ಸಿಂಗಾಪುರದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು, ತಡರಾತ್ರಿಯಲ್ಲಿ ತಾವು ಮನೆಗೆ ಹಿಂತಿರುಗುವಾಗ ಚಿತ್ರೀರಿಸಿದ ಹಂಚಿಕೊಂಡ ವಿಡಿಯೋ ಚರ್ಚೆಗೆ ನಾಂದಿ ಹಾಡಿದೆ. ಅವರು ಸಿಂಗಾಪುರದಲ್ಲಿ ನಡುರಾತ್ರಿಯಲ್ಲೂ ಭಯವಿಲ್ಲದೆ ರಸ್ತೆಯಲ್ಲಿ ಓಡಾಡಬಹುದಾದ ಮತ್ತು ಮಹಿಳೆಯರಿಗೆ ಇರುವ ಸುರಕ್ಷತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾತ್ರಿಯಲ್ಲಿ ಮಹಿಳೆಯರು ಒಂಟಿಯಾಗಿ ನಡೆಯುವುದು ಅಸಮಾನ್ಯವಾದುದ್ದಲ್ಲ ಎಂದು ಹೇಳಿದ್ದಾರೆ.
ಭಾರತದ ಮೂಲದ ಮಹಿಳೆ ಕೃತಿಕಾ ಜೈನ್ ಅವರು ತಾವು ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಖಾಲಿ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ; ಶಾಂತ ಮತ್ತು ನಿರ್ಜನ ಬೀದಿಗಳು, ಶಾಂತಿಯುತ ವಾತಾವರಣ ಹಾಗೂ ಜೈನ್ ಅವರು ಯಾವುದೇ ಭಯದ ಗೋಚರತೆ ಇಲ್ಲದೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.
“ಸಿಂಗಾಪುರದಲ್ಲಿ, ತಾನು ಬೆಳಗಿನ ಜಾವ 3 ಗಂಟೆಗೆ ಒಂಟಿಯಾಗಿ ನಡೆದುಕೊಂಡು ಮನೆಗೆ ಬರಲು ಸಾಧ್ಯವಾಯಿತು. ಭಯ ಅಥವಾ ಹಿಂಜರಿಕೆಯಿಲ್ಲದೆ ಆರಾಮದಾಯವಾಗಿ ನಡೆದುಕೊಂಡು ಬಂದಿದ್ದೇನೆ. ಭಯದಿಂದ ಹಿಂತಿರುಗಿ ನೋಡುವ ಅಗತ್ಯವಿರಲಿಲ್ಲ. ಆದರೆ, ಭಾರತದಲ್ಲಿ ಇಷ್ಟು ತಡರಾತ್ರಿಯಲ್ಲಿ ಒಂಟಿಯಾಗಿ ಹೊರಗೆ ಹೋಗುವುದನ್ನು ಊಹಿಸಲೂ ಸಾಧ್ಯವಿಲ್ಲ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಜೈನ್ ಪ್ರಕಾರ, ರಾತ್ರಿಯಲ್ಲಿ ಒಂಟಿಯಾಗಿ ನಡೆಯುವುದು ಸಿಂಗಾಪುರದಲ್ಲಿ ಸಾಮಾನ್ಯ. ಅದನ್ನು ಒಂದು ಸವಲತ್ತು ಎಂದು ನೋಡಲಾಗುವುದಿಲ್ಲ. ಬದಲಿಗೆ, ಇದು ದೈನಂದಿನ ಜೀವನದ ನೈಸರ್ಗಿಕ ಭಾಗವಾಗಿದೆ. ಈ ಭದ್ರತಾ ಪ್ರಜ್ಞೆಯು ಮಹಿಳೆಯರಿಗೆ ತುಂಬಾ ಮುಖ್ಯ. ಇದನ್ನು ಎಂದಿಗೂ ಹಗುರವಾಗಿ ಪರಿಗಣಿಸಲಾಗದು. ಸಿಂಗಾಪುರದ ಮೇಲಿನ ಪ್ರೀತಿಯು ಅದರ ಎತ್ತರದ ಕಟ್ಟಡಗಳ ಕಾರಣಕ್ಕಾಗಿಯಲ್ಲ, ಅಲ್ಲಿನ ಸುರಕ್ಷಿತ ಪರಿಸರದಿಂದ ಕಾರಣಕ್ಕಾಗಿ ಬೆಳೆಯುತ್ತದೆ.
ಅವರ ಪೋಸ್ಟ್‌ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಅಲ್ಲಿ 1 ತಿಂಗಳು ವಾಸಿಸುತ್ತಿದ್ದೇನೆ. ಇದು ಅದ್ಭುತವಾದ ಸ್ಥಳವಾಗಿದ್ದರೂ ದುಬಾರಿಯೂ ಆಗಿದೆ. ಆದರೆ, ಅಲ್ಲಿನ ಜನರ ನಾಗರಿಕ ಪ್ರಜ್ಞೆ ಅದ್ಭುತವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಇದು ನಿಜ. ನಾನು ಮಧ್ಯರಾತ್ರಿಯಲ್ಲಿ ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ಹೋಗುತ್ತಿದ್ದೆ… ಸಿಂಗಾಪುರ ರಾತ್ರಿಯಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬ ಅನುಭವ ನನಗೂ ಆಯಿತು” ಎಂದಿದ್ದಾರೆ.




