ಅನೇಕ ದಶಕಗಳಿಂದಲೂ ಇರಾನ್ ಅಮೆರಿಕದ ಬದ್ಧವೈರಿ. ಆದ್ದರಿಂದ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಪ್ರತಿಭಟನೆಯ ಉದ್ವಿಗ್ನತೆಗೆ ನೇರ ಕಾರಣ. ಅಮೆರಿಕವನ್ನು ಮೆಚ್ಚಿಸಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಖಮೇನಿ ಆಡಳಿತ ಹೇಳಿದೆ. ಪ್ರತಿಭಟನೆಯೂ ಧರ್ಮವಿರೋಧಿ ನಡೆ. ಇಲ್ಲಿಗೆ ನಿಲ್ಲಿಸದೆ ಹೋದರೆ ಗಲ್ಲಿಗೇರಿಸಲಾಗುವುದು ಎಂದು ಇರಾನ್ ಅಟಾರ್ನಿ ಜನರಲ್ ಹೇಳಿದ್ದಾರೆ.
ಇರಾನ್ ನಲ್ಲಿ ಎರಡು ವಾರಗಳ ಹಿಂದೆಯೇ ಆರಂಭವಾದ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 2000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಯೊಬ್ಬರು ತಿಳಿಸಿರುವ ಕುರಿತು ರಾಯಿಟರ್ಸ್ ವರದಿ ಮಾಡಿದೆ.
ಈಗಾಗಲೇ ಪ್ರತಿಭಟನೆಗಳು ತೀವ್ರಗೊಂಡಿವೆ. ಇರಾನ್ ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತದ ವಿರುದ್ಧ ಶುರುವಾದ ಪ್ರತಿಭಟನೆಗಳು ಆಂದೋಲನದ ಸ್ವರೂಪ ಪಡೆದುಕೊಂಡಿವೆ. ರಾಜಕೀಯ ಅಸ್ಥಿರತೆ, ಹಣದುಬ್ಬರ, ಜೀವನ ವೆಚ್ಚ ದುಬಾರಿಯ ವಿರುದ್ಧ ನಡೆಯುತ್ತಿರುವ ಹೋರಾಟಗಳಿಂದ ಸಂಪೂರ್ಣ ದೇಶವೇ ಹೊತ್ತಿ ಉರಿಯುತ್ತಿದೆ.
ದಿನದಿಂದ ದಿನಕ್ಕೆ ಇರಾನ್ ಉದ್ವಿಗ್ನ ಸ್ಥಿತಿಗೆ ತಲುಪುತ್ತಿದೆ. ದೇಶದ ರಾಜಧಾನಿ ಟೆಹ್ರಾನ್ ಸೇರಿದಂತೆ ಎಲ್ಲಾ 31 ಪ್ರಾಂತ್ಯಗಳಲ್ಲಿಯೂ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ಪ್ರಮುಖ ನಗರಗಳಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ಖಮೇನಿ ಆಡಳಿತವು ಪ್ರತಿಭಟನಾಕಾರರ ಮೇಲೆ ಗುಂಡಿಕ್ಕಲು ಆದೇಶ ನೀಡಿದೆ. ಕಳೆದ ವರ್ಷ ಡಿಸೆಂಬರ್ 28ರಂದು ಆರಂಭವಾದ ಪ್ರತಿಭಟನೆಗಳು ಸದ್ಯ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಅಮೆರಿಕವು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡೂರೊ ಅವರನ್ನು ಜನವರಿ 3ರಂದು ಅಪಹರಿಸಿದ ನಂತರ, ಇರಾನ್ ಪ್ರತಿಭಟನಾಕಾರರಿಗೆ ಧೈರ್ಯ ಬಂದಂತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಇರಾನ್ ಸ್ವಾತಂತ್ರ್ಯ ಪಡೆಯಲು ಬಯಸಿದರೆ ಪ್ರತಿಭಟನಾಕಾರರಿಗೆ ಸೇನೆಯಿಂದ ರಕ್ಷಣೆ ಕೊಡಲಾಗುವುದು ಎಂದಿದ್ದಾರೆ.
ಆಡಳಿತದ ವಿರುದ್ಧ ಮಾಡುತ್ತಿರುವ ಪ್ರತಿಭಟನಾಕಾರರನ್ನು ಗಲ್ಲಿಗೇರಿಸಲಾಗುವುದು ಎಂದು ಇರಾನ್‌ನ ಎಚ್ಚರಿಕೆ ಬೆನ್ನಲ್ಲೇ, ಹಾಗೇನಾದರೂ ಮಾಡಿದರೆ ಅಮೆರಿಕ ಸೈನ್ಯದಿಂದ ಉತ್ತರ ನೀಡಲಾಗುವುದು ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದು ಅಮೆರಿಕ ಮಿಲಿಟರಿ ಮಧ್ಯಪ್ರವೇಶದ ಮುನ್ಸೂಚನೆಯಂತೆ ಕಾಣುತ್ತಿದೆ. ಪ್ರತಿಭಟನಾಕಾರರ ಜೊತೆ ಅಮೆರಿಕ ಇರುತ್ತದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಇದನ್ನು ಓದಿ : ಇರಾನ್ ಪ್ರತಿಭಟನೆ : ಭದ್ರತಾ ಸಿಬ್ಬಂದಿ ಸೇರಿದಂತೆ 2000 ಜನರ ಸಾವು
ಇರಾನ್ ನಲ್ಲಿನ ಪ್ರತಿಭಟನೆಯನ್ನು ಹತ್ತಿಕ್ಕಲು ವಿದ್ಯುತ್ ಸ್ಥಗಿತ, ಇಂಟರ್ನೆಟ್ ಸಂಪರ್ಕ ಕಡಿತ ಸೇರಿದಂತೆ ಸಾಧ್ಯವಿರುವ ಎಲ್ಲಾ ಕೆಲಸಗಳನ್ನು ಖಮೇನಿ ಆಡಳಿತ ಮಾಡುತ್ತಿದೆ. ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಕೇವಲ ಭದ್ರತಾ ಸಿಬ್ಬಂದಿ ಮಾತ್ರವಲ್ಲದೇ, ಸಾವಿರಾರು ಪ್ರತಿಭಟನಾಕಾರರನ್ನು ಕೊಲ್ಲಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಹತ್ಯಾಕಾಂಡದಿಂದ ಜಗತ್ತೇ ಬೆಚ್ಚಿ ಬಿದ್ದಿದೆ. ಇದನ್ನು ತಡೆಯುವಲ್ಲಿ ಜಾಗತಿಕ ಶಕ್ತಿಗಳು ಮುಂದೆ ಬರಬೇಕು ಎಂದು ಅಮೆರಿಕ ಬೆಂಬಲಿತ ‘ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಇನ್ ಇರಾನ್’ (ಸಿಎಚ್ಆರ್ಐ) ಮನವಿ ಮಾಡಿದೆ.
ಇರಾನ್ ನಲ್ಲಿ ಬಹುತೇಕ ಶಿಯಾ ಮುಸ್ಲಿಮರಿದ್ದಾರೆ. ಹಲವು ದಶಕಗಳಿಂದ ಇರಾನ್ ನಲ್ಲಿರುವುದು ಧಾರ್ಮಿಕ ಪ್ರಭುತ್ವ. ಪರಮೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಒಬ್ಬ ಧರ್ಮಗುರು. ದೇವರ ಹೆಸರಿನಲ್ಲಿ ನಡೆಯುವ ಆಡಳಿತವೇ ಇರಾನ್ ನಲ್ಲಿರುವುದು. ಮೊದಲ ಬಾರಿಗೆ ದೇವಪ್ರಭುತ್ವದ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಈ ಪ್ರತಿಭಟನೆಯಿಂದ ಖಮೇನಿ ಆಡಳಿತ ಯಾವ ಕ್ಷಣದಲ್ಲಾದರೂ ಕುಸಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಅಸ್ಥಿರತೆ ಹಾಗೂ ಆರ್ಥಿಕತೆ ವಿಫಲಗೊಳ್ಳುತ್ತಿರುವುದೇ ಪ್ರತಿಭಟನೆಗೆ ಕಾರಣವೆಂದು ಗುರುತಿಸಲಾಗಿದೆ. ಖಮೇನಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮ ಗುರಿ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ.
ಇತ್ತೀಚಿಗೆ ಇರಾನ್ ಜೊತೆ ವಾಣಿಜ್ಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ಜೊತೆ ನಡೆಸುವ ಎಲ್ಲ ವ್ಯಾಪಾರಗಳ ಮೇಲೆ ಶೇ.25ರಷ್ಟು ಸುಂಕ ಕೊಡಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯೂ ಘೋಷಣೆಯಾಗಿ ಮಾರ್ಪಟ್ಟು ‘ಈ ಸುಂಕ ತಕ್ಷಣದಿಂದಲೇ ಜಾರಿಗೆ ಬರಲಿದೆ’ ಎಂದು ಟ್ರೂಥ್ ಸೋಷಿಯಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ನಲ್ಲಿ ಮತ್ತಷ್ಟು ಆರ್ಥಿಕತೆ ಕುಸಿಯುವಿಕೆಗೆ ಅಮೆರಿಕ ಟೊಂಕಕಟ್ಟಿ ನಿಂತಿದೆ.
ಅನೇಕ ದಶಕಗಳಿಂದಲೂ ಇರಾನ್ ಅಮೆರಿಕದ ಬದ್ಧವೈರಿ. ಆದ್ದರಿಂದ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಪ್ರತಿಭಟನೆಯ ಉದ್ವಿಗ್ನತೆಗೆ ನೇರ ಕಾರಣ. ಅಮೆರಿಕವನ್ನು ಮೆಚ್ಚಿಸಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಖಮೇನಿ ಆಡಳಿತ ಹೇಳಿದೆ. ಪ್ರತಿಭಟನೆಯೂ ಧರ್ಮವಿರೋಧಿ ನಡೆ. ಇಲ್ಲಿಗೆ ನಿಲ್ಲಿಸದೆ ಹೋದರೆ ಗಲ್ಲಿಗೇರಿಸಲಾಗುವುದು ಎಂದು ಇರಾನ್ ಅಟಾರ್ನಿ ಜನರಲ್ ಹೇಳಿದ್ದಾರೆ.
ನೇಪಾಳ ಹಾಗೂ ಬಾಂಗ್ಲಾದೇಶದಂತೆ ಇಲ್ಲಿಯೂ ಸರ್ಕಾರ ಪತನಗೊಳ್ಳುವ ಸಾಧ್ಯತೆಯಿದೆ. ಅಮೆರಿಕ ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಬೆಂಬಲಿಸಿದರೆ ಖಮೇನಿ ರಷ್ಯಾಕ್ಕೆ ಪಲಾಯನ ಮಾಡಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರತಿಭಟನೆಗೆ ರೆಝಾ ಪಹ್ಲವಿ ಬೆಂಬಲ
ಹಲವು ವರ್ಷಗಳು ಇರಾನ್‌ನಲ್ಲಿ ರಾಜಪ್ರಭುತ್ವ ಆಡಳಿತ ನಡೆಸುತ್ತಿತ್ತು. ಅಲ್ಲಿನ ದೊರೆಯನ್ನು ‘ಶಾ’ ಎಂದು ಕರೆಯುತ್ತಿದ್ದರು. 1979ರಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇಸ್ಲಾಂ ಕ್ರಾಂತಿ ನಡೆಯುತ್ತದೆ. ಕ್ರಾಂತಿಯ ವೇಳೆ ಇರಾನ್ ಶಾ ಆಗಿದ್ದವರು ಮೊಹಮ್ಮದ್ ರೆಝಾ ಪಹ್ಲವಿ. ಇವರೇ ಇರಾನಿನ ಕೊನೆಯ ಶಾ ಆಗಿದ್ದಾರೆ. ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಅವರು ಇಸ್ಲಾಂ ಕ್ರಾಂತಿಯ ಪರಿಣಾಮವಾಗಿ 11 ಫೆಬ್ರವರಿ 1979ರಂದು ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಅದಾಗಿ ಒಂದು ವರ್ಷದ ನಂತರ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟರು. ಅವರ ಮಗ ರೆಝಾ ಪಹಲವಿ ಅಮೆರಿಕದ ವಾಷಿಂಗ್ಟನ್ ನಲ್ಲಿ ನೆಲೆಸಿದ್ದಾರೆ.
ಇಸ್ಲಾಂ ಕ್ರಾಂತಿ ನಡೆಯುವ ವೇಳೆ 17 ವರ್ಷದ ಬಾಲಕನಾಗಿದ್ದ ರೆಝಾ ಪಹಲವಿ, ತಮ್ಮ ಮಾತೃಭೂಮಿಯಾದ ಇರಾನ್ ನಲ್ಲಿ ಪ್ರತಿಭಟನೆಗಳು ನಡೆದಾಗಲೆಲ್ಲ ಬೆಂಬಲಕ್ಕೆ ಬರುತ್ತಾರೆ. ಈಗ 65 ವರ್ಷದ ಪಹಲವಿ ಮತ್ತೆ ಇರಾನ್ ಗೆ ಮರಳುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ. ಸ್ವದೇಶದ ಜನರು ಬದಲಾವಣೆಯನ್ನು ಬಯಸಿ ನಡೆಸುತ್ತಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಇರಾನ್ ನಲ್ಲಿ ಪ್ರತಿಭಟನೆಯಿಂದ ಸಾಯುತ್ತಿರುವವರ ಪರ ಜಾಗತಿಕ ಶಕ್ತಿಗಳು ಮಾತನಾಡಬೇಕಿದೆ ಎಂದು ಮನವಿ ಮಾಡಿದ್ದಾರೆ.
2022ರಲ್ಲಿ ನಡೆದ ಪ್ರತಿಭಟನೆಗೂ ರೆಝಾ ಪಹಲವಿ ಬೆಂಬಲ ಸೂಚಿಸಿದ್ದರು. ಪೈಲಟ್ ತರಬೇತಿಗಾಗಿ ಅಮೆರಿಕದ ಟೆಕ್ಸಾಸ್‌ಗೆ ತೆರಳಿದ್ದ ರೆಝಾ ಅವರು ಮಾತೃಭೂಮಿಗೆ ಮರಳುವ ನಿರೀಕ್ಷೆಯಿದೆ. ಪ್ರಸ್ತುತ ಪ್ರತಿಭಟನೆಯನ್ನು ದೃಢವಾಗಿ ಬೆಂಬಲಿಸಿದ್ದು, “ಇಸ್ಲಾಮಿಕ್ ಗಣರಾಜ್ಯ ಕುಸಿದರೆ ಹೊಸ ಸರ್ಕಾರವನ್ನು ಮುನ್ನಡೆಸಲು ನಾನು ಸಿದ್ಧನಿದ್ದೇನೆ” ಎಂದು ಪ್ಯಾರಿಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.
ಈಗಾಗಲೇ ಮಧ್ಯಂತರ ಸರ್ಕಾರಕ್ಕೆ ಇರಾನ್ ಜನರು ಮನಸ್ಸು ಮಾಡಿದರೆ, 100 ದಿನಗಳ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದ್ದಾರೆ. ‘ನಮ್ಮ ತಂದೆ ಬಿಟ್ಟುಹೋದ ಅನೇಕ ಕೆಲಸಗಳನ್ನು ಮುಂದುವರೆಸುವ ಜೊತೆಗೆ, ಇರಾನ್‌ನಲ್ಲಿ ಪ್ರಜಾಪ್ರಭುತ್ವ ನಿರ್ಮಿಸುವುದಾಗಿ’ ಭರವಸೆ ನೀಡಿದ್ದಾರೆ.
ದಶಕಗಳ ಕಾಲ ಸ್ವದೇಶದಿಂದ ದೂರವಿದ್ದ ಪಹಲವಿ ಅವರನ್ನು ಇರಾನ್ ಜನರು ಬೆಂಬಲಿಸಲಿದ್ದಾರೆ ಎಂದು ಹೇಳುವುದು ಕಷ್ಟ. ಪ್ರತಿಭಟನಾಕಾರರಿಗೆ ಖಮೇನಿ ಸರ್ಕಾರ ಕಿತ್ತೊಗೆಯುವುದೊಂದೆ ಗುರಿಯಾಗಿದೆ. ಇದನ್ನು ಹೊರತುಪಡಿಸಿ ಪ್ರತಿಭಟನಾಕಾರರು ಮುಂದಿನ ಆಡಳಿತದ ಬಗ್ಗೆ ಯಾವುದೇ ನಿಲುವು ತೆಗೆದುಕೊಂಡಿಲ್ಲ.
ದೇವಪ್ರಭುತ್ವ ಕೊನೆಗಾಣುವ ಸಾಧ್ಯತೆ
1979ರಂದು ಇರಾನ್ ನಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದು ದೇವಪ್ರಭುತ್ವ ಆಡಳಿತಕ್ಕೆ ಬಂದಿತು. ಮೊದಲ ಧರ್ಮಗುರು ರುಹೊಲ್ಲಾ ಖೊಮೀನಿ. ಖೊಮೀನಿ ನಡೆಸಿದ ಇಸ್ಲಾಂ ಕ್ರಾಂತಿಯಿಂದ ರಾಜಪ್ರಭುತ್ವ ಕೊನೆಗೊಂಡಿತು. ಅಂದಿನಿಂದ ಇರಾನ್, ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್’ ಆಯಿತು.
ಇರಾನ್ ನ ಅಧ್ಯಕ್ಷರಿಗೆ ‘ಆಯಾತೊಲ್ಲಾ’ ಎಂಬ ಧಾರ್ಮಿಕ ಪದವಿ ನೀಡಲಾಗುತ್ತದೆ. ಇವರೇ ಇರಾನಿನ ಪರಮೋಚ್ಚ ನಾಯಕರಾಗಿರುತ್ತಾರೆ. 1987ರ ಜೂನ್ 3 ರಂದು ಮೊದಲ ಸರ್ವೋಚ್ಚ ನಾಯಕ ರುಹೊಲ್ಲಾ ಖೊಮೀನಿ ಮರಣ ಹೊಂದಿದ ಬಳಿಕ, ಈಗಿನ ಆಯತೊಲ್ಲಾ ಖಮೇನಿ (ಸೈಯದ್ ಅಲಿ ಹುಸ್ಸೈನ್ ಖಮೇನಿ) ಪರಮೋಚ್ಚ ನಾಯಕರಾಗಿ ಆಯ್ಕೆಯಾಗುತ್ತಾರೆ. ಕಳೆದ 36 ವರ್ಷಗಳಿಂದ ಇವರೇ ಇರಾನಿನ ಸಂಪೂರ್ಣ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
ರುಹೊಲ್ಲಾ ಖೊಮೀನಿ ಆಡಳಿತವು ಇಸ್ಲಾಂ ಧಾರ್ಮಿಕ ನಿಯಮಗಳ ಆಧಾರದಲ್ಲಿ ಜನರ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲು ಆರಂಭಿಸಿದರು. ಅಧಿಕಾರಕ್ಕೆ ಬಂದ ಎರಡೇ ವಾರಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯಗೊಳಿಸಿತು. ಆಗಲೂ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆದರೆ ಧಾರ್ಮಿಕ ಆಡಳಿತವು ಇಲ್ಲಿಯವರೆಗೂ ನಡೆದ ಪ್ರತಿಭಟನೆಗಳನ್ನೆಲ್ಲ ಹತ್ತಿಕ್ಕುತ್ತಾ ಬಂದಿದೆ.
ಈಗಿನ ಸರ್ವೋಚ್ಚ ನಾಯಕ ಖಮೇನಿ ಆಡಳಿತವು ಸಹ ಮಹಿಳೆಯರ ಮೇಲೆ ಧಾರ್ಮಿಕ ನಿಯಮಗಳನ್ನು ಹೇರಿದೆ. 2022ರ ಸೆಪ್ಟೆಂಬರ್ ನಲ್ಲಿ ಖುರ್ದಿಷ್ ಪ್ರಾಂತ್ಯದ ಮಹ್ಸಾ ಅಮಿನಿ ಎಂಬ ಮಹಿಳೆ ಇರಾನ್ ರಾಜಧಾನಿ ಟೆಹ್ರಾನ್‌ಗೆ ಬಂದಿದ್ದಳು. ಆಕೆ ಹಿಜಾಬ್ ಧರಿಸಿರಲಿಲ್ಲ. ಇರಾನ್ ನಲ್ಲಿರುವ ವಸ್ತ್ರಸಂಹಿತೆ ಪ್ರಕಾರ ಮಹಿಳೆಯರು ಹಿಜಾಬ್ ಧರಿಸದೇ ಹೊರಗೆ ಬರುವುದು ಅಪರಾಧ. ಇರಾನ್ ಧಾರ್ಮಿಕ ಪೊಲೀಸರು ಅಮಿನಿಯನ್ನು ಬಂಧಿಸಿದರು. ಆಕೆಯ ಮೇಲೆ ಹಲ್ಲೆ ನಡೆಸಲಾಯಿತು. ಆಸ್ಪತ್ರೆಗೆ ದಾಖಲಾದ ಅಮಿನಿ ಸೆಪ್ಟೆಂಬರ್ 16 ಎಂದು ಮೃತಪಟ್ಟಳು.
ಆಗಲೂ ಪ್ರತಿಭಟನೆಗಳು ನಡೆದವು. ಅವು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಖಮೇನಿ ಆಡಳಿತ ಆಗಿನ ಪ್ರತಿಭಟನಾಕಾರರನ್ನು ಬಂಧಿಸಿತ್ತು. ಆದರೆ, ಈಗ ನಡೆಯುತ್ತಿರುವ ಪ್ರತಿಭಟನೆಯಿಂದ ಕೊನೆಗೊಳ್ಳುವುದೇ ಖಮೇನಿ ಆಡಳಿತ?.





