ಸೂಡಾನಿನ ಅಶಾಂತಿಯ ಮಧ್ಯೆ ಭಾರತದ ಒಡಿಶಾ ರಾಜ್ಯದ ಜಗತ್ಸಿಂಘಪುರ ಜಿಲ್ಲೆಯ ಆದರ್ಶ್ ಬೆಹೇರಾ (36) ಅವರನ್ನು ರಾಪಿಡ್ ಸಪೋರ್ಟ್ ಫೋರ್ಸ್ (ಆರ್‌ಎಸ್‌ಎಫ್) ದಾಳಿಕೋರರು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಸೂಡಾನಿನ ಅಲ್ ಫಾಶಿರ್ ನಗರದಲ್ಲಿರುವ ಸುಕರಾತಿ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬೆಹೇರಾ ಅವರನ್ನು ಆರ್‌ಎಸ್‌ಎಫ್ ಪಡೆಗಳು ನ್ಯಾಲಾ ನಗರಕ್ಕೆ ಕರೆದುಕೊಂಡು ಹೋಗಿರುವ ಸಾಧ್ಯತೆಗಳಿವೆ.
ಸುದ್ದಿ ಮಾಧ್ಯಮ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಆದರ್ಶ್ ಬೆಹೇರಾ ಅವರು ಇಬ್ಬರು ಸಶಸ್ತ್ರ ಆರ್‌ಎಸ್‌ಎಫ್ ಯೋಧರ ನಡುವೆ ಕುಳಿತಿರುವ ದೃಶ್ಯ ಕಾಣಿಸುತ್ತದೆ. ಒಬ್ಬ ಯೋಧ ಅವರೊಂದಿಗೆ ಹಾಸ್ಯಮಾಡುತ್ತಾ “ನಿಮಗೆ ಶಾರುಖ್ ಖಾನ್ ಗೊತ್ತೇ?” ಎಂದು ಕೇಳಿದರೆ, ಮತ್ತೊಬ್ಬ ಯೋಧ ಅವರು “ಡಾಗಾಲೋ ಗುಡ್” ಎಂದು ಹೇಳುವಂತೆ ಒತ್ತಾಯಿಸುತ್ತಾನೆ. ಡಾಗಾಲೋ ಎಂದರೆ ಆರ್‌ಎಸ್‌ಎಫ್‌ನ ನಾಯಕ ಮೊಹಮ್ಮದ್ ಹಮ್ದಾನ್ ಡಾಗಾಲೋ (ಹೆಮೆಟಿ) ಎಂಬವರನ್ನು ಸೂಚಿಸುತ್ತದೆ.
ಬೆಹೇರಾ ಅವರ ಪತ್ನಿ ಸುಸ್ಮಿತಾ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, “ನನ್ನ ಪತಿ ಕಳೆದ ಎರಡು ವರ್ಷಗಳಿಂದ ಸೂಡಾನಿನಲ್ಲಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ 8 ಮತ್ತು 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ದಯವಿಟ್ಟು ಸರ್ಕಾರ ನಮ್ಮ ಪತಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಿ” ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಸುಡಾನ್ | ಆರ್‌ಎಸ್‌ಎಫ್‌ನಿಂದ ಭೀಕರ ನರಮೇಧ: ಮೂರು ದಿನಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ಹತ್ಯೆ
ಸೂಡಾನಿನ ಅಲ್ ಫಾಶಿರ್‌ನಲ್ಲಿ ಕಳೆದ 18 ತಿಂಗಳಿನಿಂದ ಆರ್‌ಎಸ್‌ಎಫ್ ಮತ್ತು ಸೂಡಾನೀಸ್ ಆರ್ಮ್ಡ್ ಫೋರ್ಸ್ (SAF) ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಜನರು ಬಲಿಯಾಗಿದ್ದಾರೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಆರ್‌ಎಸ್‌ಎಫ್ ಪಡೆಗಳ ವಿರುದ್ಧ ಯುದ್ಧ ಅಪರಾಧದ ತನಿಖೆ ಆರಂಭಿಸಲು ಎಚ್ಚರಿಕೆ ನೀಡಿದೆ.
ಭಾರತದಲ್ಲಿನ ಸೂಡಾನಿನ ರಾಯಭಾರಿ ಡಾ. ಮೊಹಮ್ಮದ್ ಅಬ್ದಲ್ಲಾ ಅಲಿ ಎಲ್ಟೊಮ್ ಮಾತನಾಡಿ, “ಅಲ್ ಫಾಶಿರ್‌ನಲ್ಲಿ ಸಂಪೂರ್ಣ ಸಂಪರ್ಕ ವ್ಯತ್ಯಯವಾಗಿದೆ. ಯಾವುದೇ ಸಂಪರ್ಕ ಸಾಧ್ಯವಿಲ್ಲ. ನಾವು ಅವರ ಸುರಕ್ಷತೆಯ ಬಗ್ಗೆ ಆಶಾಭಾವನೆ ಹೊಂದಿದ್ದೇವೆ ಮತ್ತು ಅವರು ಶೀಘ್ರದಲ್ಲೇ ಭಾರತಕ್ಕೆ ಸುರಕ್ಷಿತವಾಗಿ ಮರಳಲಿ ಎಂದು ಬಯಸುತ್ತೇವೆ” ಎಂದು ಹೇಳಿದರು.





