ಆಸ್ಟ್ರೇಲಿಯಾದ ಮೆಲ್ಬೋರ್ನ್ ಬಳಿಯ ಗೀಲಾಂಗ್‌ನಲ್ಲಿರುವ ಜಿಮ್‌ನಲ್ಲಿ ನರ್ಸ್ಆಗಿ ಕೆಲಸ ಮಾಡುತ್ತಿದ್ದ ಪಂಜಾಬ್ ಮೂಲದ ಭಾರತೀಯ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ‘ಭಾರತೀಯ ನಾಯಿ – ವಾಪಸ್ ಹೋಗು’ ಎಂದು ಬೆದರಿಕೆಯಾಗಿದ್ದಾರೆ ಎಂದು ವರದಿಯಾಗಿದೆ.
ಭಾರತೀಯರನ್ನು ಗುರಿಯಾಗಿಸಿಕೊಂಡು ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬರುತ್ತಿವೆ. ಇದೇ ಸಮಯದಲ್ಲಿ, ಈ ಘಟನೆ ನಡೆದಿದೆ. ಘಟನೆಯನ್ನು ಜನಾಂಗೀಯ ದ್ವೇಷದಿಂದ ನಡೆದ ಕೃತ್ಯವೆಂದು ಹೇಳಲಾಗಿದೆ.
ಪಂಜಾಬ್ ಮೂಲದ ಹರ್ಮನ್‌ಪ್ರೀತ್ ಸಿಂಗ್ (22) ಅವರು ಜಿಮ್‌ನಲ್ಲಿ ನರ್ಸ್ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ, ತರಬೇತಿಗಾಗಿ ಬಂದಿದ್ದ ಮೂವರು ಆರಂಭದಲ್ಲಿ ಸಿಂಗ್ ಅವರನ್ನು ನಿಂದಿಸಿದ್ದಾರೆ. ಜಿಮ್‌ನಿಂದ ಹೊರಬಂದಾಗ, ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸಿಂಗ್ ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
“ನಾನು ಜಿಮ್‌ನಿಂದ ಹೊರಗೆ ಬರುವುದನ್ನು ಮೂವರು ವ್ಯಕ್ತಿಗಳು ಕಾಯುತಿದ್ದರು. ಅವರು ನನ್ನನ್ನು ‘ಭಾರತೀಯ ನಾಯಿ’ಯೆಂದು ಕರೆದರು. ‘ನೀನು ಎಲ್ಲಿಂದ ಬಂದಿದ್ದೀಯೋ, ಅಲ್ಲಿಗೆ ವಾಪಸ್ ಹೋಗು’ ಎಂದು ಬೆದರಿಕೆ ಹಾಕಿದರು. ಬಳಿಕ, ಅವರಲ್ಲಿ ಒಬ್ಬ ತನ್ನ ತಲೆಯಿಂದ ನನ್ನ ಮೂಗಿಗೆ ಗುದ್ದಿದನು. ಇದರಿಂದ ಭಾರೀ ರಕ್ತಸ್ರಾವವಾಯಿತು” ಎಂದು ಘಟನೆ ಕುರಿತು ಸಿಂಗ್ ವಿವರಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳೊಂದಿಗೆ ಮತ್ತಷ್ಟು ಮಾತನಾಡಿದ ಸಿಂಗ್, “ಹಲ್ಲೆ ಮತ್ತು ಜನಾಂಗೀಯ ನಿಂದನೆಯಿಂದ ನಾನು ಇನ್ನೂ ಆಘಾತಕ್ಕೊಳಗಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷ, ಆಸ್ಟ್ರೇಲಿಯಾಗೆ ವಲಸೆ ಬರುವುದನ್ನು ವಿರೋಧಿಸಿ ಅಲ್ಲಿನ ಗುಂಪೊಂದು ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಅಂದಿನಿಂದ, ಆಸ್ಟ್ರೇಲಿಯಾದಲ್ಲಿ ಉದ್ವಿಗ್ನತೆ ಹೆಚ್ಚಿದೆ ಎಂದು ವರದಿಯಾಗಿದೆ. 2015ರ ಜುಲೈನಲ್ಲಿ, ಅಡಿಲೇಡ್‌ನಲ್ಲಿ ಅಮನ್‌ಪ್ರೀತ್ ಸಿಂಗ್ ಎಂಬವರ ವ್ಯಕ್ತಿ ಮೇಲೆ ಐದು ಜನರು ದಾಳಿ ಮಾಡಿದ್ದರು. ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗುತ್ತಾ ಅವರ ಮೇಲೆ ಹಲ್ಲೆ ನಡೆಸಿದ್ದರು.





