ಅಮೆರಿಕವನ್ನು ನಾಶಮಾಡುವ ಗುರಿಯ ಬಗ್ಗೆ ಇರಾನ್ ನಾಯಕತ್ವವು ಮತಾಂಧ ನಿಲುವು ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಇರಾನ್ ಕೆಲವೇ ತಿಂಗಳುಗಳಲ್ಲಿ ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳನ್ನು ದಾಳಿ ಮಾಡಲು ಅಸಾಧ್ಯವಾಗುವ ರೀತಿಯಲ್ಲಿ ರೂಪಿಸುತ್ತಿತ್ತು. ಅದನ್ನು ತಡೆಯಲು ಉದ್ದೇಶದಿಂದ ಈ ದಾಳಿ ನಡೆದಿದೆ” ಎಂದು ಹೇಳಿದ್ದಾರೆ.
“ನಾವು ಅವರ ಪರಮಾಣು ತಾಣಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗಳಿಗೆ ಈ ಹಿಂದೆ ಹೊಡೆತ ನೀಡಿದ್ದೆವು. ಅದರಿಂದ, ಅವರು ಪಾಠ ಕಲಿಯುತ್ತಾರೆಂದು ಭಾವಿಸಿದ್ದೇವೆ. ಆದರೆ, ಅವರು ಪಾಠ ಕಲಿತಿಲ್ಲ” ಎಂದು ನೆತನ್ಯಾಹು ಹೇಳಿದ್ದಾರೆ.
“ಇರಾನ್ ಹೊಸ ತಾಣಗಳು, ರಹಸ್ಯ ಕೇಂದ್ರಗಳು ಹಾಗೂ ಭೂಗತ ಬಂಕರ್‌ಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕ್ರಮಗಳ ಮೂಲಕ ಅವರ ಕ್ಷಿಪಣಿ ಮತ್ತು ಪರಮಾಣು ಬಾಂಬ್ ಯೋಜನೆಗಳ ಮೇಲೆ ಯಾರೂ ದಾಳಿ ಮಾಡಲು ಸಾಧ್ಯವಾಗದಂತೆ ಮಾಡಿಕೊಳ್ಳಲು ಇರಾನ್ ಪ್ರಯತ್ನಿಸಿದೆ” ಎಂದು ಹೇಳಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ಆರಂಭಿಸಿದವು. ಭಾನುವಾರ, ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇರಾನ್‌ನಲ್ಲಿ ಅಪಾರ ಸಾವು-ನೋವುಗಳು ಸಂಭವಿಸಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕದ ವಾಯು ನೆಲೆಗಳಾಗಿರುವ ಸೌದಿ ಅರೇಬಿಯಾ, ಯುಎಇ, ಅಬುಧಾಬಿ, ಕತಾರ್ ಹಾಗೂ ಬಹ್ರೇನ್ ಮೇಲೆ ದಾಳಿ ನಡೆದಿದೆ. ಇಡೀ, ಮಧ್ಯಪ್ರಾಚ್ಯ ಯುದ್ಧದ ದಾಳಿಗಳಲ್ಲಿ ಮುಳುಗಿದೆ.




