ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಗುಂಡಿಕ್ಕಲು ಆದೇಶಿಸಿದ್ದು, ಸಾವಿನ ಸಂಖ್ಯೆ ಏರಿಕೆಯಾಗಿದೆ. ಖಮೇನಿ ಆದೇಶದಂತೆ ಅಧಿಕಾರಿಗಳು ಪ್ರತಿಭಟನಾಕಾರರ ಹತ್ಯೆ ಮಾಡಿದ್ದಾರೆ ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ಗೆ ಹತ್ತಿರವಿರುವ ಮೂಲಗಳು, ಅಧ್ಯಕ್ಷೀಯ ಕಚೇರಿಯ ಅಧಿಕಾರಿಗಳು, ಮಶಾದ್, ಕೆರ್ಮನ್‌ಶಾ ಮತ್ತು ಇಸ್ಫಹಾನ್‌ನಲ್ಲಿರುವ ಐಆರ್‌ಜಿಸಿ-ಸಂಬಂಧಿತ ಮೂಲಗಳು, ಹಾಗೆಯೇ ಪ್ರತ್ಯಕ್ಷದರ್ಶಿಗಳು, ಆಸ್ಪತ್ರೆ ವರದಿ ಮತ್ತು ಹಲವಾರು ನಗರಗಳಾದ್ಯಂತ ವೈದ್ಯರು, ದಾದಿಯರಿಂದ ಪಡೆದ ಮಾಹಿತಿಯನ್ನು ಆಧರಿಸಿ ಈ ವರದಿ ಮಾಡಲಾಗಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಇರಾನ್ ಪ್ರತಿಭಟನೆ : ಭದ್ರತಾ ಸಿಬ್ಬಂದಿ ಸೇರಿದಂತೆ 2000 ಜನರ ಸಾವು
ಇರಾನ್‌ನಲ್ಲಿ ಸುಮಾರು 2,000 ಮಂದಿ ಸಾವನ್ನಪ್ಪಿದ್ದು, 10,700ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಆದರೂ ಇರಾನ್ ಸರ್ಕಾರ ಅಧಿಕೃತ ಸಾವುನೋವುಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಇಂಟರ್‌ನೆಟ್ ಸ್ಥಗಿತಗೊಂಡಿದ್ದು, ವರದಿ ಮಾಡಲು ನಿರ್ಬಂಧಿಸಲಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ಹೇಳಿದೆ.
ಹಣದುಬ್ಬರ ಏರಿಕೆ ಮತ್ತು ಬೆಲೆ ಏರಿಕೆಯಿಂದಾಗಿ ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಡಾಲರ್ ಎದುರು ರಿಯಾಲ್ ಭಾರೀ ಕುಸಿದಿದೆ. ಇಂಧನ ಸಬ್ಸಿಡಿಗಳಿಗೆ ಕಡಿತ ಮಾಡಲಾಗಿದೆ. ಇದರಿಂದಾಗಿ ಜನರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಇರಾನ್‌ನಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆದರೆ ಪ್ರತಿಭಟನಾಕಾರರ ಹತ್ಯೆಗೆ ಖಮೇನಿ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.





