ಕಳೆದ ಮೂರು ವರ್ಷಗಳಿಂದ ಗಾಜಾ ಮೇಲೆ ಇಸ್ರೇಲ್ ಕ್ರೌರ್ಯ ಮೆರೆಯುತ್ತಿದೆ. ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ 12 ಲಕ್ಷಕ್ಕೂ ಹೆಚ್ಚು ಮಕ್ಕಳು ಆಹಾರವಿಲ್ಲದೆ ಬಳಲುತ್ತಿದ್ದಾರೆ. 58,554 ಮಕ್ಕಳು ಅನಾಥರಾಗಿದ್ದಾರೆ. 20,179 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.
ಬುಧವಾರ, ಗಾಜಾ ಆರೋಗ್ಯ ಸಚಿವಾಲಯವು ಗಾಜಾ ಸಾವು-ನೋವುಗಳ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಗಾಜಾದ 9,14,102 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. 5,580 ಮಕ್ಕಳು ವೈದ್ಯಕೀಯ ನೆರವು ಮತ್ತು ಸ್ಥಳಾಂತರಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಹೇಳಿದೆ.
“ಗಾಜಾದಲ್ಲಿ ಪ್ರತಿ 52 ನಿಮಿಷಗಳಿಗೆ ಒಂದು ಮಗು ಹತ್ಯೆಯಾಗುತ್ತಿದೆ. ಈವರೆಗೆ ಸಾವನ್ನಪ್ಪಿದ 20,179 ಮಕ್ಕಳಲ್ಲಿ 1,029 ಮಕ್ಕಳು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 5,031 ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ 420 ಮಕ್ಕಳು ಹುಟ್ಟದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ವಿವರಿಸಿದೆ.
ಹುಟ್ಟಿದ ಮಕ್ಕಳಿಗೆ ಲಸಿಕೆ ಹಾಕುವ ಪ್ರಮಾಣವು 2022ರಲ್ಲಿ 98.7% ಇತ್ತು. 2025ರಲ್ಲಿ 80%ಗೆ ಇಳಿದಿದೆ. ಪರಿಣಾಮವಾಗಿ, 1,102 ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿ ಗಮನಿಸಿದೆ.
ಗಾಜಾದಲ್ಲಿ ಇಸ್ರೇಲ್ ‘ನರಮೇಧ’ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ‘ಸ್ವತಂತ್ರ ಅಂತರರಾಷ್ಟ್ರೀಯ ವಿಚಾರಣಾ ಆಯೋಗ’ವು ತೀರ್ಮಾನಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾಗೆ ’20-ಅಂಶ’ ಯೋಜನೆ ಪ್ರಸ್ತಾಪಿಸಿದ್ದಾರೆ. ಇದೆಲ್ಲದರ ನಡುವೆಯೂ, ಗಾಜಾ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರೆಸಿದೆ.
ಈಜಿಪ್ಟ್‌ನಲ್ಲಿ ಹಮಾಸ್ (ಗಾಜಾ) ಮತ್ತು ಇಸ್ರೇಲ್ ನಡುವೆ ಕದನ ವಿರಾಮದ ಮಾತುಕತೆಗಳು ನಡೆಯುಯುತ್ತಿರುವ ಸಮಯದಲ್ಲಿಯೇ ಅಕ್ಟೋಬರ್ 8ರಂದು ಗಾಜಾ ಪಟ್ಟಿಯಲ್ಲಿ ಜೋರಾದ ಸ್ಫೋಟಗಳು ಕೇಳಿಬಂದಿವೆ. ಟನ್‌ಗಟ್ಟಲೆ ಸ್ಫೋಟಕಗಳನ್ನು ತುಂಬಿದ ರಿಮೋಟ್ ನಿಯಂತ್ರಿತ ಶಸ್ತ್ರಸಜ್ಜಿತ ವಾಹನಗಳನ್ನು ದಾಳಿಯಲ್ಲಿ ಬಳಸಲಾಗಿದೆ ಎಂದು ಅಲ್-ಜಜೀರಾ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
2023ರ ಅಕ್ಟೋಬರ್ 7ರಂದು ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ ಈವರೆಗೆ ಗಾಜಾದಲ್ಲಿ 67,173 ಜನರು ಸಾವನ್ನಪ್ಪಿದ್ದಾರೆ. 1,69,780 ಜನರು ಗಾಯಗೊಂಡಿದ್ದಾರೆ. ಸಾವುಗಳಲ್ಲಿ 20,179 (30%) ಮಕ್ಕಳು, 10,427 (16%) ಮಹಿಳೆಯರು, 4,813 (7%) ವೃದ್ಧರು ಹಾಗೂ 31,754 (47%) ಪುರುಷರು. ಇದಲ್ಲದೆ, 4,900 ಜನರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.
ಗಾಜಾ ಆರೋಗ್ಯ ಇಲಾಖೆಯ ಪ್ರಕಾರ, 2025ರ ಒಂಬತ್ತು ತಿಂಗಳಲ್ಲಿ 4,163 ಗರ್ಭಪಾತಗಳು, 2,415 ಅಕಾಲಿಕ ಜನನಗಳು ಹಾಗೂ 274 ನವಜಾತ ಶಿಶುಗಳ ಸಾವುಗಳು ವರದಿಯಾಗಿವೆ ಎಂದು ತಿಳಿಸಿದೆ.
ಅಪೌಷ್ಟಿಕತೆಯಿಂದ ಸಂಭವಿಸಿದ ಸಾವುಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅಪೌಷ್ಟಿಕತೆ ಕಾರಣದಿಂದಾಗಿ 2023ರಲ್ಲಿ 4 ಸಾವುಗಳು ಮಾತ್ರವೇ ದಾಖಲಾಗಿದ್ದವು. ಆದರೆ, 2025ರಲ್ಲಿ ಸಾವುಗಳ ಸಂಖ್ಯೆ 408ಕ್ಕೆ ಏರಿಕೆಯಾಗಿದೆ. ಈ ಸಾವುಗಳಲ್ಲಿ 157 (34.1%) ಮಕ್ಕಳು, 188 (40.8%) ವೃದ್ಧರು, 44 (9.5%) ಮಹಿಳೆಯರು ಹಾಗೂ 72 (15.6%) ಪುರುಷರಾಗಿದ್ದಾರೆ.




