ಬ್ರಿಟನ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದಲ್ಲಿ 20 ವರ್ಷದ ಭಾರತೀಯ ಮೂಲದ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಈ ದಾಳಿಯ ಹಿಂದೆ ಜನಾಂಗೀಯ ದ್ವೇಷವೇ ಕಾರಣವಾಗಿದೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತ್ತೆಗೆ ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ್ದಾರೆ. ಶನಿವಾರ (ಅಕ್ಟೋಬರ್ 26) ರಾತ್ರಿ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ ಸಂತ್ರಸ್ತ ಮಹಿಳೆ ರಸ್ತೆಯ ಮಧ್ಯೆ ಅಳುತ್ತಾ ಕುಳಿತಿದ್ದುದನ್ನು ಕಂಡು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರಾಥಮಿಕ ವಿಚಾರಣೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಪತ್ತೆಯಾಗಿದೆ.
“ಇದು ಯುವತಿಯ ಮೇಲಿನ ಅತ್ಯಂತ ಭಯಾನಕ ದಾಳಿ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲು ನಾವು ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯದಲ್ಲಿ ಸಿಕ್ಕಿರುವ ಆರೋಪಿಯ ಚಿತ್ರವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದು, ಆತನ ಕುರಿತು ಯಾವುದೇ ಮಾಹಿತಿ ಇರುವವರು ಪೊಲೀಸರಿಗೆ ಸಹಕಾರ ನೀಡುವಂತೆ ವಿನಂತಿಸಿದ್ದಾರೆ. “ಯಾರಾದರೂ ಆ ಸಮಯದಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನು ನೋಡಿದ್ದರೆ ಅಥವಾ ಡ್ಯಾಶ್‌ಕ್ಯಾಮ್ ದೃಶ್ಯಗಳಿದ್ದರೆ ನಮ್ಮ ತನಿಖೆಗೆ ಅದು ಬಹಳ ಸಹಾಯಕವಾಗುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?
ಈ ಘಟನೆಗೆ ರಾಜಕೀಯ ವಲಯದಲ್ಲಿಯೂ ಖಂಡನೆ ವ್ಯಕ್ತವಾಗಿದೆ. ಕಾವೆಂಟ್ರಿ ಸೌತ್ ಸಂಸದೆಯಾದ ಝರಾ ಸುಲ್ತಾನಾ “ಪಂಜಾಬಿ ಮೂಲದ ಮಹಿಳೆಯ ಮೇಲಿನ ಈ ದಾಳಿ ಭಯಾನಕವಾಗಿದೆ. ಇತ್ತೀಚೆಗೆ ಓಲ್ಡ್‌ಬರಿಯಲ್ಲಿ ಸಿಖ್ ಮಹಿಳೆಯ ಮೇಲೂ ಇದೇ ರೀತಿಯ ಘಟನೆ ನಡೆದಿದೆ. ಜನಾಂಗೀಯತೆ ಮತ್ತು ಸ್ತ್ರೀದ್ವೇಷವು ಒಟ್ಟಾಗಿ ಕೆಲಸ ಮಾಡುತ್ತಿರುವುದನ್ನು ಈ ಘಟನೆ ತೋರಿಸುತ್ತದೆ. ನಾವು ಒಗ್ಗಟ್ಟಾಗಿ ಜನಾಂಗೀಯತೆ, ಫಾಸಿಸಂ ಮತ್ತು ಸ್ತ್ರೀದ್ವೇಷದ ವಿರುದ್ಧ ಹೋರಾಡಬೇಕು” ಎಂದು ತಿಳಿಸಿದ್ದಾರೆ.
ಲೇಬರ್ ಪಕ್ಷದ ಸಂಸದೆಯಾದ ಪ್ರೀತ್ ಕೌರ್ ಗಿಲ್ ಕೂಡ ಈ ಘಟನೆಯನ್ನು “ಅತ್ಯಂತ ದುಃಖದ ಹಾಗೂ ಆತಂಕಕಾರಿ” ಎಂದು ಹೇಳಿದ್ದಾರೆ.
ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಆರೋಪಿ ಶೀಘ್ರದಲ್ಲೇ ಬಂಧನಕ್ಕೆ ಒಳಗಾಗುವ ನಿರೀಕ್ಷೆ ವ್ಯಕ್ತವಾಗಿದೆ.





