ಇರಾನ್ ಮೇಲೆ ಇಸ್ರೇಲ್, ಅಮೆರಿಕ ಬಾಂಬ್ ದಾಳಿ ನಡೆಸಿದ್ದು ಸದ್ಯ ಉದ್ವಿಗ್ನತೆ ತೀವ್ರವಾಗಿದೆ. ಈ ಬೆನ್ನಲ್ಲೇ ಇರಾನ್ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ತುರ್ತು ಸಲಹೆಗಳನ್ನು ನೀಡಿದೆ. ತೀವ್ರ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.
ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಶನಿವಾರ ಭಾರತೀಯ ನಾಗರಿಕರು ತೀವ್ರ ಎಚ್ಚರವಾಗಿರಲು, ಹೊರಗಡೆ ಓಡಾಡದಂತೆ ಸಲಹೆ ನೀಡಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇದನ್ನು ಓದಿದ್ದೀರಾ? ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್: ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ಅಮೆರಿಕ ಬೆಂಬಲದೊಂದಿಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿ ವಿಶ್ವದಾದ್ಯಂತ ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ. ಸದ್ಯ ಇರಾನ್ ಮತ್ತು ಇಸ್ರೇಲ್ ಎರಡೂ ತಮ್ಮ ವಾಯುಪ್ರದೇಶಗಳನ್ನು ಮುಚ್ಚಿವೆ. ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವ ಭೀತಿಯ ನಡುವೆ ಇರಾಕ್ ಕೂಡ ವಿಮಾನಗಳನ್ನು ಸ್ಥಗಿತಗೊಳಿಸಿದೆ.
ಇನ್ನು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನಾಗರಿಕರಿಗೆ ಸ್ಥಳೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಲಹೆ ನೀಡಿದೆ. “”ಭಾರತೀಯ ಪ್ರಜೆಗಳು ಸುದ್ದಿ ಮತ್ತು ಅಧಿಕೃತ ಮಾಹಿತಿಗಳನ್ನು ಪಡೆಯುತ್ತಾ ಬೆಳವಣಿಗೆಗಳ ಬಗ್ಗೆ ನಿಗಾ ಇಡಬೇಕು. ಮತ್ತು ಭಾರತೀಯ ರಾಯಭಾರ ಕಚೇರಿಯಿಂದ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕಾಯಿರಿ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ತುರ್ತು ಸಂದರ್ಭಗಳಲ್ಲಿ ನಾಗರಿಕರಿಗೆ ಸಹಾಯ ಮಾಡಲು, ರಾಯಭಾರ ಕಚೇರಿಯು ಹಲವಾರು ಸಂಪರ್ಕ ಸಂಖ್ಯೆಗಳನ್ನು ಹಂಚಿಕೊಂಡಿದೆ: +989128109115, +989128109109, +989128109102 ಮತ್ತು +989932179359, ಅಗತ್ಯವಿದ್ದರೆ ಜನರು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಲು ತಿಳಿಸಿದೆ.
ಭಾರತೀಯರು ಇಸ್ರೇಲ್‌ನ ಅಧಿಕೃತ ತುರ್ತು ಪೋರ್ಟಲ್ ಮೂಲಕ ಮಾಹಿತಿ ಪಡೆಯಬಹುದು. “ಎಲ್ಲಾ ಭಾರತೀಯರು ಗೊತ್ತುಪಡಿಸಿದ ಆಶ್ರಯಗಳ ಸಮೀಪದಲ್ಲಿಯೇ ಇರಬೇಕು. ಅವರ ನಿವಾಸ ಅಥವಾ ಕೆಲಸದ ಪ್ರದೇಶದ ಸಮೀಪದ ಸುರಕ್ಷಿತ ಸ್ಥಳಗಳಲ್ಲಿ ಇರಿ” ಎಂದು ತಿಳಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ, ಇಸ್ರೇಲ್‌ನಲ್ಲಿರುವ ಭಾರತೀಯರು ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು +972-54-7520711 ಮೂಲಕ ಅಥವಾ cons1.telaviv@mea.gov.in ಇಮೇಲ್ ಮೂಲಕ ಸಂಪರ್ಕಿಸಬಹುದು.





