ಭಾರತದ ಅಕ್ಕಿ ಆಮದುಗಳ ಮೇಲೆ ಅಮೆರಿಕ ಹೊಸ ಸುಂಕಗಳನ್ನು ವಿಧಿಸುವ ಬಗ್ಗೆ ಮಂಗಳವಾರ ಅಧಿಕಾರಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದರು. ಭಾರತ ಸೇರಿದಂತೆ ಹಲವಾರು ದೇಶಗಳು ಅಕ್ಕಿಯನ್ನು ಮತ್ತು ಕೃಷಿ ಉತ್ಪನ್ನಗಳನ್ನು ತಂದು ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿವೆ ಎಂದು ಅಮೆರಿಕದ ರೈತರು ಆರೋಪಿಸಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಭಾರತವು ಬಾಸ್ಮತಿ, ಸೋನಾ ಮಸೂರಿ ಸೇರಿದಮತೆ ವಿವಿಧ ರೀತಿಯ ಅಕ್ಕಿಗಳನ್ನು ಅಮೆರಿಕ ಮಾರುಕಟ್ಟೆಗೆ ಸುರಿಯುತ್ತಿದೆ. ಇದರಿಂದ ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಆಮದು ನಿಯಂತ್ರಿಸಲು ಅಕ್ಕಿ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಟ್ರಂಪ್ ಹೇಳಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಸೋಮವಾರ ಶ್ವೇತಭವನದಲ್ಲಿ ಕೃಷಿ ಕ್ಷೇತ್ರದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ದೇಶಿಯ ಅಕ್ಕಿ ಉತ್ಪಾದಕರ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದ ಲೂಸಿಯಾನ ಮೂಲದ ಅಕ್ಕಿ ಗಿರಣಿ ಮಾಲೀಕ ಮೆರಿಲ್ ಕೆನಡಿ, ಇತರ ರಾಷ್ಟ್ರಗಳು ಅಮೆರಿಕದ ಮಾರುಕಟ್ಟೆ ಅಕ್ಕಿ ತಂದು ಸುರಿಯುವುದರಿಂದ ದೇಶದ ದಕ್ಷಿಣ ಭಾಗದಲ್ಲಿ ಅಕ್ಕಿ ಉತ್ಪಾದಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ಲೇಖನ ಓದಿದ್ದೀರಾ? : ಟ್ರಂಪ್‌ಗೆ ಫಿಫಾ ಶಾಂತಿ ಪ್ರಶಸ್ತಿ ಪ್ರದಾನ
ಈ ವೇಳೆ ಅಕ್ಕಿ ಸುರಿಯುತ್ತಿರುವವರು ಯಾರು? ಎಂದು ಟ್ರಂಪ್ ಕೇಳಿದಾಗ, ಕೆನಡಿ ಅವರು ಭಾರತ ಮತ್ತು ಥಾಯ್ಲೆಂಡ್ ಎಂದು ಹೇಳಿದರು. ಮುಂದುವರಿದು, ಚೀನಾ ಕೂಡ ಈ ಸಾಲಿನಲ್ಲಿದ್ದು, ಪೋರ್ಟೊ ರಿಕೊಗೆ ಅಕ್ಕಿ ರಫ್ತು ಮಾಡುತ್ತಿದೆ. ಪೋರ್ಟೊ ರಿಕೊ ಅಮೆರಿಕದ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿತ್ತು. ಕಳೆದ ಒಂದು ವರ್ಷದಿಂದ ನಾವು ಅಲ್ಲಿಗೆ ಅಕ್ಕಿ ರವಾನಿಸಿಲ್ಲ’ ಎಂದರು.
ಇದೇ ವೇಳೆ, ‘ಈ ದೇಶಗಳ ಸಬ್ಸಿಡಿ ನೀತಿಗಳು ಅಮೆರಿಕದ ರೈತರಿಗೆ ಸಂಕಷ್ಟಕ್ಕೆ ತಳ್ಳುತ್ತಿವೆ. ಇದರಿಂದ ದಕ್ಷಿಣ ಅಮೆರಿಕದಲ್ಲಿ ನಾವು ನಿಜವಾಗಿಯೂ ಕಷ್ಟಪಡಬೇಕಾದ ಸಂದರ್ಭ ಒದಗಿ ಬಂದಿದೆ. ನೀವು ವಿಧಿಸಿದ ಸುಂಕ ಅವರ ಮೇಲೆ ಸ್ವಲ್ಪ ಮಟ್ಟದ ಪರಿಣಾಮ ಬೀರಿದೆ. ಆದರೆ ನಾವು ಸುಂಕವನ್ನು ದ್ವಿಗುಣಗೊಳಿಸಬೇಕಾಗಿದೆ’ ಎಂದು ಕೆನಡಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್ ‘ಸುಂಕ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ’ ಎಂದಿದ್ದಾರೆ. ಈ ಸಂದರ್ಭದಲ್ಲಿ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರನ್ನು ಟ್ರಂಪ್ ವಿಚಾರಿಸಿ ‘ಅಕ್ಕಿ ತಂದು ಸುರಿಯಲು ಭಾರತಕ್ಕೆ ಅವಕಾಶವಿದೆಯೇ? ಅವರು ಸುಂಕ ಪಾವತಿಸುತ್ತಿದ್ದಾರೆಯೇ? ಅಕ್ಕಿ ರಫ್ತಿನ ಮೇಲೆ ಅವರಿಗೆ ವಿನಾಯಿತಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬೆಸೆಂಟ್ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಅದಕ್ಕೆ ಟ್ರಂಪ್ ‘ಇಂತಹ ದೇಶಗಳಿಗೆ ಸುಂಕ ವಿಧಿಸುವುದರಿಂದ ಈ ಸಮಸ್ಯೆ ತುಂಬ ಬೇಗ ಪರಿಹಾರಸಿಗುತ್ತದೆ. ಸುಂಕ ಕುರಿತ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ಅದರಲ್ಲಿ ನಾವು ಗೆದ್ದರೆ ನಿಮ್ಮ ಸಮಸ್ಯೆಯನ್ನು ಒಂದೇ ದಿನದಲ್ಲಿ ಪರಿಹರಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಬಾಸ್ಮತಿ ಅಕ್ಕಿಯ ಮಾರುಕಟ್ಟೆಗೆ ಅಮೆರಿಕವು ನಾಲ್ಕನೇ ದೊಡ್ಡ ಮಾರುಕಟ್ಟೆಯಾಗಿದೆ. 2024-25ನ ನೇ ಹಣಕಾಸು ವರ್ಷದಲ್ಲಿ 337 ಮಿಲಿಯನ್ ಡಾಲರ್ ಮೌಲ್ಯದ ಅಂದರೆ, 2,74,213 ಮೆಟ್ರಿಕ್ ಟನ್ ನಷ್ಟು ಬಾಸ್ಮತಿ ಅಕ್ಕಿಯನ್ನು ಭಾರತವು ಅಮೆರಿಕಕ್ಕೆ ರಫ್ತು ಮಾಡಿದೆ. ಇದೇ ವೇಳೆ ಭಾರತವು 54.64 ಮಿಲಿಯನ್ ಡಾಲರ್ ಮೌಲ್ಯದ ಅಂದರೆ, 61,342 ಬಾಸ್ಮತಿಯೇತರ(ಇತರ ಮಾದರಿಯ ಅಕ್ಕಿ) ಅಕ್ಕಿಯನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿದೆ. ಇದರಿಂದ ಅಮೆರಿಕವು ಭಾರತದ ಬಾಸ್ಮತಿಯೇತರ ಅಕ್ಕಿಗೆ 24ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಅಕ್ಕಿ ರಫ್ತುದಾರರ ಒಕ್ಕೂಟ ಹೇಳಿದೆ.
“ಅಮೆರಿಕ ಬಾಸ್ಮತಿ ಅಕ್ಕಿ ಬೆಳೆಯುವುದಿಲ್ಲ ಮತ್ತು ಭಾರತವು ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಪಾಕಿಸ್ತಾನ ನಂತರದ ಸ್ಥಾನದಲ್ಲಿದೆ. ಭಾರತವು ವಾರ್ಷಿಕವಾಗಿ 6 ಮಿಲಿಯನ್ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದರೆ, ಪಾಕಿಸ್ತಾನವು ಸುಮಾರು ಒಂದು ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ರಫ್ತು ಮಾಡುತ್ತದೆ. ಅಮೆರಿಕದ ಗ್ರಾಹಕರು ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಸೇವಿಸಲು ಬಯಸಿದರೆ, ಅಮೆರಿಕ ಎಷ್ಟೇ ಸುಂಕ ವಿಧಿಸಿದರೂ ಅವರು ಭಾರತದಿಂದಲೇ ಖರೀದಿಸಬೇಕಾಗುತ್ತದೆ. ಭಾರತೀಯ ಅಕ್ಕಿ ರಫ್ತುದಾರರಿಗೆ ಯಾವುದೇ ನಷ್ಟವಾಗುವುದಿಲ್ಲ” ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ (AIREA) ಅಧ್ಯಕ್ಷ ಸತೀಶ್ ಗೋಯೆಲ್ ಹೇಳಿದರು.
“ತೆರಿಗೆ ಹೇರಿಕೆಯು ಭಾರತದ ಅಕ್ಕಿ ರಫ್ತಿನ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದಷ್ಟೇ. ಹೊಸ ಕಾರ್ಯತಂತ್ರ ಅಳವಡಿಸಿಕೊಂಡು ಅಮೆರಿಕದಲ್ಲಿ ಅಕ್ಕಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನಮಗೆ ಇನ್ನೂ ಹೆಚ್ಚಿನ ಅವಕಾಶಗಳಿವೆ” ಎಂದು ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ ಪ್ರೇಮ್ ಗಾರ್ಗ್ ಹೇಳಿದ್ದಾರೆ.
ಭಾರತೀಯ ಅಕ್ಕಿಯನ್ನು ಮುಖ್ಯವಾಗಿ ಅಮೆರಿಕದಲ್ಲಿ ಗಲ್ಫ್ ಮತ್ತು ಅರಬ್ ಖಂಡದ ಸಮುದಾಯಗಳು ವಾಸಿಸುತ್ತಿದ್ದು, ಅವರೇ ಹೆಚ್ಚಾಗಿ ಸೇವಿಸುತ್ತಾರೆ. ವಿಶೇಷವಾಗಿ ಬಿರಿಯಾನಿಯಂತಹ ಆಹಾರಗಳಲ್ಲಿ ಬಾಸ್ಮತಿ ಅಕ್ಕಿ ಅತ್ಯಗತ್ಯವಾಗಿರುವುದರಿಂದ ಬೇಡಿಕೆ ಹೆಚ್ಚಾಗಿಯೇ ಇದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಟ್ರಂಪ್ ಎಚ್ಚರಿಕೆಯೂ ಭಾರತದ ಮಾರುಕಟ್ಟೆಗೆ ಸ್ವಲ್ಪ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಅಕ್ಕಿ ರಫ್ತಿನಲ್ಲಿ ತೊಡಗಿಕೊಂಡಿರುವ ಕಂಪನಿಗಳು ವಿಶೇಷವಾಗಿ ಬಾಸ್ಮತಿ ಅಕ್ಕಿಗಳ ಮೇಲಿನ ಷೇರುಗಳ ಮರಳಿ ಪಡೆಯುತ್ತಿವೆ. ಇದು ಭಾರತದ ಮಾರುಕಟ್ಟೆಗೆ ನಕಾರಾತ್ಮಕ ಪರಿಣಾವ ಬೀರಿದೆ. ಭಾರತದ ಅಕ್ಕಿ ರಫ್ತು ಮಾರುಕಟ್ಟೆಯಲ್ಲಿ ಅಮೆರಿಕವು ಕೇವಲ ಒಂದು ಸಣ್ಣ ಪಾಲು ಮಾತ್ರ, ಆದರೆ ಹೆಚ್ಚುವರಿ ಸುಂಕಗಳ ಬೆದರಿಕೆ ರಫ್ತುದಾರರು ಮತ್ತು ಹೂಡಿಕೆದಾರರಿಗೆ ಅನಿಶ್ಚಿತತೆಯನ್ನು ಹೆಚ್ಚಿಸಿತು. ಟ್ರಂಪ್ ಅವರ ಎಚ್ಚರಿಕೆಯು, ದೇಶೀಯ ಕೃಷಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಮತ್ತು ವಿದೇಶಿ ಸ್ಪರ್ಧೆಯಿಂದ ರಕ್ಷಿಸುವುದನ್ನು ಹೇಳುತ್ತದೆ.
ಡಿಸೆಂಬರ್ 10 ರಂದು ನವದೆಹಲಿಯಲ್ಲಿ ಭಾರತ ಮತ್ತು ಅಮೆರಿಕದ ಮತ್ತೊಂದು ಸುತ್ತಿನ ವ್ಯಾಪಾರ ಮಾತುಕತೆ ನಡೆಯುವ ಎರಡು ದಿನಕ್ಕೂ ಮೊದಲು ಈ ಹೇಳಿಕೆಗಳು ಹೊರಬಂದಿವೆ. ಆಗಸ್ಟ್ 1 ರಿಂದ ಅಮೆರಿಕ ಭಾರತೀಯ ಸರಕುಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿತ್ತು, ನಂತರ ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಹೆಚ್ಚಳ ಮಾಡಿತು. ಏರುತ್ತಿರುವ ಯುಎಸ್ ಬೆಲೆಗಳನ್ನು ಎದುರಿಸಲು ಟ್ರಂಪ್ ಇತ್ತೀಚೆಗೆ ಭಾರತದಿಂದ ಮಸಾಲೆಗಳು ಮತ್ತು ಚಹಾ ಸೇರಿದಂತೆ ಅನೇಕ ಆಹಾರ ಪದಾರ್ಥಗಳ ಮೇಲಿನ ಸುಂಕವನ್ನು ಸಡಿಲಿಸಿದರು. ಆದಾಗ್ಯೂ, ಬಾಸ್ಮತಿ ಅಕ್ಕಿಯನ್ನು ಸುಂಕ ಕಡಿತ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಭಾರತದಿಂದ ಆಮದು ಮಾಡಿಕೊಳ್ಳುವ ಅಕ್ಕಿಯ ಮೇಲೆ ಅಮೆರಿಕವು ಮೊದಲು ಶೇ 10ರಷ್ಟು ತೆರಿಗೆಯನ್ನು ವಿಧಿಸಿತ್ತು. ಟ್ರಂಪ್ ಆಡಳಿತವು ಇತ್ತೀಚೆಗೆ ತೆರಿಗೆ ಪರಿಷ್ಕರಣೆ ಮಾಡಿದ ಬಳಿಕ ಇದು ಶೇ40 ಕ್ಕೆ ಏರಿಕೆಯಾಗಿದೆ. ಈ ತೆರಿಗೆ ಏರಿಕೆಯೂ ಭಾರತದ ಮಾರುಕಟ್ಟೆಗೆ ಹೊಡೆತ ಬೀಳುವ ಸಾಧ್ಯತೆ ಇದೆ.





