ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಸ್ಪರ ಕೈ ಕುಲುಕಿದ್ದಾರೆ. ಅವರ ಈ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಅನೇಕ ತಜ್ಞರ, ‘ಭಾರತವನ್ನು ತನ್ನ ರಾಜತಾಂತ್ರಿಕ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಅಮೆರಿಕ ಎಡವಿದೆ’ ಎಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಿದೆ.
ಅಲಿಪ್ತ ನೀತಿ ಅನುಸರಿಸುತ್ತಿರುವ ಭಾರತವನ್ನು ಅಮೆರಿಕವು ತನ್ನ ಸನಿಹದಲ್ಲಿ ಇಟ್ಟುಕೊಂಡು, ಚೀನಾ ಮತ್ತು ರಷ್ಯಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತವನ್ನು ಮುಂದಿಟ್ಟುಕೊಳ್ಳಲು ನಿರಂತರವಾಗಿ ಪ್ರಯತ್ನಿಸಿದೆ. ಭಾರತದೊಂದಿಗೆ ಸಾಕಷ್ಟು ದ್ವಿಪಕ್ಷೀಯ ಒಪ್ಪಂದಗಳು, ಜಂಟಿ ಯೋಜನೆಗಳನ್ನು ರೂಪಿಸಿವೆ. ಆದರೆ, ಟ್ರಂಪ್ ಅವರ ಏಕಪಕ್ಷೀಯ ಧೋರಣೆಯು ಭಾರತವನ್ನು ಅಮೆರಿಕದಿಂದ ದೂರ ಮಾಡುತ್ತಿದೆ ಎಂಬ ಅಭಿಪ್ರಾಯ ಬಲಗೊಳ್ಳುತ್ತಿವೆ.
ಈ ನಡುವೆ, ಚೀನಾದಲ್ಲಿರುವ ಪ್ರಧಾನಿ ಮೋದಿಯವರ ಚಿತ್ರಗಳು; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮ ಸರಣಿ ಕ್ರಮಗಳೊಂದಿಗೆ ಭಾರತವನ್ನು ದೂರ ಮಾಡಿಕೊಳ್ಳುತ್ತಿದ್ದಾರೆ. ಚೀನಾ, ರಷ್ಯಾ ವಿರುದ್ಧ ಭಾರತವನ್ನು ನಿಲ್ಲಿಸುವ ಗುರಿಯನ್ನು ಟ್ರಂಪ್ ಮಿತಿಗೊಳಿಸಿದ್ದಾರೆ ಎಂಬಂತೆ ತೋರುತ್ತಿವೆ. ಇವುಗಳಲ್ಲಿ ಭಾರತೀಯ ಸರಕುಗಳ ಮೇಲೆ 50% ಸುಂಕ ಹೇರಿಕೆ, ರಷ್ಯಾ ತೈಲ ಖರೀದಿಯನ್ನು ಅವಕಾಶವಾದಿ ಖರೀದಿ ಎಂಬ ಸಾರ್ವಜನಿಕ ಟೀಕೆಗಳು ಅದನ್ನು ಸಾಬೀತು ಮಾಡಿವೆ.
ಒಂದೆಡೆ, ಭಾರತದ ರಾಜತಾಂತ್ರಿಕ ಎದುರಾಳಿ ಪಾಕಿಸ್ತಾನವನ್ನು ಟ್ರಂಪ್ ಗೌರವಿಸಿದ್ದಾರೆ. ಭಾರತ-ಪಾಕ್ ನಡುವಿನ ಸಂಘರ್ಷವನ್ನು ಪರಿಹರಿಸಿದ್ದು ತಾವೇ ಎಂದು ಟ್ರಂಪ್ ಹೇಳಿಕೊಂಡಿದ್ದು, ಭಾರತದ ಅಸಹನೆಗೆ ಕಾರಣವಾಗಿದೆ. ಮತ್ತೊಂದೆಡೆ, ಭಾರತೀಯ ಅಧಿಕಾರಿಗಳು ಅಮೆರಿಕದ ವ್ಯಾಪಾರ-ಒಪ್ಪಂದ ಪ್ರಸ್ತಾಪಗಳನ್ನು ತಿರಸ್ಕರಿದ್ದಾರೆ.
ಇದೇ ಸಮಯದಲ್ಲಿ, ಅಮೆರಿಕದ ಎದುರಾಳಿಗಳಾದ ಚೀನಾ, ರಷ್ಯಾ ಹಾಗೂ ಉತ್ತರ ಕೊರಿಯಾಗಳು ಪರಸ್ಪರ ತಮ್ಮ ಸಂಬಂಧಗಳನ್ನು ಬಿಗಿಗೊಳಿಸಿವೆ. ಭಾರತದೊಂದಿಗೂ ಹತ್ತಿರವಾಗುತ್ತಿವೆ. ಇಂತಹ ಸಂದರ್ಭದಲ್ಲಿ, ಭಾರತದ ಜೊತೆ ಟ್ರಂಪ್ ತಮ್ಮ ಸಂಬಂಧಗಳನ್ನು ಮರುಸ್ಥಾಪಿಸಲು ಬಯಸುತ್ತಿದ್ದರೂ, ಟ್ರಂಪ್ ಧೋರಣೆಯಿಂದ ಅಮೆರಿಕ-ಭಾರತ ಸಂಬಂಧ ಹದಗೆಡುತ್ತಿದೆ. ಟ್ರಂಪ್ ಅವರ ಮಾತಿಗೆ ಮರು ಮಾತನಾಡದೇ ಮೌನವಾಗಿರುತ್ತಿದ್ದ, ಟ್ರಂಪ್ ಧೋರಣೆಗಳನ್ನು ಒಪ್ಪಿಕೊಂಡು, ಸಹಿಸಿಕೊಳ್ಳುತ್ತಿದ್ದ ಮೋದಿ ಈಗ ಅಮೆರಿಕದ ಎದುರಾಳಿ ರಾಷ್ಟ್ರಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಬುಧವಾರ, ರಷ್ಯಾ, ಚೀನಾ ಹಾಗೂ ಭಾರತ- ಮೂರು ದೇಶಗಳ ನಾಯಕರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಜೊತೆಗಿನ ಭಾರತದ ಸಂಬಂಧವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಲು ಇಚ್ಛಿಸಿದೆ ಎಂಬುದನ್ನು ಸಾಂಕೇತಿಕವಾಗಿ ತೋರಿಸಿದ್ದಾರೆ.
”ಭಾರತ ಮತ್ತು ಅಮೆರಿಕದ ನಾಯಕರು ಸಂಬಂಧವನ್ನು ಸರಿಪಡಿಸಲು ಅಗತ್ಯವಾದ ವೈಯಕ್ತಿಕ ಸಂಪರ್ಕವನ್ನು ಮುಂದುವರಿಸಲು ಸಿದ್ಧರಿಲ್ಲ. ಈಗ ಸಮಸ್ಯೆ ಇರುವುದು ಭಾರತದ ವಿರುದ್ಧ ಟ್ರಂಪ್ ಹೇರುತ್ತಿರುವ ಸುಂಕ ಮತ್ತು ಇತ್ಯಾದಿ ಧೋರಣೆಗಳು. ಟ್ರಂಪ್ ಭವಿಷ್ಯದಲ್ಲಿ ತಮ್ಮ ನಿರ್ಧಾರ/ಧೋರಣೆಯನ್ನು ಬದಲಿಸಬಹುದು. ಆದರೆ, ಪ್ರಸ್ತುತ ಚೀನಾದೊಂದಿಗಿನ ವ್ಯಾಪಾರ ಒಪ್ಪಂದವು ಇತರ ಎಲ್ಲ ಭೌಗೋಳಿಕ ರಾಜಕೀಯ ಪರಿಗಣನೆಗಳನ್ನು ಮೀರಿಸುತ್ತದೆ” ಎಂದು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರ ಆಡಳಿತದಲ್ಲಿ ಸೇವೆ ಸಲ್ಲಿಸಿದ ಆಶ್ಲೇ ಟೆಲ್ಲಿಸ್ ಹೇಳಿದ್ದಾರೆ.
ಆದಾಗ್ಯೂ, ಚೀನಾ-ರಷ್ಯಾ ಜೊತೆ ಭಾರತ ಸಂಬಂಧ ಗಟ್ಟಿಗೊಳ್ಳುತ್ತಿರುವುದನ್ನು ಅಮೆರಿಕ ಟೀಕಿಸುತ್ತಿದೆ. ತನ್ನ ಧೋರಣೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ.
”ಟ್ರಂಪ್ ಅವರ ವಿದೇಶಾಂಗ ನೀತಿಗಳು ಅಮೆರಿಕಾದ ಜನರಿಗೆ ಉತ್ತಮ ಒಪ್ಪಂದಗಳನ್ನು ನೀಡಬೇಕೆಂಬ ಆಶಯವನ್ನು ಹೊಂದಿವೆ. ಟ್ರಂಪ್ ಅವರ ಅಸಾಧಾರಣ ಸಾಮರ್ಥ್ಯಕ್ಕೆ ಯಾವುದೂ ಸಾಟಿಯಿಲ್ಲ. ಭಾರತ-ಪಾಕ್ ಕದನ ವಿರಾಮದಲ್ಲೂ ಟ್ರಂಪ್ ಪಾತ್ರ ಬಹುಮುಖ್ಯವಾಗಿತ್ತು” ಎಂದು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಹೇಳಿದ್ದಾರೆ.
“ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಗೌರವಯುತ ಸಂಬಂಧ ಹೊಂದಿದ್ದಾರೆ. ಅಮೆರಿಕ ಮತ್ತು ಭಾರತ- ಎರಡೂ ರಾಷ್ಟ್ರಗಳು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ರಾಜತಾಂತ್ರಿಕ, ರಕ್ಷಣಾ ಹಾಗೂ ವಾಣಿಜ್ಯ ಆದ್ಯತೆಗಳ ಪೂರೈಕೆಗಾಗಿ ಪರಸ್ಪರ ಸಹಕಾರದಿಂದಿವೆ” ಎಂದು ಅವರು ಹೇಳಿಕೊಂಡಿದ್ದಾರೆ.
“ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುತ್ತೇವೆ. ಆದರೆ, ಇದನ್ನು ಭಾರತ ಅರ್ಥಮಾಡಿಕೊಳ್ಳಬೇಕು. ಹಲವು ವರ್ಷಗಳಿಂದ ಇದು ಏಕಪಕ್ಷೀಯ ಸಂಬಂಧವಾಗಿತ್ತು” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
”ಟ್ರಂಪ್ ಆಡಳಿತವು ಭಾರತದ ವಿಚಾರವಾಗಿ ರೂಪಿಸುತ್ತಿರುವ ನಿರೂಪಣೆ, ಟ್ರಂಪ್ ಅವರ ಸಲಹೆಗಾರರ ಇತ್ತೀಚಿನ ಹೇಳಿಕೆಗಳು ನ್ಯಾಯಸಮ್ಮತವಲ್ಲ. ಆದರೂ, ಅಮೆರಿಕ ಜೊತೆ ಭಾರತವು ಸಂಪರ್ಕ ಸಾಧಿಸುವುದನ್ನು ಮುಂದುವರೆಸಿದೆ” ಎಂದು ಹೆಸರು ಹೇಳಲಿಚ್ಛಿಸದ ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೀನಾ vs ಭಾರತ
ಭಾರತ ಮತ್ತು ಚೀನಾ ನಡುವೆ ದೀರ್ಘಕಾಲದ ಸಂಘರ್ಷವಿದೆ. ಅಲ್ಲದೆ, 2020ರಲ್ಲಿ ನಡೆದ ಗಲ್ವಾನ್ ಸಂಘರ್ಷವು ಉಭಯ ರಾಷ್ಟ್ರಗಳ ನಡುವಿನ ಉದ್ವಿಘ್ನತೆಯನ್ನು ಹೆಚ್ಚಿಸಿದೆ. ಜೊತೆಗೆ, ಭಾರತದ ಸುಮಾರು 3,000 ಚಕಿಮೀ ಭೂಮಿಯನ್ನು ಚೀನಾ ಅತಿಕ್ರಮಿಸಿಕೊಂಡಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ಹಳ್ಳಿಯನ್ನು ನಿರ್ಮಿಸಿದೆ ಎಂಬುದನ್ನು ಸ್ಯಾಟಲೈಟ್ ಚಿತ್ರಗಳು ತೋರಿಸುತ್ತಿವೆ. ಇದೀಗ, ಬ್ರಹ್ಮಪುತ್ರ ನದಿಗೆ ವಿಶ್ವದ ಬೃಹತ್ ಅಣೆಕಟ್ಟನ್ನೂ ಚೀನಾ ನಿರ್ಮಾಣ ಮಾಡುತ್ತಿದೆ. ಇದೆಲ್ಲವೂ ಭಾರತ-ಚೀನಾ ಸಂಬಂಧಕ್ಕೆ ತೊಡಕಾಗಿವೆ. ಆದರೂ, ಮೋದಿ ಅವರು ಚೀನಾಗೆ ಭೇಟಿ ನೀಡಿದ್ದು, ಗಡಿ ಸಂಘರ್ಷವು ತಿಳಿಗೊಳ್ಳಬಹುದೇ ಎಂಬ ನಿರೀಕ್ಷೆ ಇದೆ. ಆದರೆ, ಅದು ಸಾಧ್ಯವಾಗುವ ಸಾಧ್ಯತೆಗಳಿಲ್ಲ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಚೀನಾ, ಭಾರತ ಮತ್ತು ರಷ್ಯಾ– ಮೂರೂ ರಾಷ್ಟ್ರಗಳು ಬ್ರಿಕ್ಸ್‌ನ ಮೂಲ ಸದಸ್ಯ ರಾಷ್ಟ್ರಗಳಾಗಿವೆ. ಈ ಗುಂಪನ್ನು ‘ಅಮೆರಿಕನ್ ವಿರೋಧಿ’ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಭಾರತದಂತೆಯೇ ಬ್ರಿಕ್ಸ್‌ನ ಮತ್ತೊಂದು ಸದಸ್ಯ ರಾಷ್ಟ್ರ, ಅಮೆರಿಕದ ಪಾಲುದಾರ ರಾಷ್ಟ್ರ ಬ್ರೆಜಿಲ್ ಕೂಡ ಟ್ರಂಪ್ ಅವರ ಗುರಿಗೆ ತುತ್ತಾಗಿದೆ. ಬ್ರೆಜಿಲ್ ಮೇಲೂ ಟ್ರಂಪ್ ಭಾರೀ ಸುಂಕಗಳನ್ನು ಹೇರಿದ್ದಾರೆ.
ಚೀನಾದಲ್ಲಿ ರಾಷ್ಯಾ-ಭಾರತ-ಚೀನಾ ನಾಯಕರ ಒಗ್ಗಟ್ಟಿನ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ, “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿ ಮೋದಿ ಚೀನಾ ಸಖ್ಯ ಬಯಸುತ್ತಿರುವುದು, ವಿಶ್ವದ ಇಬ್ಬರು ದೊಡ್ಡ ಸರ್ವಾಧಿಕಾರಿಗಳಾದ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸ್ನೇಹ ಬೆಳೆಸುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.
ಕ್ವಾಡ್ ಭವಿಷ್ಯ
ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತದ ದೋಸ್ತಿಯನ್ನು ಹೆಚ್ಚಿಸಿದ್ದರು. 2019ರಲ್ಲಿ ಟೆಕ್ಸಾಸ್‌ಗೆ ಮೋದಿ ಅವರನ್ನು ಕರೆಸಿ, ‘ಹೌಡಿ ಮೋದಿ’ ಕಾರ್ಯಕ್ರಮ ನಡೆಸಿದರು. ಮೋದಿ ತಮ್ಮ ಬೆಸ್ಟ್ ಫ್ರೆಂಡ್ ಎಂದು ಟ್ರಂಪ್ ಘೋಷಿಸಿದರು. ಜೊತೆಗೆ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (ಕ್ವಾಡ್)ಗೆ ಮರುಜೀವ ತುಂಬಿದರು. ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ– ಕ್ವಾಡ್‌ನ ಸದಸ್ಯ ರಾಷ್ಟ್ರಗಳು.
ಆದರೆ, ಟ್ರಂಪ್ 2ನೇ ಬಾರಿಗೆ (2024ರ ನವೆಂಬರ್) ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಪ್ರಧಾನಿ ಮೋದಿ ಅವರು ಅಮೆರಿಕ ಜೊತೆಗಿನ ಸಂಬಂಧಗಳನ್ನು ತ್ವರಿತವಾಗಿ ಗಟ್ಟಿಗೊಳಿಸಲು ಯತ್ನಿಸಿದರು. ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅಭಿನಂದನಾ ಕರೆ ಮಾಡಿದರು. ಪ್ರಮಾಣವಚನ ಕಾರ್ಯಕ್ರಮಕ್ಕೆ ತಮ್ಮ ವಿದೇಶಾಂಗ ಸಚಿವರನ್ನು ಕಳಿಸಿದರು.
ಆದರೆ, ಟ್ರಂಪ್ ಅವರು ವ್ಯಾಪಾರ ಅಸಮತೋಲನ ಮತ್ತು ವಲಸೆ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ನೀಡಿದರು. ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ವಾಷಿಂಗ್ಟನ್‌ಗೆ ನೀಡಿದ ಭೇಟಿಯು ವ್ಯಾಪಾರ ಸಂಬಂಧದ ಮೇಲೆ ಕೇಂದ್ರೀಕರಿಸಿತ್ತು. ಆದರೆ, ಮೋದಿ ಅಮೆರಿಕದಲ್ಲಿ ಇರುವಾಗಲೇ, ಭಾರತೀಯ ಅಕ್ರಮ ವಲಸಿಗರನ್ನು ಟ್ರಂಪ್ ಭಾರತಕ್ಕೆ ಗಡಿಪಾರು ಮಾಡಿದರು. ಈ ಬಗ್ಗೆ, ಮೋದಿ ಚಕಾರ ಎತ್ತಲಿಲ್ಲ. ಬದಲಾಗಿ, ‘ಮಗ, ಮಿಗ, ಮೆಗ’ ಎಂದು ವ್ಯಾಪಾರ ಸಂಬಂಧ ಮತ್ತು ಅಭಿವೃದ್ಧಿ ಬಗ್ಗೆ ಭಾಷಣ ಮಾಡಿ ಬಂದರು.
ಈ ಲೇಖನ ಓದಿದ್ದೀರಾ?: ದುಷ್ಟ ಅಮೆರಿಕ ಪುಟ್ಟ ವೆನೆಜುವೆಲಾ ಮೇಲೆ ಬಿದ್ದಿರುವುದೇಕೆ?
ಆದಾಗ್ಯೂ, ಭಾರತವನ್ನು ‘ತೆರಿಗೆಗಳ ರಾಜ’ ಎಂದು ಟ್ರಂಪ್ ಹಲವು ಭಾರಿ ಟೀಕಿಸಿದ್ದಾರೆ. ಅಲ್ಲದೆ, ಏಪ್ರಿಲ್‌ನಲ್ಲಿ ಭಾರತದ ಮೇಲೆ 26% ಸುಂಕ ವಿಧಿಸಿದರು. ಅಲ್ಲದೆ, ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ 25% ಸುಂಕ ಮತ್ತು 25% ದಂಡ ಒಟ್ಟು 50% ತೆರಿಗೆ ಜಾರಿಗೊಳಿಸಿದರು.
ಈ ಎಲ್ಲ ಸಂದರ್ಭಗಳಲ್ಲಿಯೂ ಮೋದಿ ಮೌನವಾಗಿಯೇ ಇದ್ದರು. ಅಮೆರಿಕದ ಧೋರಣೆಯನ್ನು ಎಂದಿಗೂ ಖಂಡಿಸಿಲ್ಲ. ಈಗ, 50% ತೆರಿಗೆ ಹೇರಿದ ಮೇಲೂ ಮೋದಿ ಅಮೆರಿಕವನ್ನು ಖಂಡಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಚೀನಾಗೆ ತೆರಳಿದ್ದಾರೆ. ಚೀನಾ ದೋಸ್ತಿಗೆ ಮುಂದಾಗಿದ್ದಾರೆ. ಹಾಗೆಂದ ಮಾತ್ರಕ್ಕೆ, ಅಮೆರಿಕಗೆ ತಿರುಗೇಟು ನೀಡಿದರು, ಅಮೆರಿಕ ಸಂಬಂಧಕ್ಕೆ ಗುಡ್‌ಬೈ ಹೇಳಿಬಿಟ್ಟರು ಎಂದೆಲ್ಲ ಭಾವಿಸಲಾಗದು. ಯಾಕೆಂದರೆ, ಭಾರತವು ನವೆಂಬರ್‌ನಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸುವ ಸಾಧ್ಯತೆಗಳಿವೆ. ಆಗ, ಟ್ರಂಪ್ ಭಾರತ ಪ್ರವಾಸ ಬೆಳೆಸಬಹುದು ಎಂದು ನಿರೀಕ್ಷಿಸಲಾಗಿದೆ.




