ಭೂತಾನ್ ಮತ್ತು ಭಾರತದ ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕ ನಿರ್ಮಿಸುವ ಯೋಜನೆಯನ್ನು ಉಭಯ ರಾಷ್ಟ್ರಗಳು ಘೋಷಿಸಿವೆ. 4,000 ಕೋಟಿ ರೂ. ವೆಚ್ಚದಲ್ಲಿ ಎರಡು ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತದೆ ಎಂದು ಭಾರತ ಹೇಳಿಕೊಂಡಿದೆ.
ಭೂತಾನ್ ಜೊತೆಗಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧವನ್ನು ಹೆಚ್ಚಿಸುವ ಉದ್ದೇಶದಿಂದ ರೈಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಭೂತಾನ್‌ನ ಗೆಲೆಫು ಮತ್ತು ಸಮತ್ಸೆ ನಗರಗಳಿಗೆ ಅಸ್ಸಾಂನ ಕೊಕ್ರಝಾರ್ ಮತ್ತು ಪಶ್ಚಿಮ ಬಂಗಾಳದ ಬನಾರ್ಹತ್ ನಗರಗಳಿಂದ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಬನಾರ್ಹತ್ ಮತ್ತು ಸಮತ್ಸೆ ಹಾಗೂ ಕೊಕ್ರಜಾರ್ ಮತ್ತು ಗೆಲೆಫು ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕಗಳನ್ನು ಸ್ಥಾಪಿಸಲು ಎರಡೂ ಸರ್ಕಾರಗಳು ಒಪ್ಪಿಕೊಂಡಿವೆ. ಎರಡು ಯೋಜನೆಗಳ ಅಡಿಯಲ್ಲಿ ಒಟ್ಟು 89 ಕಿಮೀ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
“ಭಾರತ ಮತ್ತು ಭೂತಾನ್ ಅತ್ಯುತ್ತಮ ನಂಬಿಕೆ, ಪರಸ್ಪರ ಗೌರವ ಹಾಗೂ ತಿಳುವಳಿಕೆ ಸಂಬಂಧಗಳನ್ನು ಹಂಚಿಕೊಂಡಿವೆ. ಇದು ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳು, ಜನರ ನಡುವಿನ ಸಂಬಂಧಗಳು ಹಾಗೂ ನಮ್ಮ ಅಭಿವೃದ್ಧಿ ಮತ್ತು ಭದ್ರತಾ ಹಿತಾಸಕ್ತಿಗಳಲ್ಲಿ ಬೇರೂರಿರುವ ಸಂಬಂಧವಾಗಿದೆ” ಎಂದು ಮಿಶ್ರಿ ಹೇಳಿದ್ದಾರೆ.
ಭೂತಾನಿನ ಮೇಲೆ ತನ್ನ ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸಲು ಚೀನಾ ನಿರಂತರ ಪ್ರಯತ್ನ ಮಾಡುತ್ತಿದೆ. ಇದೇ ಸಮಯದಲ್ಲಿ ಭಾರತವು ರೈಲು ಯೋಜನೆಗಳನ್ನು ಘೋಷಿಸಿದೆ.
ಈ ಲೇಖನ ಓದಿದ್ದೀರಾ?: ಬೌದ್ಧರು, ಮುಸ್ಲಿಮರನ್ನು ಒಂದು ಮಾಡಿದೆ ಅಸ್ಮಿತೆಯ ಹೋರಾಟ: ಬಿಜೆಪಿ ಕುತಂತ್ರಕ್ಕಿಲ್ಲ ಆಸ್ಪದ
ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ರೈಲು ಸಂಪರ್ಕಗಳನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕೊಕ್ರಜಾರ್ ಮತ್ತು ಬನಾರ್ಹತ್‌ನಲ್ಲಿರುವ ಭಾರತೀಯ ರೈಲ್ವೇ ನಿಲ್ದಾಣಗಳಿಂದ ಭೂತಾನ್‌ಗೆ ರೈಲು ಸಂಪರ್ಕ ದೊರೆಯಲಿದೆ. ಈ ಮಾರ್ಗಗಳಿಗಾಗಿ ಸುಮಾರು 4,033 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.
ಕೊಕ್ರಝಾರ್ ಮತ್ತು ಗೆಲೆಫು ನಡುವಿನ 71.39 ಕಿ.ಮೀ ರೈಲು ಮಾರ್ಗದಲ್ಲಿ 69 ಕಿಮೀ ಉದ್ದದ ರೈಲು ಮಾರ್ಗವನ್ನು ಭಾರತವು 3,456 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿದೆ. ಉಳಿದ 2.39 ಕಿ.ಮೀ ಮಾರ್ಗವನ್ನು ನೇಪಾಳ ನಿರ್ಮಿಸುತ್ತದೆ. ಮಾರ್ಗವು ಆರು ನಿಲ್ದಾಣಗಳು ಇರುತ್ತವೆ. ಎರಡು ವಯಾಡಕ್ಟ್‌ಗಳು, 29 ಪ್ರಮುಖ ಸೇತುವೆಗಳು, 65 ಸಣ್ಣ ಸೇತುವೆಗಳು, ಎರಡು ಗುಡ್‌ಶೆಡ್‌ಗಳು, ಒಂದು ರಸ್ತೆ-ಮೇಲ್ಸೇತುವೆ (ROB) ಮತ್ತು 39 ರಸ್ತೆ-ಕೆಳ ಸೇತುವೆಗಳನ್ನು (RUBs) ರೈಲು ಮಾರ್ಗವು ಒಳಗೊಂಡಿರುತ್ತದೆ. ಅನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಬನಾರ್ಹತ್‌ನಿಂದ ಸಮತ್ಸೆ ನಡುವಿನ ಎರಡನೇ ಮಾರ್ಗವು 20 ಕಿ.ಮೀ ಉದ್ದವಿದ್ದು, ನಡುವೆ ಎರಡು ರೈಲು ನಿಲ್ದಾಣಗಳು ಇರುತ್ತವೆ. ಈ ಮಾರ್ಗವು 577 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷಗಳ ಪೂರ್ಣಗೊಳ್ಳುವ ಗುರಿ ಇದೆ ಎಂದು ವೈಷ್ಣವ್ ವಿವರಿಸಿದ್ದಾರೆ.




