ಅಕ್ರಮ ವಲಸಿಗರ ವಿರುದ್ಧದ ಹೋರಾಟದ ನೆಪದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಕ್ರೌರ್ಯದ ಪರಮಾವಧಿಯನ್ನು ಪ್ರದರ್ಶಿಸಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ 5 ವರ್ಷದ ಪುಟ್ಟ ಬಾಲಕನನ್ನೂ ಬಿಡದೆ, ಆತನನ್ನು ‘ಗಾಳ’ವಾಗಿ ಬಳಸಿಕೊಂಡು ಕುಟುಂಬವನ್ನು ಬಂಧಿಸಲು ಯತ್ನಿಸಿದ ಅಮಾನವೀಯ ಘಟನೆ ಮಿನೆಸೋಟದಲ್ಲಿ ನಡೆದಿದೆ.
ಈಕ್ವೆಡಾರ್ ಮೂಲದ ಲಿಯಾಮ್ ಕೊನೆಜೊ ರಾಮೋಸ್ (5) ಎಂಬ ಬಾಲಕನೇ ಅಮೆರಿಕದ ಈ ದಬ್ಬಾಳಿಕೆಗೆ ತುತ್ತಾದವನು. ಈ ಘಟನೆ ಅಮೆರಿಕದ ವಲಸೆ ಮತ್ತು ಸುಂಕ ಜಾರಿ ಇಲಾಖೆಯ (ICE) ಅಮಾನವೀಯ ನಡೆಗೆ ಹಿಡಿದ ಕನ್ನಡಿಯಂತಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸ್ಪೈಡರ್‌ಮ್ಯಾನ್ ಬ್ಯಾಗ್, ಕಣ್ಣಲ್ಲಿ ಆತಂಕ
ಘಟನೆ ನಡೆದ ಮಂಗಳವಾರ, ಪುಟ್ಟ ಲಿಯಾಮ್ ತನ್ನ ಪ್ರಿಸ್ಕೂಲ್ ಮುಗಿಸಿ ತಂದೆಯೊಂದಿಗೆ ಮನೆಗೆ ಮರಳಿದ್ದ. ಆತ ಇನ್ನೂ ಬೆನ್ನಿಗೆ ತನ್ನ ನೆಚ್ಚಿನ ಸ್ಪೈಡರ್‌ಮ್ಯಾನ್ ಬ್ಯಾಗ್ ಮತ್ತು ತಲೆಗೊಂದು ನೀಲಿ ಟೋಪಿ ಧರಿಸಿದ್ದ. ಆಗಲೇ ಅಲ್ಲಿ ಹೊಂಚುಹಾಕಿ ಕುಳಿತಿದ್ದ ಶಸ್ತ್ರಸಜ್ಜಿತ ಫೆಡರಲ್ ಏಜೆಂಟರು, ಮಗುವಿನ ಎದುರೇ ಆತನ ತಂದೆಯನ್ನು ಮನೆಯ ಮುಂಭಾಗದಲ್ಲಿ ಸುತ್ತುವರೆದು ದಸ್ತಗಿರಿ ಮಾಡಿದರು. ತಂದೆಯನ್ನು ಎಳೆದೊಯ್ಯುವುದನ್ನು ಕಂಡು ಆ ಪುಟ್ಟ ಜೀವ ಬೆದರಿಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಆಡಳಿತವೇ?
ಈ ಕಾರ್ಯಾಚರಣೆಯ ಅತ್ಯಂತ ಹೇಯ ಸಂಗತಿಯೆಂದರೆ, ಮನೆಯೊಳಗೆ ಇದ್ದ ಬಾಲಕನ ತಾಯಿಯನ್ನು ಹೊರಗೆ ಕರೆತರಲು ಐಸ್ (ICE) ಏಜೆಂಟರು ಈ ಮಗುವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡರು. ಮಗುವನ್ನು ಮುಂದಿಟ್ಟುಕೊಂಡು ತಾಯಿಯನ್ನು ಹೊರಬರುವಂತೆ ಪ್ರೇರೇಪಿಸಿದರು. ಆದರೆ, ಅಪಾಯವನ್ನರಿತ ಪತಿ, ಪತ್ನಿಗೆ ಮನೆಯಿಂದ ಹೊರಬಾರದಂತೆ ಕೂಗಿ ಹೇಳಿದರು. ಕೊನೆಗೆ ತಾಯಿಯನ್ನು ಹೊರತರಲಾಗದೆ, ಅಧಿಕಾರಿಗಳು 5 ವರ್ಷದ ಮಗು ಮತ್ತು ತಂದೆಯನ್ನು ಬಂಧಿಸಿ ಟೆಕ್ಸಾಸ್‌ನ ಡಿಲ್ಲಿಯಲ್ಲಿರುವ ಕೌಟುಂಬಿಕ ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ನೆರೆಹೊರೆಯವರ ಗೋಗರೆತಕ್ಕೂ ಜಗ್ಗದ ಅಧಿಕಾರಿಗಳು
ಮಗುವನ್ನು ವಶಕ್ಕೆ ಪಡೆಯುವಾಗ ಸ್ಥಳದಲ್ಲಿದ್ದ ಶಾಲಾ ಅಧಿಕಾರಿಗಳು, ರಾಮೋಸ್ ಕುಟುಂಬದ ಪರಿಚಯಸ್ಥರು ಮತ್ತು ನೆರೆಹೊರೆಯವರು, “ದಯವಿಟ್ಟು ಮಗುವನ್ನು ನಮ್ಮ ಸುಪರ್ದಿಗೆ ಕೊಡಿ, ನಾವು ನೋಡಿಕೊಳ್ಳುತ್ತೇವೆ” ಎಂದು ಅಂಗಲಾಚಿದರು. ಆದರೆ, ಕಠೋರ ಮನಸ್ಥಿತಿಯ ಐಸ್ ಅಧಿಕಾರಿಗಳು ಇದಕ್ಕೆ ಒಪ್ಪದೆ ಮಗುವನ್ನೂ ಎಳೆದೊಯ್ದರು.
ಕಾನೂನುಬದ್ಧವಾಗಿದ್ದರೂ ಬಂಧನ
ಅಮೆರಿಕದ ಕಾನೂನು ವ್ಯವಸ್ಥೆಯ ವಿಪರ್ಯಾಸವೆಂದರೆ, ವಕೀಲ ಮಾರ್ಕ್ ಪ್ರೊಕೊಶ್ ಅವರ ಪ್ರಕಾರ, ಲಿಯಾಮ್ ಮತ್ತು ಆತನ ತಂದೆ ಅಮೆರಿಕದಲ್ಲಿ ಕಾನೂನುಬದ್ಧವಾಗಿಯೇ ಆಶ್ರಯ ಕೋರಿ ಅರ್ಜಿ ಸಲ್ಲಿಸಿದವರು (Asylum applicants). ಆದರೂ ಅವರನ್ನು ಹೀಗೆ ನಡೆಸಿಕೊಳ್ಳಲಾಗಿದೆ.
‘ಅವನಿನ್ನೂ ಹಸುಗೂಸು’: ಕಮಲಾ ಹ್ಯಾರಿಸ್ ಕಿಡಿ
“ಅಧಿಕಾರಿಗಳು ಐದು ವರ್ಷದ ಮಗುವನ್ನು ಹಿಂಸಾತ್ಮಕ ಅಪರಾಧಿಯಂತೆ ನಡೆಸಿಕೊಂಡಿದ್ದಾರೆ. ಇದೊಂದು ಕ್ರೂರ ನಡೆ,” ಎಂದು ಶಾಲಾ ಜಿಲ್ಲಾ ಸೂಪರಿಂಟೆಂಡೆಂಟ್ ಜೆನಾ ಸ್ಟೆನ್ವಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲಾ ಹ್ಯಾರಿಸ್, “ಆತ ಕೇವಲ ಒಂದು ಹಸುಗೂಸು” ಎಂದು ಹೇಳುವ ಮೂಲಕ ಟ್ರಂಪ್ ಆಡಳಿತದ ಅಮಾನವೀಯ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ರಮ ವಲಸೆ ತಡೆಯುವ ಹೆಸರಲ್ಲಿ ಅಮೆರಿಕದ ಆಡಳಿತವು ಮಾನವ ಹಕ್ಕುಗಳನ್ನು ಗಾಳಿಗೆ ತೂರಿ, ಎಳೆಯ ಮಕ್ಕಳ ಮೇಲೂ ಪ್ರಹಾರ ನಡೆಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಅಮೆರಿಕದ ವರ್ಚಸ್ಸಿಗೆ ಮಸಿ ಬಳಿದಂತಾಗಿದೆ.





