್ಲಿರುವ (ಮುಂಬೈ-ಚೆನ್ನೈ) ಕೇಂದ್ರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುತ್ತದೆ. ಈ ಯೋಜನೆಯು ಲಕ್ಷಾಂತರ ಜನರಿಗೆ ತರಬೇತಿ ನೀಡುವ AI ಕೌಶಲ್ಯ ಕಾರ್ಯಕ್ರಮಗಳಿಗೂ ಪೂರಕವಾಗಲಿದೆ ಎನ್ನುತ್ತಿದೆ.
ತನ್ನ ‘ಸಬ್-ಸೀ ಕೇಬಲ್’ ಕುರಿತು ವಿಶ್ವಾಸದಲ್ಲಿರುವ ಗೂಗಲ್, ”ವಿಶ್ವಾಸಾರ್ಹ ಮೂಲಸೌಕರ್ಯವು ‘AI ವಿಭಜನೆ’ಯನ್ನು (AI Divide) ಹೋಗಲಾಡಿಸಲು ಇರುವ ಪ್ರಾಯೋಗಿಕ ಮಾರ್ಗವಾಗಿದೆ. ಹೆಚ್ಚಿನ ಸಮುದ್ರಾಂತರ ಕೇಬಲ್ ಸಾಮರ್ಥ್ಯವೆಂದರೆ ಅಗ್ಗದ ಮತ್ತು ವೇಗದ ಇಂಟರ್ನೆಟ್ ಎಂದರ್ಥ. ಇದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ” ಎಂದು ವಾದಿಸುತ್ತಿದೆ.
ಮುಂದುವರೆದು, AI ಮೂಲಕ ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು 30 ಮಿಲಿಯನ್ ಡಾಲರ್ ಮತ್ತು ವೈಜ್ಞಾನಿಕ ಸಂಶೋಧನೆಗಾಗಿ ಮತ್ತೊಂದು 30 ಮಿಲಿಯನ್ ಡಾಲರ್‌ಅನ್ನು Google.org ಮೂಲಕ ನೀಡುವುದಾಗಿ ಗೂಗಲ್ ಘೋಷಿಸಿದೆ. ಗೂಗಲ್ ಡೀಪ್‌ಮೈಂಡ್ (Google DeepMind) ಕೂಡ ಭಾರತ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದೆ.
ಈ ‘ಸಬ್‌ಸೀ ಕೇಬಲ್’ ಯೋಜನೆಯು ಇಂಟರ್‌ನೆಂಟ್ ಸಂಪರ್ಕ ಮತ್ತು ಡೇಟಾ ವರ್ಗಾವಣೆಗೆ ಅನುಕೂಲ ಮಾಡಿಕೊಡುತ್ತದೆ ಎಂದೇ ವಾದಿಸಿದರೂ, ಭಾರತಕ್ಕೆ ಅಪಾಯಗಳ ಸಂಭವವೂ ಹೆಚ್ಚಿಸಿದೆ. ಈಗಾಗಲೇ, ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಹೆದರಿಸುತ್ತಿದ್ದಾರೆ. ಟ್ರಂಪ್ ಆದೇಶಗಳನ್ನು ಮೋದಿ ಶಿರಸಾ ಪಾಲಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಹೀಗಿರುವಾಗ, ‘ಸಬ್-ಸೀ ಕೇಬಲ್’ ಯೋಜನೆಯು ಭಾರತದ ಡೇಟಾ ಸುರಕ್ಷತೆ, ಸಾರ್ವಭೌಮತ್ವ ಹಾಗೂ ರಾಜಕೀಯ/ಗೂಢಾಚಾರಿಕೆ ಮೇಲೆ ಅಪಾಯ ಬೀರಬಹುದು ಎಂದು ಹೇಳಲಾಗುತ್ತಿದೆ.
ಗೂಗಲ್‌ನಂತಹ ಖಾಸಗಿ ಕಂಪನಿಗಳು ಅಮೆರಿಕದಲ್ಲಿರುವ ಕಾನೂನಿಗೆ ಹೆಚ್ಚಾಗಿ ಒಳಪಟ್ಟಿರುತ್ತವೆ. ಇವು, ಅಮೆರಿಕ ಆಡಳಿತದ ಬೆದರಿಕೆಗೆ ಒಳಗಾಗಿ, ಭಾರತೀಯರು ಸೇರಿದಂತೆ ವಿದೇಶಿ ನಾಗರಿಕ ಡೇಟಾಗಳನ್ನು ಸರ್ಕಾರಕ್ಕೆ ಒದಗಿಸಬಹುದು. ಇದು, ಡೇಟಾ ಗೂಢಾಚಾರಿಕೆ (surveillance-ಸವಿಲೆನ್ಸ್) ಅಪಾಯಗಳನ್ನು ಹೆಚ್ಚಿಸುತ್ತದೆ. ವಿಶೇಷವಾಗಿ, ಈ ಯೋಜನೆಯು ಅಮೆರಿಕ-ಭಾರತ ನಡುವೆ ಇರುವುದರಿಂದ, ಭಾರತದ IT ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ನಾಗರಿಕರರು, ರಾಷ್ಟ್ರೀಯ ಭದ್ರತೆ, ಆರ್ಥಿಕ ಹಾಗೂ ರಾಜಕೀಯ ಡೇಟಾಗಳು ಅಮೆರಿಕ ಗೂಢಚರ ಸಂಸ್ಥೆಗಳಿಗೆ (NSA) ನೇರವಾಗಿ ಲಭ್ಯವಾಗಬಹುದು ಎಂಬ ಆತಂಕಗಳಿವೆ.
ಅಂತೆಯೇ, ಅಮೆರಿಕ ಮೇಲಿನ ಅತಿಯಾದ ಅವಲಂಬನೆಯಿಂದ ಭಾರತದ ಸಾರ್ವಭೌಮತ್ವಕ್ಕೂ ಧಕ್ಕೆಯಾಗಬಹುದು. ಈ ಯೋಜನೆಯನ್ನು ಸಂಪೂರ್ಣವಾಗಿ ಅಮೆರಿಕದ ಕಂಪನಿಗಳೇ ನಿರ್ವಹಿಸುವುದರಿಂದ, ಅಮೆರಿಕದ ಸರ್ಕಾರ ಒತ್ತಡದಿಂದಾಗಿ, ಗೂಗಲ್ ಡೇಟಾ ಹರಿವನ್ನು ನಿಲ್ಲಿಸಬಹುದು ಅಥವಾ ನಿಯಂತ್ರಿಸಬಹುದು ಎಂಬ ಅಭಿಪ್ರಾಯಗಳಿವೆ.
ಭಾರತ-ಅಮೆರಿಕ ಸಂಬಂಧಗಳು ಉತ್ತಮವಾಗಿದ್ದರೂ, ಭವಿಷ್ಯದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿದರೆ, ಅಮೆರಿಕವು ಈ ಡಿಜಿಟಲ್ ಮೂಲಸೌಕರ್ಯವನ್ನು ಹತೋಟಿಗೆ ತೆಗೆದುಕೊಳ್ಳಬಹುದು. ಇದು ಭಾರತದ ವಿದೇಶಾಂಗ ನೀತಿಯ ಮೇಲೆ ಪರೋಕ್ಷ ಒತ್ತಡ ತರುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.




