ವೆನೆಜುವೆಲಾ ಮೇಲೆ ಅಮೆರಿಕ ಆಕ್ರಮಣ ನಡೆಸಿದ್ದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಕುಟುಂಬವನ್ನು ಬಂಧಿಸಿದೆ. ವೆನೆಜುವೆಲಾ ಅಮೆರಿಕದ ಅಡಿಯಲ್ಲೇ ಇರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಕೂಡಾ ಮಾಡಿದ್ದಾರೆ. ಈ ಬೆಳವಣಿಗೆ ನಡುವೆ ಭಾರತ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, “ಮಾತುಕತೆ ನಡೆಸಿ ‘ಶಾಂತಿಯುತವಾಗಿ’ ಸಮಸ್ಯೆ ಪರಿಹರಿಸಿಕೊಳ್ಳಿ” ಎಂದು ಅಮೆರಿಕ, ವೆನೆಜುವೆಲಾಗೆ ಒತ್ತಾಯಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪತ್ರಿಕಾ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. “ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ತೀವ್ರ ಕಳವಳಕಾರಿಯಾಗಿದೆ. ಬದಲಾಗುತ್ತಿರುವ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ” ಎಂದು ಭಾರತ ಸರ್ಕಾರ ಹೇಳಿದೆ.
ಇದನ್ನು ಓದಿದ್ದೀರಾ? ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ನಾಗರಿಕರು ಸೇರಿ ಕನಿಷ್ಠ 40 ಮಂದಿ ಸಾವು
“ವೆನೆಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಬೆಂಬಲವನ್ನು ನಾವು ನೀಡುವುದಾಗಿ ಭಾರತ ಪುನರುಚ್ಚರಿಸುತ್ತದೆ. ಪ್ರದೇಶದ ಶಾಂತಿ ಮತ್ತು ಸ್ಥಿರತೆಗಾಗಿ ಮಾತುಕತೆ ನಡೆಸಿ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂಬಂಧಪಟ್ಟ ಎಲ್ಲರಿಗೂ ಕರೆ ನೀಡುತ್ತೇವೆ” ಎಂದು ಹೇಳಿದೆ.
“ಕ್ಯಾರಕಾಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದನ್ನು ನಾವು ಮುಂದುವರೆಸುತ್ತೇವೆ” ಎಂದು ತಿಳಿಸಿದೆ.
ಇತರೆ ದೇಶಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಬಂದಿರುವ ಅಮೆರಿಕ ಇದೀಗ ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ ಮೇಲೆ ಕಣ್ಣಿಟ್ಟಿದೆ. ವೆನೆಜುವೆಲಾ ಮೇಲೆ ದಾಳಿ ನಡೆಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಕುಟುಂಬವನ್ನು ಬಂಧಿಸಿದೆ.
“ವೆನೆಜುವೆಲಾದಲ್ಲಿ ಎಲ್ಲವೂ ಸರಿದಾರಿಗೆ ಬರುವವರಡಗೂ ಅಮೆರಿಕವೇ ವೆನೆಜುವೆಲಾವನ್ನು ನಡೆಸಲಿದೆ. ಅಲ್ಲಿನ ಬೃಹತ್ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳಲಿದೆ. ಅದಕ್ಕಾಗಿ ನಾವು ನಮ್ಮ ಜನರನ್ನು ನೇಮಿಸುತ್ತಿದ್ದೇವೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಈ ನಡುವೆಯೇ ವೆನೆಜುವೆಲಾದ ಸುಪ್ರೀಂ ಕೋರ್ಟ್ ಭಾನುವಾರ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಿದೆ.





