ಅಮೆರಿಕದಲ್ಲಿ ತೆಲುಗು ಮೂಲದ ಯುವತಿಯೊಬ್ಬರನ್ನು ಹತ್ಯೆಗೈದು ಭಾರತಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇರಿಲ್ಯಾಂಡ್‌ನಲ್ಲಿ ನಡೆದ ನಿಕಿತಾ ಗೊಡಿಶಾಲ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರ್ಜುನ್ ಶರ್ಮಾನನ್ನು ಇಂಟರ್‌ಪೋಲ್ ನೆರವಿನೊಂದಿಗೆ ಪತ್ತೆಹಚ್ಚಿ ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಡೇಟಾ ವಿಶ್ಲೇಷಕಿ ನಿಕಿತಾ ರಾವ್ ಗೊಡಿಶಾಲ (27) ಅವರು ಜನವರಿ 2 ರಂದು ನಾಪತ್ತೆಯಾಗಿದ್ದರು. ನಿಕಿತಾ ಅವರ ಮಾಜಿ ಪ್ರಿಯಕರನಾಗಿದ್ದ ಅರ್ಜುನ್ ಶರ್ಮಾ (26), ತಾನು ಹೊಸ ವರ್ಷದ ಮುನ್ನಾದಿನದಂದು ನಿಕಿತಾ ಅವರನ್ನು ಕೊನೆಯದಾಗಿ ನೋಡಿದ್ದಾಗಿ ಹಾವರ್ಡ್ ಕೌಂಟಿ ಪೊಲೀಸರಿಗೆ ತಿಳಿಸಿದ್ದ.
ಆದರೆ, ಶರ್ಮಾ ನೀಡಿದ ದೂರು ಮತ್ತು ಆತನ ನಡೆ ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು. ನಾಪತ್ತೆ ದೂರು ದಾಖಲಿಸಿದ ದಿನವೇ ಅರ್ಜುನ್ ಶರ್ಮಾ ಅಮೆರಿಕದಿಂದ ಭಾರತಕ್ಕೆ ವಿಮಾನವೇರಿರುವುದು ತನಿಖೆಯಲ್ಲಿ ದೃಢಪಟ್ಟಿತು.
ಸಂಶಯಗೊಂಡ ಪೊಲೀಸರು ಕೊಲಂಬಿಯಾದ ಟ್ವಿನ್ ರಿವರ್ಸ್ ರಸ್ತೆಯಲ್ಲಿರುವ ಶರ್ಮಾ ಅವರ ಅಪಾರ್ಟ್‌ಮೆಂಟ್ ಮೇಲೆ ಶೋಧನೆ ವಾರೆಂಟ್ ಪಡೆದು ದಾಳಿ ನಡೆಸಿದರು. ಈ ವೇಳೆ, ಜನವರಿ 3ರಂದು ಅಪಾರ್ಟ್‌ಮೆಂಟ್ ಒಳಗೆ ನಿಕಿತಾ ಅವರ ಮೃತದೇಹ ಪತ್ತೆಯಾಗಿತ್ತು. ತನಿಖೆಗೊಳಪಡಿಸಿದ ಹಾವರ್ಡ್ ಕೌಂಟಿ ಪೊಲೀಸರು ಶರ್ಮಾ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವೆನೆಜುವೆಲಾ ಮೇಲೆ ‘ಅಮೆರಿಕ’ ಹಿಡಿತ: ಮೂರನೇ ವಿಶ್ವಯುದ್ಧದ ಕಾರ್ಮೋಡ
ಆರೋಪಿ ದೇಶ ತೊರೆದಿದ್ದರಿಂದ ಅಮೆರಿಕದ ಫೆಡರಲ್ ಏಜೆನ್ಸಿಗಳು ಭಾರತೀಯ ಅಧಿಕಾರಿಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಿ ಕಾರ್ಯಾಚರಣೆ ಆರಂಭಿಸಿದ್ದವು. ಏಜೆನ್ಸಿಗಳ ನಡುವಿನ ಮಾಹಿತಿ ವಿನಿಮಯ ಮತ್ತು ನಿರಂತರ ಕಣ್ಗಾವಲಿನ ಫಲವಾಗಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಅರ್ಜುನ್ ಶರ್ಮಾನನ್ನು ಇಂಟರ್‌ಪೋಲ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಮೆರಿಕಕ್ಕೆ ಹಸ್ತಾಂತರಿಸುವ (ಗಡೀಪಾರು) ಪ್ರಕ್ರಿಯೆಗಳು ಜರುಗುವ ನಿರೀಕ್ಷೆಯಿದೆ.
ಎಲಿಕಾಟ್ ಸಿಟಿಯಲ್ಲಿ ವಾಸವಿದ್ದ ನಿಕಿತಾ, 2025ರ ಫೆಬ್ರವರಿಯಿಂದ ‘ವೆದಾ ಹೆಲ್ತ್’ (Vheda Health) ಸಂಸ್ಥೆಯಲ್ಲಿ ಡೇಟಾ ಮತ್ತು ಸ್ಟ್ರಾಟಜಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರು ಕಂಪನಿಯ ಪ್ರತಿಷ್ಠಿತ ‘ಆಲ್-ಇನ್ ಅವಾರ್ಡ್’ ಅನ್ನೂ ಪಡೆದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ನಡುವೆ, ಮೃತ ನಿಕಿತಾ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹಾಗೂ ಅಗತ್ಯವಿರುವ ಎಲ್ಲ ರಾಯಭಾರ ನೆರವು ನೀಡುತ್ತಿರುವುದಾಗಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೇರೊಬ್ಬ ವ್ಯಕ್ತಿಯ ಫೋಟೊ ಈ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.





