ಭಾರತದಿಂದ ಹಿಂದಿರುಗುತ್ತಿದ್ದ ಇರಾನ್ ನೌಕಾಪಡೆಗೆ ಸೇರಿದ ‘ಐಆರ್‌ಐಎಸ್ ಡೆನಾ’ ಯುದ್ಧನೌಕೆಯೊಂದು ಶ್ರೀಲಂಕಾ ಕರಾವಳಿ ಸಮೀಪ ಬುಧವಾರ ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ ಸುಮಾರು 140ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಡಗಿನಿಂದ ತುರ್ತು ಸಂದೇಶ ಸ್ವೀಕರಿಸಿದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಶ್ರೀಲಂಕಾ ನೌಕಾಪಡೆ 32 ಜನರನ್ನು ರಕ್ಷಿಸಿದೆ.
ಸುಮಾರು 180 ಸಿಬ್ಬಂದಿಯನ್ನು ಒಳಗೊಂಡಿದ್ದ ಮೌಡ್ಜ್-ಕ್ಲಾಸ್ ಶ್ರೇಣಿಯ ಈ ಯುದ್ಧನೌಕೆಯು, ಶ್ರೀಲಂಕಾದ ದಕ್ಷಿಣಕ್ಕೆ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿರುವ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಮುಳುಗಡೆಯಾಗಿದೆ. ಹಡಗು ಮುಳುಗಡೆಗೆ ನಿಖರ ಕಾರಣ ತಿಳಿದುಬಂದಿಲ್ಲ. ದಾಳಿ, ತಾಂತ್ರಿಕ ದೋಷ ಅಥವಾ ಸಮುದ್ರದಲ್ಲಿನ ಬೇರಾವುದೇ ಅವಘಡದಿಂದ ಈ ದುರಂತ ಸಂಭವಿಸಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಇನ್ನೂ ಸ್ಪಷ್ಟನೆ ನೀಡಿಲ್ಲ.
“ಮುಳುಗಡೆಯಾದ ಹಡಗಿನಿಂದ ಈವರೆಗೆ 32 ಜನರನ್ನು ರಕ್ಷಿಸಲಾಗಿದ್ದು, ದಕ್ಷಿಣದ ಬಂದರು ನಗರವಾದ ಗಾಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಮುದ್ರದಿಂದ ಕೆಲವು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ” ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಶ್ರೀಲಂಕಾ ಸೋಲಿನ ಬೆನ್ನಲ್ಲೇ ಮುಖ್ಯ ಕೋಚ್ ಹುದ್ದೆ ತೊರೆದ ಸನತ್ ಜಯಸೂರ್ಯ
ಶ್ರೀಲಂಕಾದ ಜಲಗಡಿಯಾಚೆ ಈ ಘಟನೆ ನಡೆದಿದ್ದರೂ, ತುರ್ತು ಸಂದೇಶ ಬಂದ ತಕ್ಷಣವೇ ಶ್ರೀಲಂಕಾ ನೆರವಿಗೆ ಧಾವಿಸಿದೆ ಎಂದು ವಿದೇಶಾಂಗ ಸಚಿವ ವಿಜಿತಾ ಹೆರಾತ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಶ್ರೀಲಂಕಾ ನೌಕಾಪಡೆ ಹಾಗೂ ವಾಯುಪಡೆ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಭಾರತದಲ್ಲಿ ಇತ್ತೀಚೆಗೆ ನಡೆದ ‘ಇಂಟರ್‌ನ್ಯಾಷನಲ್ ಫ್ಲೀಟ್ ರಿವ್ಯೂ 2026’ ದಲ್ಲಿ ಪಾಲ್ಗೊಂಡು ತಾಯ್ನಾಡಿಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಮುಳುಗಡೆಯಾಗುವ ಎರಡು ವಾರಗಳ ಹಿಂದಷ್ಟೇ ಭಾರತದ ಪೂರ್ವ ನೌಕಾ ಕಮಾಂಡ್ ಈ ಇರಾನ್ ನೌಕೆಯನ್ನು ಸ್ವಾಗತಿಸಿತ್ತು.
ಜಲಾಂತರ್ಗಾಮಿ ನೌಕೆಯೊಂದು ದಾಳಿ ಮಾಡಿದ್ದರಿಂದ ಹಡಗು ಮುಳುಗಡೆಯಾಗಿದೆ ಮತ್ತು 101 ಜನರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳನ್ನು ಶ್ರೀಲಂಕಾ ನೌಕಾಪಡೆಯ ವಕ್ತಾರರು ತಳ್ಳಿಹಾಕಿದ್ದಾರೆ. “ಹಡಗು ಮುಳುಗಡೆಗೆ ಕಾರಣಗಳ ಕುರಿತು ಹರಿದಾಡುತ್ತಿರುವ ವರದಿಗಳನ್ನು ನಾವು ನಿರಾಕರಿಸುತ್ತೇವೆ. ಪ್ರಸ್ತುತ ನಮ್ಮ ಮೊದಲ ಆದ್ಯತೆ ಜೀವ ರಕ್ಷಣೆಯಾಗಿದೆ. ಘಟನಾ ಸ್ಥಳದ ಆಸುಪಾಸಿನಲ್ಲಿ ಯಾವುದೇ ಬೇರೆ ಹಡಗು ಅಥವಾ ವಿಮಾನಗಳ ಹಾರಾಟ ಕಂಡುಬಂದಿಲ್ಲ” ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.





