ಇರಾನ್‌ನ ಕ್ಷಿಪಣಿ ಶಕ್ತಿ, ಮಧ್ಯಪ್ರಾಚ್ಯದಲ್ಲಿ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ವಿಶೇಷವಾಗಿ, ಅಮೆರಿಕ ಮತ್ತು ಇಸ್ರೇಲ್‌ಗಳ ಸೈನಿಕ ಒತ್ತಡದ ನಡುವೆಯೂ, ಇರಾನ್ ತನ್ನ ‘ಅಸಮಾನ ಯುದ್ಧ ತಂತ್ರ’ದ (Asymmetrical Warfare) ಭಾಗವಾಗಿ ದೀರ್ಘ ವ್ಯಾಪ್ತಿಯ ಮತ್ತು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಮಿಸಿದೆ. ಸಣ್ಣ ವ್ಯಾಪ್ತಿಯ ಕ್ಷಿಪಣಿ ಫತೇಹ್-110(ಸುಮಾರು 300 ಕಿಮೀ), ಜೋಲ್ಫಘಾರ್ (700 ಕಿಮೀ), ಮತ್ತು 1,300–2,000 ಕಿಮೀ ವ್ಯಾಪ್ತಿಯ ಮಧ್ಯಮ ಕ್ಷಿಪಣಿ ಶಹಾಬ್-3, ಸುಮಾರು 2,000–2,500 ಕಿಮೀ ವ್ಯಾಪ್ತಿಯ ಸೆಜ್ಜಿಲ್ ಮತ್ತು ಸುಮಾರು 2,000–3,000 ಕಿಮೀ ವ್ಯಾಪ್ತಿಯ ಖೊರಂಶಹರ್ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿಟ್ಟುಕೊಂಡಿದೆ. ಅಂದರೆ, ಸುಮಾರು 2,000–3,000 ಕಿಮೀ ವ್ಯಾಪ್ತಿಯೊಳಗಿನ ಬಹುತೇಕ ಎಲ್ಲ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳ ಸೈನಿಕ ನೆಲೆಗಳು ಇರಾನ್‌ನ ಕ್ಷಿಪಣಿಗಳ ವ್ಯಾಪ್ತಿಯಲ್ಲಿವೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್ ದೇಶದ ಅತ್ಯಂತ ಅಗ್ಗದ ಡೋನ್ ಶಾಹಿದ್ ಸರಣಿಯ Shahed-136, Shahed-131 ಡ್ರೋನ್‌ಗಳು ಮಹತ್ವದ ಪಾತ್ರ ವಹಿಸಿವೆ. ಇವು ಕಡಿಮೆ ವೆಚ್ಚದಲ್ಲಿ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿರುವುದರಿಂದ, ಇರಾನ್ ವಿಶ್ವದ ಪ್ರಮುಖ ಡ್ರೋನ್ ತಂತ್ರಜ್ಞಾನ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
ಜೂನ್ 2025ರಲ್ಲಿ ಇರಾನ್ 12 ದಿನಗಳ ಅವಧಿಯಲ್ಲಿ ಇಸ್ರೇಲ್ ಕಡೆಗೆ 1,000ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ದಾಳಿಗಳು ದೊಡ್ಡ ಪ್ರಮಾಣದ ಗುಂಪುಗಳಲ್ಲಿ ನಡೆದ ಕಾರಣ, ಇಸ್ರೇಲ್ ಮತ್ತು ಅಮೆರಿಕಾದ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಭಾರೀ ಒತ್ತಡ ಉಂಟಾಯಿತು. ಇಸ್ರೇಲ್‌ನ ಬಹುಪದರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಕೆಲವು ಕ್ಷಿಪಣಿಗಳನ್ನು ತಡೆದರೂ, ಗಣನೀಯ ಸಂಖ್ಯೆಯ ಕ್ಷಿಪಣಿಗಳು ರಕ್ಷಣೆಯನ್ನು ಭೇದಿಸಿ ಗುರಿಗಳನ್ನು ತಲುಪಿದವು.
ಈ ಲೇಖನ ಓದಿದ್ದೀರಾ?: ಎಪ್‌ಸ್ಟೀನ್ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ
ಇಸ್ರೇಲ್‌ನ ಟೆಲ್ ಅವೀವ್ ಉಪನಗರಗಳಾದ ಬಾಟ್ ಯಾಮ್ ಮತ್ತು ರಮತ್ ಗಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ನೂರಾರು ಕಟ್ಟಡಗಳು ಹಾನಿಗೊಳಗಾದವು. ಕೆಲವು ಕಟ್ಟಡಗಳು ತೀವ್ರ ಹಾನಿಗೊಳಗಾದ ಕಾರಣ ನಂತರ ಅವುಗಳನ್ನು ಕೆಡವಬೇಕಾಯಿತು. ಟೆಲ್ ಅವೀವ್ ನಗರದಲ್ಲೇ ವಿವಿಧ ದಾಳಿ ಪ್ರದೇಶಗಳಲ್ಲಿ ಸುಮಾರು 480 ಕಟ್ಟಡಗಳು ಹಾನಿಗೀಡಾಗಿದ್ದವು. ಇರಾನ್‌ನ ಕ್ಷಿಪಣಿ ದಾಳಿಗಳು, ಇಸ್ರೇಲ್‌ನ ಪ್ರಮುಖ ಸಾರ್ವಜನಿಕ, ಸೈನಿಕ ಮತ್ತು ಇಂಧನ ಮೂಲಸೌಕರ್ಯಗಳಿಗೆ ಗಂಭೀರ ನಷ್ಟ ಉಂಟು ಮಾಡಿದ್ದವು. ಬೆರ್ ಶೇವಾದ ಸೋರೋಕಾ ಮೆಡಿಕಲ್ ಸೆಂಟರ್ ಹಾನಿಗೊಂಡು ರಾಸಾಯನಿಕ ಸೋರಿಕೆ ಸಂಭವಿಸಿತು ಮತ್ತು ವಿಭಾಗವನ್ನು ಖಾಲಿ ಮಾಡಲಾಯಿತು. ರೆಹೋವೋಟ್‌ನ ವೈಜ್‌ಮನ್ ವಿಜ್ಞಾನ ಸಂಸ್ಥೆಯ ಸುಮಾರು 90% ಕಟ್ಟಡಗಳು ಹಾನಿಗೊಂಡು ಹಲವಾರು ಪ್ರಯೋಗಾಲಯಗಳು ನಾಶವಾದವು. ಸ್ವತಂತ್ರ ವರದಿಗಳ ಪ್ರಕಾರ, ಕೆಲವು IDF ಸೈನಿಕ ತಾಣಗಳು ಮತ್ತು ವಾಯುನೆಲೆಗಳು ದಾಳಿಗೆ ಒಳಗಾದವು. ಹೈಫಾ ಬೇಯ ಬಜಾನ್ ತೈಲ ಶೋಧನಾ ಘಟಕ ಮತ್ತು ಪೈಪ್‌ಲೈನ್‌ಗಳು ಹಾನಿಗೊಂಡು, ಇಸ್ರೇಲ್‌ನ ಇಂಧನ ಮತ್ತು ಮೂಲಸೌಕರ್ಯ ವ್ಯವಸ್ಥೆಗೆ ಗಂಭೀರ ವ್ಯತ್ಯಯ ಉಂಟಾಗಿತ್ತು.




