ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯನೋರ್ವ ತನ್ನ ಪತ್ನಿ ಮತ್ತು ಮೂವರು ಸಂಬಂಧಿಕರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹದ ಕಾರಣ ಗುಂಡು ಹಾರಿಸಿದ್ದಾನೆ ಎಂದು ಕೌಂಟಿ ಪೊಲೀಸರು ಹೇಳಿದ್ದಾರೆ.
ಆರೋಪಿ, ಭಾರತೀಯ ಮೂಲದ ವ್ಯಕ್ತಿಯನ್ನು ವಿಜಯ್ ಕುಮಾರ್ (51) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ನಡೆದ ಲಾರೆನ್ಸ್‌ವಿಲ್ಲೆ ನಿವಾಸದಿಂದ ಸ್ವಲ್ಪ ದೂರದಲ್ಲಿಯೇ ಪೊಲೀಸರು ವಿಜಯ್ ಬಂಧನ ಮಾಡಿರುವುದಾಗಿ ಪೊಲೀಸರು ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತೀಯ ವಿದ್ಯಾರ್ಥಿಗೆ ದೌರ್ಜನ್ಯವೆಸಗಿ ಅಮೆರಿಕದಿಂದ ಗಡೀಪಾರು
ಮೃತರನ್ನು ಕುಮಾರ್ ಪತ್ನಿ ಮೀನು ಡೋಗ್ರಾ ಮತ್ತು ಇತರ ಮೂವರು ಸಂಬಂಧಿಕರು – ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಎಂದು ಗುರುತಿಸಲಾಗಿದೆ. ಡೋಗ್ರಾ ಮತ್ತು ಕುಮಾರ್ ನಡುವೆ ಅಟ್ಲಾಂಟಾದಲ್ಲಿರುವ ಮನೆಯಲ್ಲಿ ಜಗಳ ನಡೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಗೌರವ್ ಕುಮಾರ್, ನಿಧಿ ಚಂದರ್ ಮತ್ತು ಹರೀಶ್ ಚಂದರ್ ಅವರು ಏಳು ಮತ್ತು 10 ವರ್ಷದ ಇಬ್ಬರು ಮಕ್ಕಳೊಂದಿಗೆ ಬ್ರೂಕ್ ಐವಿ ಕೋರ್ಟ್ ಮನೆಯಲ್ಲಿ ವಾಸಿಸುತ್ತಿದ್ದರು. ಅಟ್ಲಾಂಟಾದಲ್ಲಿರುವ ಮನೆಯಲ್ಲಿ ಜಗಳ ನಡೆದ ಬಳಿಕ ವಿಜಯ್ ಕುಮಾರ್ ದಂಪತಿಗಳು ತಮ್ಮ 12 ವರ್ಷದ ಮಗುವಿನೊಂದಿಗೆ ಬ್ರೂಕ್ ಐವಿ ಕೋರ್ಟ್ ಮನೆಗೆ ತೆರಳಿದ್ದರು. ಅಲ್ಲಿ ವಿಜಯ್ ಸಂಬಂಧಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಲಾಗಿದೆ.
ಘಟನೆಯ ನಂತರ 12 ವರ್ಷದ ಮಗು 911ಗೆ ಕರೆ ಮಾಡಿ ಮಾಹಿತಿ ನೀಡಿದೆ. ಗುಂಡಿನ ದಾಳಿಗೆ ಕಾರಣವೇನು ಎಂಬುದು ಇನ್ನೂ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕುಮಾರ್ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ, ಕೊಲೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ನಡುವೆ ಅಟ್ಲಾಂಟಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ಘಟನೆಯನ್ನು ಮಾಧ್ಯಮಗಳಿಗೆ ಖಚಿತಪಡಿಸಿ, ಆರೋಪಿ ಬಂಧನವಾಗಿರುವುದಾಗಿ ತಿಳಿಸಿದ್ದಾರೆ.





