ವಿಶ್ವ ಆರ್ಥಿಕ ವೇದಿಕೆ ಅಂದರೆ ಲೋಕದ ಶಕ್ತಿಶಾಲಿ ನಾಯಕರು ಒಂದೇ ಕಡೆ ಕೂತು, ಹಣ, ರಾಜಕೀಯ, ವ್ಯಾಪಾರ, ತಂತ್ರಜ್ಞಾನ, ಹವಾಮಾನ, ಯುದ್ಧ – ಶಾಂತಿ ಇವನ್ನೆಲ್ಲಾ ಕುರಿತು ಚರ್ಚೆ ಮಾಡುವ ಒಂದು ದೊಡ್ಡ ವೇದಿಕೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕಾನೂನು ಅಲ್ಲ ಒಪ್ಪಂದಗಳೂ ಅಲ್ಲ. ಆದರೆ ಇಲ್ಲಿ ಕುಳಿತಿರುವವರು ದೇಶದ ನೀತಿ ತೀರ್ಮಾನಿಸುವವರು, ದೊಡ್ಡ ಬಂಡವಾಳ ಹೂಡುವವರು ಆದರಿಂದ ದಾವೋಸ್‌ನಲ್ಲಿ ನಡೆಯುವ ಮಾತುಕತೆಗಳು ಮುಂದೆ ಸರ್ಕಾರದ ನೀತಿಗಳಾಗಿ ಬದಲಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
2026ರ ಜನವರಿ 19-23ರವರೆಗೆ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಸಭೆಯಲ್ಲಿ ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳ ರಾಜಕೀಯ ನಾಯಕರು, ವಿವಿಧ ಸರ್ಕಾರಗಳು, ಅಂತರರಾಷ್ಟ್ರೀಯ ಸಂಘಟನೆಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.
ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಸುಮಾರು 55 ವರ್ಷಗಳ ಹಿಂದೆ ಆರಂಭವಾದ ವಿಶ್ವ ಆರ್ಥಿಕ ವೇದಿಕೆ (WEF)ಯು ಪ್ರತಿವರ್ಷ ದಾವೋಸ್ ನಲ್ಲಿ ಕಾರ್ಯಕ್ರಮ ನಡೆಸುತ್ತದೆ. ಜಗತ್ತಿನ ಉದ್ಯಮಿಗಳು, ರಾಜಕೀಯ ನಾಯಕರು, ಅರ್ಥಶಾಸ್ತ್ರಜ್ಞರು, ಹೂಡಿಕೆದಾರರನ್ನು ಒಂದು ಸೂರಿನಡಿ ಒಟ್ಟುಗೂಡಿಸುವ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಮಹತ್ವದ ವಿಷಯಗಳನ್ನು ಚರ್ಚಿಸುತ್ತದೆ
WEF ನಲ್ಲಿ ಕೇವಲ ಆರ್ಥಿಕತೆಗೆ ಮಾತ್ರವಲ್ಲ, ಜಾಗತಿಕ ಸಮಸ್ಯೆಗಳಾದ ಹವಾಮಾನ ಬದಲಾವಣೆ, AI, ಸೈಬರ್ ಭದ್ರತೆ, ಅಸಮಾನತೆ, ಯುದ್ಧ-ಶಾಂತಿ ಇತ್ಯಾದಿಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ, ಭಾರತದ ಪ್ರಧಾನಿ, ಚೀನಾದ ನಾಯಕರು ಸೇರಿದಂತೆ ಗೂಗಲ್, ಆಪಲ್, ಮೈಕ್ರೋಸಾಫ್ಟ್ ತರದ ದೊಡ್ಡ ದೊಡ್ಡ ಕಂಪನಿಗಳು ಭಾಗವಹಿಸುತ್ತವೆ.
ವಿಶ್ವ ಆರ್ಥಿಕ ವೇದಿಕೆಯು ಸಾರ್ವಜನಿಕ-ಖಾಸಗಿ ಸಹಯೋಗ (Public-Private Cooperation) ಮೂಲಕ ವಿಶ್ವದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಲಾಭಾಪೇಕ್ಷೆ ಇಲ್ಲದ (non-profit) ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ವಿಶ್ವ ಆರ್ಥಿಕ ವೇದಿಕೆಗೆ ಟೀಕೆಗಳೂ ಇವೆ. “ಇದು ಶ್ರೀಮಂತರ ಕ್ಲಬ್” “ಸಾಮಾನ್ಯ ಜನರ ಧ್ವನಿ ಇಲ್ಲ” “ಕಾರ್ಪೊರೇಟ್‌ಗಳಿಗೆ ಹೆಚ್ಚು ಒಲವು” “ಜನತಂತ್ರಕ್ಕಿಂತ ಹಣಕ್ಕೆ ಆದ್ಯತೆ” ಅಂತ. ಅಂದರೆ, ಪ್ರಪಂಚದ ಭವಿಷ್ಯವನ್ನು ಕೆಲವೇ ಕೆಲವು ಬಂಡವಾಳಶಾಹಿಗಳು ನಿರ್ಧರಿಸುತ್ತಿದ್ದಾರೆ ಅನ್ನುವ ಆರೋಪವೂ ಇದೆ.
ಈ ವರ್ಷ ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ನಡೆದ ಸಭೆಯ ಥೀಮ್ “A Spirit of Dialogue” ಎಂಬುದಾಗಿತ್ತು. ಮುಖ್ಯವಾಗಿ ಐದು ಪ್ರಮುಖ ಸವಾಲುಗಳನ್ನು ರೂಪಿಸಲಾಗಿತ್ತು. ಅವುಗಳೆಂದರೆ, 1. ಭೌಗೋಳಿಕ ಸಂಕಷ್ಟಗಳು ಹಾಗೂ ಅಂತಾರಾಷ್ಟ್ರೀಯ ರಾಜಕೀಯ, 2. ಆರ್ಥಿಕ ಬೆಳವಣಿಗೆ, 3. ಶಿಕ್ಷಣ ಜೊತೆ ಕೌಶಲ್ಯವನ್ನು ಕಲಿಸುವುದು, 4. ತಂತ್ರಜ್ಞಾನದ ಕಲಿಕೆ (AI, ಕ್ವಾಂಟಮ್ ಕಂಪ್ಯೂಟಿಂಗ್, ಬಯೋಟೆಕ್, ಎನರ್ಜಿ ಸಿಸ್ಟಮ್‌ಗಳು), 5. ಹವಾಮಾನ ಬದಲಾವಣೆ, ಇಂಧನ ಪರಿವರ್ತನೆ, ಭದ್ರತೆ, ಅಸಮಾನತೆ ಇತ್ಯಾದಿ.
ಪ್ರಮುಖವಾಗಿ ಭಾಗವಹಿಸಿದವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂಡೋನೇಶಿಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೇರಿದಂತೆ ಅನೇಕ ದೇಶಗಳ ಅಧ್ಯಕ್ಷರುಗಳು ಹಾಗೂ ಭಾರತದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಶ್ವಿನಿ ವೈಷ್ಣವ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಭಾರತದ ಭಾಗವಹಿಸುವಿಕೆ
ಭಾರತವು ಪ್ರತಿವರ್ಷಕ್ಕಿಂತ ಈ ವರ್ಷ ಅನೇಕ ನಾಯಕರುಗಳನ್ನು ಕಳುಹಿಸಿತ್ತು. ಕೇಂದ್ರದ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ, 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು ಭಾಗವಹಿಸಿದ್ದರು. ಇವರುಗಳು ಸಾವಿರಾರು ಕಿ.ಮೀ ದೂರದ ದಾವೋಸ್ ನಲ್ಲಿ ಕುಳಿತು ಭಾರತದ ನೀತಿ ನಿರೂಪಣೆಯ ಬಗ್ಗೆ ಚರ್ಚಿಸಿದ್ದಾರೆ. ಭಾರತದ ಅನೇಕ ನಾಯಕರುಗಳು ದಾವೋಸ್ ನಲ್ಲಿ ಕೂತು ಭಾರತದ್ದೆ ಕಂಪನಿಗಳ ಜೊತೆ ಹೂಡಿಕೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.
ಐದು ದಿನದ ಸಭೆಯಲ್ಲಿ “ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದೇ?” ಎಂಬ ಮುಖ್ಯವಾದ ಚರ್ಚೆಯನ್ನು ಏರ್ಪಡಿಸಲಾಗಿತ್ತು. ಈ ಚರ್ಚೆಯಲ್ಲಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಭಾರ್ತಿ ಎಂಟರ್‌ಪ್ರೈಸಸ್ ಸಿಇಒ ಸುನಿಲ್ ಭಾರ್ತಿ ಮಿತ್ತಲ್ ಹಾಗೂ ಹಾರ್ವರ್ಡ್ ಪ್ರಾಧ್ಯಾಪಕಿ, ಮಾಜಿ IMF ಅಧಿಕಾರಿ ಗೀತಾ ಗೋಪಿನಾಥ್ ಭಾಗವಹಿಸಿದ್ದರು. ಅದೇ ರೀತಿಯಲ್ಲಿ AI, ತಂತ್ರಜ್ಞಾನ ಮತ್ತು ನಾವೀನ್ಯತೆ ಎಂಬ ಚರ್ಚೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೊತೆಗೆ ಮೈಕ್ರೋಸಾಪ್ಟ್ ಸಿಇಒ ಬ್ರಾಡ್ ಸ್ಮಿತ್ ಭಾಗವಹಿಸಿದ್ದರು.
ಬಹಳ ಮುಖ್ಯವಾಗಿ ಕ್ಲೀನ್ ಎನರ್ಜಿ, ರಿನ್ಯೂವಬಲ್ ಮತ್ತು ಎನರ್ಜಿ ಟ್ರಾನ್ಸಿಷನ್ ಎಂಬ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದೀರ್ಘಕಾಲೀನ ಹೂಡಿಕೆ ಮಾಡಲು ಭಾರತಕ್ಕೆ ಯಾರಾದರೂ ಬರಬಹುದು ಎಂದು ಆಹ್ವಾನಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರು 1 ಲಕ್ಷ ಕೋಟಿಯ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೂಡಿಕೆ ಬರಬೇಕು. ಉದ್ಯೋಗ ಸೃಷ್ಟಿಯಾಗಬೇಕು ಹಾಗಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ತೆಲಂಗಾಣ ಸರ್ಕಾರವು ಡೇಟಾ ಸೆಂಟರ್, ಎಐ, ಕ್ಲೀನ್ ಎನರ್ಜಿ ಸೇರಿದಂತೆ ಅನೇಕ ಯೋಜನೆಗಳಿಗೆ ಸರಿಸುಮಾರು 29,000 ಕೋಟಿಯಷ್ಟು ಹೂಡಿಕೆ ಒಪ್ಪಂದಕ್ಕೆ ಸಹಿ ಮಾಡಿದೆ. ಅದೇ ರೀತಿ ಮಹಾರಾಷ್ಟ್ರ ಸರ್ಕಾರವು 30 ಲಕ್ಷ ಕೋಟಿಯಷ್ಟು ಹೂಡಿಕೆಗೆ ಸಹಿ ಮಾಡಿದೆ. ಉತ್ತರ ಪ್ರದೇಶ ಸರ್ಕಾರವು ಎಸ್ಸಾರ್ ಗ್ರೂಪ್ ಜೊತೆಗೆ 25,000 ಕೋಟಿ ಹೂಡಿಕೆಗೆ ಸಹಿ ಮಾಡಿದೆ. ಹಾಗೆಯೇ ಜಾಗತಿಕ ಮಟ್ಟದಲ್ಲಿರುವ ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಬರಬೇಕು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದಾವೋಸ್ ನಲ್ಲಿ ಭಾಗವಹಿಸಿ ಹೇಳಿದ್ದಾರೆ.
ವಿದೇಶಿ ಬಂಡವಾಳ, ಉದ್ಯೋಗ ಸೃಷ್ಟಿ, ಎಐ ಕ್ಷೇತ್ರದಲ್ಲಿ ಅಭಿವೃದ್ಧಿ, ಡೇಟಾ ಸೆಂಟರ್, ಸೆಮಿ-ಕಂಡಕ್ಟರ್, ನವೀಕರಿಸಬಹುದಾದ ಶಕ್ತಿ ಯೋಜನೆಗಳು, ಕೌಶಲ್ಯ ಸೇರಿದಂತೆ ಅನೇಕ ವಿಚಾರಗಳ ಕುರಿತು ಭಾರತ ಚರ್ಚಿಸುವುದರ ಜೊತೆಗೆ, ಬಂಡವಾಳ ಹೂಡಿಕೆಗೂ ಆಹ್ವಾನಿಸಿದೆ.
ಒಟ್ಟಾರೆಯಾಗಿ ದಾವೋಸ್‌ನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕಾನೂನು ಅಲ್ಲ. ಆದರೆ, ಅಲ್ಲಿಂದ ಹುಟ್ಟುವ ಆಲೋಚನೆಗಳು ನಾಳೆ ನಮ್ಮ ನಿಮ್ಮೆಲ್ಲರ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನ ಅಲ್ಲಗಳೆಯೋ ಹಾಗಿಲ್ಲ. ಅದಕ್ಕೇ ದಾವೋಸ್‌ನಲ್ಲಿ ಏನು ನಡೆಯುತ್ತೆ ಅನ್ನೋದನ್ನ ಗಮನಿಸುವುದು ಮುಖ್ಯ.





