ಕಳೆದ ಎರಡು ವರ್ಷಗಳಿಂದ ಗಾಜಾ ಮೇಲೆ ಇಸ್ರೇಲ್ ನಿರಂತರ ಕ್ರೌರ್ಯ ಎಸಗುತ್ತಿದೆ. ಇದೀಗ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸಲಾಗಿದೆ ಎಂದು ಟ್ರಂಪ್ ಬಹಿರಂಗವಾಗಿ ಹೇಳಿದ್ದರು. ಆದರೆ, ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಗುರುತಿಸಲಾಗದ ಗಡಿಯಲ್ಲಿ ಹಳದಿ ರೇಖೆ (ಯೆಲ್ಲೋ ಲೈನ್) ದಾಟಿದ ಬಸ್ ಮೇಲೆ ಇಸ್ರೇಲ್ ಅಕ್ರಮಣಕಾರಿ ಗುಂಡಿನ ದಾಳಿ ನಡೆಸಿದೆ. ಬಸ್‌ನಲ್ಲಿದ್ದ ಒಂದೇ ಕುಟುಂಬದ 9 ಮಂದಿಯನ್ನು ಹತ್ಯೆಗೈದಿದೆ.
ಘಟನೆ ಬಗ್ಗೆ ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿ ವಕ್ತಾರ ಮಹ್ಮೂದ ಬಸ್ಸಾಲ್ ಮಾಹಿತಿ ನೀಡಿದ್ದಾರೆ. ಗಾಜಾದ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಗಳು ಮೃತದೇಹಗಳನ್ನು ಬಸ್‌ನಿಂದ ಹೊರತೆಗಿದ್ದಾರೆ ಎಂದು ತಿಳಿಸಿದ್ದಾರೆ.
ಮೃತರನ್ನು ಅಬು ಶಾಬಾನ್ ಮತ್ತು ಅವರ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಅವರು ಜೈತುನ್ ಪ್ರದೇಶದಲ್ಲಿ ತಮ್ಮ ಮನೆಯನ್ನು ಹುಡುಕಲು ಪ್ರಯತ್ನಿಸುತ್ತಿದ್ದಾಗ, ಅವರ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಬಸ್ಸಾಲ್ ಹೇಳಿದ್ದಾರೆ.
ಘಟನೆ ಬಗ್ಗೆ ಪ್ರಕ್ರಿಯಿಸಿರುವ ಇಸ್ರೇಲ್ ಮಿಲಿಟರಿ, “ಕದನ ವಿರಾಮ ಘೋಷಣೆಯ ಬಳಿಕ ಗಡಿಪ್ರದೇಶದ ‘ಹಳದಿ ರೇಖೆ’ ಬಳಿ ಇಸ್ರೇಲಿ ಪಡೆಗಳು ಬೀಡುಬಿಟ್ಟಿದ್ದಾರೆ. ಆ ಪ್ರದೇಶದಲ್ಲಿ ಬಸ್‌ವೊಂದು ‘ಹಳದಿ ರೇಖೆ’ಯನ್ನು ದಾಟಿದೆ. ಅನುಮಾನಸ್ಪದವಾಗಿ ಬರುತ್ತಿದ್ದ ಬಸ್‌ಗೆ ಎಚ್ಚರಿಕೆ ನೀಡಲು ಸೇನೆಯು ಗುಂಡು ಹಾರಿಸಿದೆ. ಆದರೂ, ವಾಹನವು ಬೆದರಿಕೆಯೊಡ್ಡವ ರೀತಿಯಲ್ಲಿ ಸೈನಿಕರತ್ತ ಬರುತ್ತಲೇ ಇತ್ತು. ಹೀಗಾಗಿ, ಸೈನಿಕರು ತಮ್ಮ ರಕ್ಷಣೆಗಾಗಿ ಬಸ್ ಮೇಲೆ ದಾಳಿ ನಡೆಸಿದ್ದಾರೆ” ಎಂದು ಹೇಳಿಕೊಂಡಿದೆ.
ಕದನ ವಿರಾಮ ಘೋಷಣೆಯಾದ ಬಳಿಕ, ಲಕ್ಷಾಂತರ ಪ್ಯಾಲೆಸ್ತೀನಿಯರು ತಮ್ಮ ಪ್ರದೇಶಗಳಿಗೆ ಮರಳುತ್ತಿದ್ದಾರೆ. ಅಲ್ಲಿದ್ದ ತಮ್ಮ ಮನೆಗಳನ್ನು ಹುಡುಕುತ್ತಿದ್ದಾರೆ.




