ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳು ಲಿಬಿಯಾದಲ್ಲಿ ಅಪಹರಣಕ್ಕೆ ಒಳಗಾಗಿದ್ದು, ಅಪಹರಣಕಾರರು 1 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದಾರೆ. ಕುಟುಂಬವು ತಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವಂತೆ ಭಾರತೀಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಆನಂದ್ ಜಿಲ್ಲೆಯ ಕರಮ್ಸದ್ ಮೂಲದ ಏಜೆಂಟ್ ಮೂಲಕ ಮಾನ್ಯ ವೀಸಾಗಳಿಲ್ಲದೆ ದಂಪತಿಗಳು ಪೋರ್ಚುಗಲ್‌ನಲ್ಲಿ ನೆಲೆಸಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಆರಂಭದಲ್ಲಿ ದುಬೈಗೆ ಹೋಗಿದ್ದು, ಅಲ್ಲಿಂದ ಏಜೆಂಟರು ಅವರನ್ನು ಲಿಬಿಯಾಕ್ಕೆ ಕಳುಹಿಸಿದ್ದಾರೆ. ಅಲ್ಲಿ ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಬಿಜೆಪಿ ಶಾಸಕರ ಸೋದರಳಿಯ ಸೇರಿ ಮೂವರ ಬಂಧನ
ಇನ್ನು ಗುಜರಾತಿ ಕುಟುಂಬವನ್ನು ರಕ್ಷಿಸಲು ಸರ್ಕಾರದ ಹಸ್ತಕ್ಷೇಪವನ್ನು ಕೋರಿ ರಾಜ್ಯಸಭಾ ಸಂಸದ ಮಾಯಾಂಕ್ ನಾಯಕ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಮೆಹ್ಸಾನಾ ಜಿಲ್ಲಾ ಅಧಿಕಾರಿಗಳೂ ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿ ಪತ್ರ ಬರೆದಿದ್ದಾರೆ.
ಬಾದಲ್‌ಪುರ ನಿವಾಸಿಗಳಾದ ಕಿಸ್ಮತ್ ಚಾವ್ಡಾ, ಅವರ ಪತ್ನಿ ಹಿನಾ ಮತ್ತು ಅವರ ಮೂರು ವರ್ಷದ ಮಗಳು ನವೆಂಬರ್ 29ರಂದು ದುಬೈಗೆ ತೆರಳಿದ್ದು, ಹರ್ಷಿತ್ ಕೆ ಮೆಹ್ತಾ ಎಂದು ಗುರುತಿಸಲ್ಪಟ್ಟ ಅವರ ಪ್ರಯಾಣ ಏಜೆಂಟ್ ಅವರನ್ನು ಪೋರ್ಚುಗಲ್‌ಗೆ ಕಳುಹಿಸುವುದಾಗಿ ಭರವಸೆ ನೀಡಿದ್ದ. ಆದರೆ ದುಬೈ ತಲುಪಿದ ನಂತರ, ಅವರಿಗೆ ತಿಳಿಯದೆಯೇ ಅವರನ್ನು ಲಿಬಿಯಾಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 4ರಂದು ಅವರನ್ನು ಬಿಡುಗಡೆ ಮಾಡಬೇಕಾದರೆ ಹಣ ನೀಡಬೇಕು ಎಂದು ಈ ದಂಪತಿಯ ಭಾರತದಲ್ಲಿರುವ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದಿವೆ.
ಇನ್ನು ಅಕ್ಟೋಬರ್ ಆರಂಭದಲ್ಲಿ, ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದ ನಾಲ್ವರು ಗುಜರಾತಿಗಳನ್ನು ಇರಾನ್‌ನಲ್ಲಿ ಅಪಹರಿಸಲಾಗಿತ್ತು. ಅವರ ಬಿಡುಗಡೆಗಾಗಿ 2 ಕೋಟಿ ರೂ. ಬೇಡಿಕೆ ಮುಂದಿಡಲಾಗಿತ್ತು. ಕೇಂದ್ರ ಸರ್ಕಾರದ ಹಸ್ತಕ್ಷೇಪದ ನಂತರ ಅವರು ಸುರಕ್ಷಿತವಾಗಿ ಮರಳಿದ್ದರು.





