ಕಾಂಗ್ರೆಸ್ ಮಾಡಿದ ಬಹಳಷ್ಟು ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ. ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಹೆಚ್ಚು ಸಂತೋಷಪಡುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
1984ರ ಗಲಭೆಗಳು ಮತ್ತು ಸಿಖ್ ಸಮುದಾಯದೊಂದಿಗಿನ ಕಾಂಗ್ರೆಸ್ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
80ರ ದಶಕದಲ್ಲಿ ನಡೆದಿದ್ದು ತಪ್ಪು ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 21 ರಂದು ಅಮೆರಿಕದ ಬ್ರೌನ್ ವಿವಿಯ ವಾಟ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್‌ನಲ್ಲಿ ನಡೆದ ಸಂವಾದದಲ್ಲಿ ಅವರು ಹೀಗೆ ಹೇಳಿದ್ದಾರೆ. ಸಂವಾದದ ವಿಡಿಯೊವನ್ನು ಶನಿವಾರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಸಿಖ್ ಗಲಭೆಯನ್ನು ಉಲ್ಲೇಖಿಸಿ, ಸಿಖ್ ಸಮುದಾಯದೊಂದಿಗೆ ಸಂಬಂಧ ಪುನಃ ಸ್ಥಾಪಿಸಲು ಯಾವ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದು ಸಿಖ್ ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದ್ದಾರೆ.
ಆಗ ಉತ್ತರಿಸಿದ ರಾಹುಲ್ ಗಾಂಧಿ, “ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿ ಮಾಡಿದ ಎಲ್ಲದಕ್ಕೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಹೆಚ್ಚು ಸಂತೋಷಪಡುತ್ತೇನೆ. 80ರ ದಶಕದಲ್ಲಿ ನಡೆದದ್ದು ತಪ್ಪು ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. ನಾನು ಹಲವಾರು ಬಾರಿ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದೇನೆ. ಸಿಖ್ ಸಮುದಾಯದೊಂದಿಗೆ ನನಗೆ ಅತ್ಯಂತ ಉತ್ತಮ ಸಂಬಂಧವಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?
” ನೀವು 3000 ವರ್ಷಗಳ ಹಿಂದಕ್ಕೆ ಹೋಗಿ ನೋಡಿದರೆ ಕರ್ನಾಟಕದಲ್ಲಿ ಬಸವ, ಬುದ್ಧ, ಗುರುನಾನಕ್, ಕೇರಳದಲ್ಲಿ ನಾರಾಯಣ ಗುರು, ಫುಲೆ, ಮಹಾತ್ಮ ಗಾಂಧಿ, ಅಂಬೇಡ್ಕರ್ ಇವರೆಲ್ಲರೂ ಸಮಾನತೆಗಾಗಿ ಸಮಾಜ ಸುಧಾರಣೆಗಾಗಿ ಹೋರಟ ನಡೆಸಿದರು. ಇವರು ಧರ್ಮಾಂಧರಾಗಿರಲಿಲ್ಲ. ಇವರಲ್ಲಿ ಯಾರೂ ‘ನಾವು ಜನರನ್ನು ಕೊಲ್ಲಲು ಬಯಸುತ್ತೇವೆ, ಜನರನ್ನು ಪ್ರತ್ಯೇಕಿಸಲು ಬಯಸುತ್ತೇವೆ, ಜನರನ್ನು ಪುಡಿಮಾಡಲು ಬಯಸುತ್ತೇವೆ’ ಎಂದು ಹೇಳುತ್ತಿರಲಿಲ್ಲ. ನಮ್ಮ ಸಂವಿಧಾನದಲ್ಲಿರುವ ಈ ಎಲ್ಲ ಜನರು, ಅವರ ಧ್ವನಿಗಳು ಮೂಲಭೂತವಾಗಿ ಒಂದೇ ವಿಷಯವನ್ನು ಹೇಳುತ್ತಿವೆ. ಅದು ಎಲ್ಲರನ್ನೂ ಸತ್ಯ ಮತ್ತು ಅಹಿಂಸೆಗೆ ಒತ್ತು ನೀಡುತ್ತದೆ” ಎಂದು ರಾಹುಲ್ ಗಾಂಧಿ ಸಂವಾದದಲ್ಲಿ ತಿಳಿಸಿದ್ದಾರೆ.
ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಸಮುದಾಯದಲ್ಲಿ ಸತ್ಯ, ಅಹಿಂಸೆ, ಸಮಾನತೆಯ ವಿಚಾರಗಳ ಪರವಾಗಿ ನಿಂತ, ಆ ವಿಚಾರಗಳಿಗಾಗಿ ಬದುಕಿದ ಹಾಗೂ ಆ ವಿಚಾರಗಳಿಗಾಗಿಯೇ ಪ್ರಾಣತೆತ್ತ ಅನೇಕ ಜನರಿದ್ದಾರೆ. ಅವರಲ್ಲಿ ಮಹಾತ್ಮ ಗಾಂಧಿ ಕೂಡ ಒಬ್ಬರು ಎಂದು ರಾಹುಲ್ ಗಾಂಧಿ ಹೇಳಿದರು.





