ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್‌ನ ಅತ್ಯಾಧುನಿಕ ರಕ್ಷಣಾ ಕವಚ ‘ಇಂಟರ್‌ಸೆಪ್ಟರ್’ಅನ್ನು ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸಿದೆ. ದಾಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಡಿಮೋನಾದ ನೆಗೆವ್ ಮರುಭೂಮಿಯಲ್ಲಿರುವ ಇಸ್ರೇಲ್‌ನ ಆಯಕಟ್ಟಿನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ನಗರದ ಹಲವು ಭಾಗಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸಾವಿನ ಸಂಖ್ಯೆ 50 ದಾಟಿದೆ.
ದಾಳಿಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
“ಇರಾನ್‌ನ ‘ನಟಾಂಜ್’ ಪರಮಾಣು ಸೌಲಭ್ಯದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ, ಪ್ರತಿಕಾರವಾಗಿ ಈ ದಾಳಿ ನಡೆದಿದೆ” ಎಂದು ಇರಾನ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ, ನಟಾಂಜ್ ಮೇಲಿನ ದಾಳಿಯಲ್ಲಿ ತನ್ನ ಪಾತ್ರವಿಲ್ಲ, ಅದು ಅಮೆರಿಕ ನಡೆಸಿದ ಕಾರ್ಯಾಚರಣೆ ಎಂದು ಇಸ್ರೇಲ್ ವಾದಿಸಿದೆ.
ಆದಾಗ್ಯೂ, ಇತ್ತೀಚೆಗೆ ಟೆಹ್ರಾನ್ ವಿಶ್ವವಿದ್ಯಾಲಯದ ಪರಮಾಣು ಶಸ್ತ್ರಾಸ್ತ್ರ ಸಂಶೋಧನಾ ಕೇಂದ್ರದ ಮೇಲೆ ನಡೆದ ದಾಳಿಯನ್ನು ಇಸ್ರೇಲ್ ಒಪ್ಪಿಕೊಂಡಿರುವುದು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.




