ಭಾರತೀಯರು ಇರಾನ್ ತೊರೆಯಲೆಂದು ಸರ್ಕಾರ ಹೇಳಿದೆಯೇ ಹೊರತು ಅಲ್ಲಿರುವ ವಿದ್ಯಾರ್ಥಿಗಳು ಹೇಗೆ ವಾಪಸ್ ಬರುವುದು ಎಂಬ ಬಗ್ಗೆ ಚಿಂತನೆಯೂ ನಡೆಸಿದಂತಿಲ್ಲ. ನಿಗದಿ ಮಾಡಿದ ವಿಶೇಷ ವಿಮಾನವನ್ನೂ ಮುಂದೂಡಲಾಗಿದೆ. ಇತ್ತ ಭಾರತೀಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ, ಕೂಡಲೇ ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತರುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದ್ದು ಸದ್ಯ ಪ್ರತಿಭಟನೆಗಳು ನಡೆಯುತ್ತಿದೆ. ಆಂತರಿಕ ಅಸ್ಥಿರತೆಗೆ ಅಲ್ಲಿರುವ ಭಾರತೀಯರು ಕಂಗೆಟ್ಟಿದ್ದಾರೆ. ಇವೆಲ್ಲವುದರ ನಡುವೆ ಇರಾನ್‌ನಲ್ಲಿರುವ ಭಾರತೀಯರು ಇರಾನ್ ತೊರೆದು ಮತ್ತೆ ಭಾರತಕ್ಕೆ ಮರಳಲು ಭಾರತ ಸರ್ಕಾರ ತಿಳಿಸಿದೆ. ಆದರೆ ಅತ್ತ ಹಣವೂ ಇಲ್ಲದೆ, ಇತ್ತ ಇಂಟರ್‌ನೆಟ್ ಕೂಡಾ ಇಲ್ಲದೆ ಇರಾನ್ ತೊರೆದು ಬರಲಾಗದ ಇಕ್ಕಟ್ಟಿನ ಸ್ಥಿತಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕೂಗು ಕೇಳುವವರಿಲ್ಲದಾಗಿದೆ.
ಈ ಪ್ರತಿಭಟನೆ, ಹಿಂಸಾಚಾರದ ನಡುವೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ಸೇರಿದಂತೆ ಭಾರತೀಯ ನಾಗರಿಕರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳನ್ನು ಬಳಸಿಕೊಂಡು ವಿಳಂಬ ಮಾಡದೆ ಇರಾನ್‌ನಿಂದ ಹೊರಡಿ ಎಂದು ಸಲಹೆ ನೀಡಿದೆ. ಸರ್ಕಾರದ ಸಲಹೆಯಂತೆ ಹಣ ಉಲ್ಲವರು ಅಥವಾ ಹಣ ಹೊಂದಿಸಿಕೊಳ್ಳಲು ಸಾಧ್ಯವಾದ ಕೆಲವರು ಹೇಗೋ ಟಿಕೆಟ್ ಬುಕ್ ಮಾಡಿಕೊಂಡು ಭಾರತಕ್ಕೆ ತಲುಪಿದ್ದಾರೆ. ಆದರೆ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದೆ.
ಇದನ್ನು ಓದಿದ್ದೀರಾ? ಇರಾನ್-ಇಸ್ರೇಲ್ ಸಂಘರ್ಷ | ದಾಳಿ ಮಾಡಿ ನಲುಗಿದ ಇಸ್ರೇಲ್; ನೋವುಂಡರೂ ಬಲಗೊಂಡ ಇರಾನ್
ಇರಾನ್‌ನಲ್ಲಿ ಸರಿಸುಮಾರು 9,000 ಭಾರತೀಯರು ಪ್ರಸ್ತುತ ವಾಸಿಸುತ್ತಿದ್ದಾರೆ. ಈ ಪೈಕಿ ಬಹುಪಾಲು ಜನರು ವಿದ್ಯಾರ್ಥಿಗಳಾಗಿದ್ದಾರೆ. ವರದಿಗಳ ಪ್ರಕಾರ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅದರಲ್ಲೂ ಇರಾನ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಿಂದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮುಖ್ಯವಾಗಿ MBBS (ವೈದ್ಯಕೀಯ ಶಿಕ್ಷಣ) ಕೋರ್ಸ್‌ಗಳಿಗೆ ಪ್ರವೇಶ ಪಡೆದು ಇರಾನ್‌ನಲ್ಲಿ ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳು ಅತ್ತ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗದೆ, ಇತ್ತ ಹಣವೂ ಇಲ್ಲದೆ, ಹೇಗೋ ಹಣ ಹೊಂದಿಸಿ ಟಿಕೆಟ್ ಬುಕ್ ಮಾಡಲು ಇಂಟರ್‌ನೆಟ್ ವ್ಯವಸ್ಥೆಯೂ ಸರಿಯಾಗಿಲ್ಲದೆ ಒದ್ದಾಡುತ್ತಿದ್ದಾರೆ.
ಭಾರತೀಯರು ಇರಾನ್ ತೊರೆಯಲೆಂದು ಸರ್ಕಾರ ಹೇಳಿದೆಯೇ ಹೊರತು ಅಲ್ಲಿರುವ ವಿದ್ಯಾರ್ಥಿಗಳು ಹೇಗೆ ವಾಪಸ್ ಬರುವುದು ಎಂಬ ಬಗ್ಗೆ ಚಿಂತನೆಯೂ ನಡೆಸಿದಂತಿಲ್ಲ. ಇತ್ತ ಭಾರತೀಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ, ಕೂಡಲೇ ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತರುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ರೀನಗರದವರ ಅಫ್ರೋಜಾ ಶಫಿ, “ನನ್ನ ಮಗಳು ಅರಕ್ ವಿಶ್ವವಿದ್ಯಾಲಯದಲ್ಲಿದ್ದಾಳೆ. ಆದರೆ ಅವಳಿಗೆ ಸುರಕ್ಷತೆಯ ಬಗ್ಗೆ ಕಳವಳವಿದೆ. ಅವರ ಬಳಿ ಹಣವೂ ಈಗ ಖಾಲಿಯಾಗುತ್ತಿದೆ. ಸುಮಾರು ಐದು ದಿನಗಳ ನಂತರ ಜನವರಿ 14ರಂದು ಮಗಳು ನನ್ನ ಕರೆಗೆ ಸಿಕ್ಕಳು, ಸ್ವಲ್ಪ ಮಾತನಾಡಲು ಸಾಧ್ಯವಾಯಿತು. ಅಂತಾರಾಷ್ಟ್ರೀಯ ಕರೆಗಳಿಗೆ ನಿರ್ಬಂಧವಿರುವ ಕಾರಣ ನಮ್ಮ ಮಕ್ಕಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಣ ವಿನಿಯಮ ಕೇಂದ್ರವೂ ಕಾರ್ಯನಿರ್ವಹಿಸುತ್ತಿಲ್ಲ. ಡಾಲರ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇರಾನ್‌ನಲ್ಲಿ ನಮ್ಮ ಮಕ್ಕಳ ಬಳಿ ಹಣ ಇಲ್ಲದಂತಾಗಿದೆ” ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ಇವೆಲ್ಲವುದರ ನಡುವೆ ಇರಾನ್‌ನಿಂದ ದೆಹಲಿಗೆ ಬರುವ ವಿಮಾನ ದರವೂ ಗಗನಕ್ಕೇರಿದೆ. ಸಾಮಾನ್ಯವಾಗಿ 20,000-25,000 ರೂಪಾಯಿ ಆಸುಪಾಸಿನಲ್ಲಿರುವ ಟಿಕೆಟ್ ಬೆಲೆಯು 70,000 ರಿಂದ 80,000 ರೂ.ಗಳವರೆಗೆ ತಲುಪಿದೆ. ಹೀಗಿರುವಾಗ ವಿದ್ಯಾರ್ಥಿಗಳು ಅಷ್ಟೊಂದು ಮೊತ್ತ ತೆರುವುದಾದರೂ ಹೇಗೆ? ಉಕ್ರೇನ್ ಯುದ್ಧದ ಸಂದರ್ಭದಲ್ಲಿಯೂ ಇದೇ ರೀತಿ ನಡೆದಿತ್ತು. ಟಿಕೆಟ್ ಬೆಲೆ ಏರಿಕೆ, ಭಾರತೀಯರಿಗೆ ವಾಪಸ್ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ವಿಪಕ್ಷಗಳ ಒತ್ತಡದ ನಡುವೆ ಕೇಂದ್ರ ಸರ್ಕಾರ ಸ್ಥಳಾಂತರ ಪ್ರಕ್ರಿಯೆ ನಡೆಸಿತ್ತು. ಬಳಿಕ ತಮ್ಮ ಸರ್ಕಾರದ ಸಾಧನೆ ಎಂಬಂತೆ ಪ್ರಚಾರ ಮಾಡಲು ಆರಂಭಿಸಿತ್ತು.
ಇದನ್ನು ಓದಿದ್ದೀರಾ? ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದರೆ ಕಠಿಣ ಕ್ರಮ: ಇರಾನ್‌ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಇನ್ನು ಮತ್ತೋರ್ವ ಪೋಷಕರು ಸುಹೈಲ್ ಮುಜಾಮಿಲ್ ಖಾಜ್ಮಿ, “ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಿಂದ ಹೊರಬರಲು ಅವಕಾಶವಿಲ್ಲ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಧ್ಯವಾದಷ್ಟು ಬೇಗ ಇರಾನ್‌ನಿಂದ ಹೊರಹೋಗುವಂತೆ ಸೂಚಿಸಿದೆ. ಆದರೆ ಹೇಗೆ ಎಂಬುದು ನಮ್ಮ ಚಿಂತೆ. ನಾವು ಟಿಕೆಟ್ ಹಣ ಪಾವತಿಸಲು ಸಿದ್ಧರಿದ್ಧೇವೆ. ಆದರೆ ನಮ್ಮ ಮಕ್ಕಳನ್ನು ಸುರಕ್ಷತೆಯಿಂದ ಸ್ಥಳಾಂತರಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದಾರೆ.
ಈಗಾಗಲೇ ಇರಾನ್‌ನಲ್ಲಿ ಹಿಂಸಾಚಾರದಿಂದಾಗಿ ಐದು ಸಾವಿರ ಮಂದಿ ಪ್ರತಿಭಟನಾಕಾರರ ಹತ್ಯೆಯಾಗಿದೆ. 16,700ಕ್ಕೂ ಹೆಚ್ಚು ಬಂಧನವಾಗಿದೆ. ಹೀಗಿರುವಾಗ ಸಂಪರ್ಕಕ್ಕೂ ಸಿಗದ ತಮ್ಮ ಮಕ್ಕಳ ಬಗ್ಗೆ ಪೋಷಕರು ಆತಂಕದಲ್ಲಿದ್ದಾರೆ. ಆದರೆ ಪ್ರಧಾನಿ ಮೋದಿ ಸರ್ಕಾರ ಮಾಡುತ್ತಿರುವುದೇನು? ಪೋಷಕರ ಒತ್ತಾಯದ ನಡುವೆ ಟೆಹ್ರಾನ್‌ನಿಂದ ನವದೆಹಲಿಗೆ ವಿಶೇಷ ವಿಮಾನ ಜನವರಿ 16ರಂದು ನಿಗದಿ ಮಾಡಿ, ಬಳಿಕ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮತ್ತೆ ಯಾವಾಗ ಈ ವಿಮಾನ ಹಾರಾಲಿದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇಲ್ಲಿ ಬಾಯಿ ಮಾತಿನ ಭರವಸೆ ಬಿಟ್ಟು ಶೀಘ್ರವೇ ಭರವಸೆ ಕಾರ್ಯರೂಪಕ್ಕೆ ಬರುವುದು ಅತ್ಯಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




